ಅಭಿವೃದ್ಧಿ ವಿರುದ್ಧ ನಮ್ಮ ಹೋರಾಟ ಅಲ್ಲ ಶುದ್ಧೀಕರಣ ಘಟಕ ನಗರದ ಹಿತದೃಷ್ಟಿಯಿಂದ ಆಗಬೇಕು ಆದರೆ ಅದು ಜನ ವಾಸ ಮಾಡುವ ಸ್ಥಳದಿಂದ ದೂರ ಇರಬೇಕು ಜನರ ಬದುಕು ಬಲಿಕೊಟ್ಟು ಅಭಿವೃದ್ಧಿ ಮಾಡುತ್ತೇವೆ ಎಂಬುವುದು ಮೂರ್ಖತನದ ಪರಮಾವಧಿ ಎಂದು ಹೋರಾಟಗಾರ ಸಮಿತಿ ಸಹ ಸಂಚಾಲಕ ಸುರೇಶ್ ಕಲ್ಲಾಗರ ಹೇಳಿದರು.
ಉದ್ದೇಶಿತ ಸ್ಥಳದಲ್ಲಿ ನೂರಾರು ಕುಟುಂಬಗಳು ನೂರಾರು ವರ್ಷಗಳಿಂದ ಬದುಕು ಸಾಗಿಸುತ್ತಿದ್ದಾರೆ. ಅವರ ಮನೆಗಳ ಹತ್ತಿರದಲ್ಲೇ ಸ್ಥಳೀಯರ ವಿರೋಧದ ನಡುವೆಯೂ ಮುಖ್ಯ ಘಟಕ ಮಾಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿರುವುದರ ಹಿಂದೆ ಕೆಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎಂದು ಹೋರಾಟ ಸಮಿತಿ ಸಹಸಂಚಾಲಕ ಸುರೇಶ್ ಕಲ್ಲಾಗರ ಪ್ರಶ್ನೆ ಮಾಡಿದರು.

ಅವರು ಕುಂದಾಪುರ ಪುರಸಭೆ ಹುಂಚಾರ್ ಬೆಟ್ಟು ವಾರ್ಡ್ ಬೆಟ್ಟಾಗರದ ಜನವಸತಿ ಪ್ರದೇಶದಲ್ಲಿ ಮಾಡಲುದ್ದೇಶಿಸಿರುವ ನಗರದ ಕೊಳಚೆ ತ್ಯಾಜ್ಯ ಶುದ್ಧೀಕರಿಸಿ ವಿಸರ್ಜಿಸಲ್ಪಡುವ ಮುಖ್ಯ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಕೊಳಚೆ ಶುದ್ಧೀಕರಣ ಘಟಕ ಸ್ಥಳಾಂತರಕ್ಕಾಗಿ ಹೋರಾಟ ಸಮಿತಿ ನೇತೃತ್ವದಲ್ಲಿ ಪುರಸಭೆ ಎದುರು ನಡೆದ ಪ್ರತಿಭಟನೆಯಲ್ಲಿ ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿದರು.
ನಿಜವಾಗಿಯೂ ಪುರಸಭೆಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿ ಹೆಚ್ಚುವರಿ ಹಣ ಮಂಜೂರು ಮಾಡಿಸಲು ಪ್ರಯತ್ನಿಸಲಿ ಅದು ಜನಪರ ಕೆಲಸ ಆಗುತ್ತದೆ ಈ ಹಿಂದೆಯೂ ಜನರು ಸ್ಥಳಾಂತರ ಮಾಡಬೇಕು ಎಂದು ಪ್ರತಿಭಟನೆ ಮಾಡಿದಾಗ ರಾಜ್ಯ ಸರ್ಕಾರ ಹೆಚ್ಚುವರಿ ಹಣ ಕೊಡಲು ಒಪ್ಪಿತ್ತು ಅನಂತರ ಅದು ನೆನೆಗುದಿಗೆ ಬಿದ್ದಿತ್ತು ಈಗಲೂ ಅಂತಹ ಪ್ರಯತ್ನ ಮಾಡಿ ಸ್ಥಳೀಯ ಜನರನ್ನು ರಕ್ಷಿಸಲು ಪುರಸಭೆ ಮುಂದಾಗಬೇಕು.
ಪುರಸಭೆ ಜನರ ಸಮಸ್ಯೆಗಳನ್ನು ಬಗೆಹರಿಸಲು ಕೆಲಸ ಮಾಡಬೇಕೆ ಹೊರತು ಪುರಸಭೆಯೇ ಜನರಿಗೆ ಸಮಸ್ಯೆ ಆಗಬಾರದು ಎಂದು ಹೇಳಿದರು.
ಸಮಿತಿ ಸಂಚಾಲಕ ರವಿ ವಿ ಎಂ ಮಾತನಾಡಿ, ಬೆಟ್ಟಾಗರದ ಸ್ಥಳೀಯರು ಶುದ್ಧೀಕರಣದ ಮುಖ್ಯ ಘಟಕವನ್ನು 500 ಮೀಟರ್ ಮುಂದಕ್ಕೆ ಸ್ದಳಾಂತರಗೊಳಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಪುರಸಭೆ ಜನರನ್ನು ರಕ್ಷಿಸುವ ಕೆಲಸ ಮಾಡಿಲ್ಲ, ಬದಲಾಗಿ ಅಲ್ಲಿಯೇ ಮಾಡುತ್ತೇವೆ ಎಂದು ತೀರ್ಮಾನ ಮಾಡಿರುವುದು ಒಪ್ಪಲು ಸಾಧ್ಯವಿಲ್ಲ ಹೋರಾಟ ತೀವ್ರ ಗೊಳಿಸಬೇಕಾಗಿದೆ ಎಂದು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಹೇಳಿ ಸ್ವಾಗತಿಸಿದರು.

ಸಹಸಂಚಾಲಕ ಮಹೇಂದ್ರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಅನ್ಯಾಯ ಆದಾಗ ಪ್ರತಿಭಟಿಸುವ ಹಕ್ಕು ಇದೆ, ಅದೇ ರೀತಿಯಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವುದು ಆಡಳಿತಗಾರರ ಕರ್ತವ್ಯ ಆಗಬೇಕು. ಶುದ್ಧೀಕರಣ ಘಟಕ ಸ್ಥಳಾಂತರ ಮಾಡಲು ಜಾಗ ತೋರಿಸಿದ್ದೇವೆ ಆ ಜಾಗದಲ್ಲಿ ಆಕ್ಷೇಪಣೆಗಳೂ ಇರುವುದಿಲ್ಲ ಆದರೆ ಪುರಸಭೆ ಒಪ್ಪಿಸಿರುವುದು ಖಂಡನೀಯ ಎಂದು ಹೇಳಿದರು.
ಪ್ರತಿಭಟನೆ ಉದ್ದೇಶಿಸಿ ಸ್ಥಳೀಯ ಪುರಸಭಾ ಸದಸ್ಯ ಶೇಖರ ಪೂಜಾರಿ, ಹೋರಾಟ ಸಮಿತಿಯ ಚಂದ್ರಶೇಖರ ವಿ ಮಾತನಾಡಿದರು.
ನೇತ್ರತ್ವವನ್ನು ವಿಶ್ವನಾಥ್ ಗರಡಿ, ಪ್ರಕಾಶ್ ಬೆಟ್ಟಾಗರ,ಶೇಖರ ದೋಣಿ ಮನೆ ಉದಯ ಟೈಲರ್,ಸಂತೋಷ ಡಿ,ಮಂಜುನಾಥ ವಿ ಎಸ್, ಕ್ರಷ್ಣ ಕೋಣಿ, ಸುರೇಶ್ ಮೂಡುಹಿತ್ಲು, ಗಿರಿಜ, ಯಶೋಧ ಮೊದಲಾದವರಿದ್ದರು.
ಪ್ರತಿಭಟನೆಗೂ ಮುನ್ನ ನೂರಾರು ಮಂದಿ ಸ್ಥಳೀಯರು ಮೆರವಣಿಗೆ ಮೂಲಕ ಪುರಸಭೆಗೆ ಆಗಮಿಸಿದರು. ಮನವಿಯನ್ನು ಪುರಸಭಾ ಮುಖ್ಯಾಧಿಕಾರಿ, ಹಾಗೂ ಅಧ್ಯಕ್ಷರಿಗೆ ನೀಡಲಾಯಿತು.