ಮೇ 01 ರಂದು ರಾತ್ರಿ ಉಡುಪಿ ಜಿಲ್ಲೆಯ ಆತ್ರಾಡಿಯಲ್ಲಿ ಆಟೋ ಚಾಲಕ ಅಬೂಬಕರ್ ಅವರ ಮೇಲೆ ಕೆಲ ಸಮಾಜಘಾತಕರು ನಡೆಸಿದ ಕೊಲೆ ಪ್ರಯತ್ನ ವನ್ನು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ. ಘಟನೆ ನಡೆದ ಬೆನ್ನಲ್ಲೇ ಹಿರಿಯಡ್ಕ ಪೋಲೀಸರು ಕ್ಷಿಪ್ರಗತಿಯಲ್ಲಿ ಆರೋಪಿಗಳನ್ನು ಬಂಧಿಸಿರುವ ಕ್ರಮವನ್ನು ಸಿಪಿಎಂ ಶ್ಲಾಘಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಈ ಹತ್ಯೆಯ ಯತ್ನವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಓರ್ವ ವ್ಯಕ್ತಿಯ ಹತ್ಯೆ ಘಟನೆಗೆ ಪ್ರತೀಕಾರವೆಂಬಂತೆ ಆಗಿದೆ ಎಂದು ಹೇಳಲಾಗುತ್ತಿದೆ.
ಆದರೆ ಪಕ್ಷದ ಪ್ರಕಾರ ಮಂಗಳೂರಿನಲ್ಲಿ ನಡೆದ ಕೊಲೆಗೂ ಹಾಗೂ ಬಡ ರಿಕ್ಷಾ ಚಾಲಕ ಅಬೂಬಕರಿಗೂ ಯಾವುದೇ ಸಂಬಂಧ ಇರುವುದಿಲ್ಲ ಆದಾಗ್ಯೂ ಮಂಗಳೂರಿನಲ್ಲಿ ನಡೆದ ಕೊಲೆಯ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಪಕ್ಷ ಆಗ್ರಹಿಸುತ್ತದೆ ಎಂದು ಹೇಳಿದರು.
ಉಡುಪಿಯ ಆಟೋ ಚಾಲಕನ ಮೇಲೆ ನಡೆಸಲಾದ ಕೊಲೆ ಯತ್ನವು ಉಡುಪಿ ಜಿಲ್ಲೆ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಹಿಂದೂ ಮುಸ್ಲಿಂರ ಮಧ್ಯೆ ದ್ವೇಷ ಹರಡಲು ಕೆಲವು ಕಿಡಿಗೇಡಿಗಳು ನಡೆಸಿದ ಪ್ರಯತ್ನವಾಗಿದೆ ಆದುದರಿಂದ ಉಡುಪಿ ಜಿಲ್ಲೆಯಲ್ಲಿ ಸೌಹಾರ್ದತೆಯಿಂದ ಬದುಕುತ್ತಿರುವ ಹಿಂದೂ ಮುಸ್ಲಿಂರು ಯಾವುದೇ ವದಂತಿಗಳಿಗೆ ಬಲಿಯಾಗದೇ ಶಾಂತಿ ಕಾಪಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತದೆ. ರಾಜ್ಯ ಸರ್ಕಾರವು ಇಂತಹ ಕೃತ್ಯಗಳನ್ನು ನಡೆಸುತ್ತಾ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಎಲ್ಲ ಶಕ್ತಿ ಮತ್ತು ವ್ಯಕ್ತಿಗಳ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಹೇಳಿದರು.