ಬಹುಕೋಟಿ ವಂಚನೆಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣ ರೈತರ ಶ್ರಮದ ಲೂಟಿಯಾಗಿದೆ ಅಂದರೆ ಅದು ಅಂತಿಮವಾಗಿ ಜನರ ಹಣವಾಗಿದೆ ಆದುದರಿಂದ ಉಡುಪಿ ಜಿಲ್ಲಾ ರೈತ ಸಂಘ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯನ್ನು ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಜನರನ್ನು ಒಂದುಗೂಡಿಸಿ ಜನಾಂದೋಲನವಾಗಿ ರೂಪಿಸಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಅವರು ಬ್ರಹ್ಮಾವರದಲ್ಲಿ ನಡೆದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಹುಕೋಟಿ ವಂಚನೆ ಮತ್ತು ಅದರ ವಿಳಂಭ ನೀತಿ ಖಂಡಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಬೆಂಬಲಿಸಿ ಮಾತನಾಡಿದರು.
ಸಕ್ಕರೆ ಕಾರ್ಖಾನೆಯ ಸಾರ್ವಜನಿಕ ಆಸ್ತಿ ಬಹುಕೋಟಿ ಹಣ ಕೆಲವು ವ್ಯಕ್ತಿಗಳು ಲಪಟಾಯಿಸದ್ದಾರೆ ಎಂದು ದೂರು ನೀಡಿದ್ದರೂ ತನಿಖೆಯ ಪ್ರಗತಿ ವಿಳಂಬ ಆಗುತ್ತಿರುವುದಲ್ಲದೇ ದರೋಡೆ ಮಾಡಿದವರು ಕಾನೂನಿಗಿಂತ ದೊಡ್ಡವರು ಎಂಬ ಸಂದೇಶ ಹೋಗುತ್ತಿರುವುದು ಕಾನೂನಿನ ಅಣಕ ಹಾಗೂ ಬೇಲಿಯೇ ಎದ್ದು ಹೊಲ ಮೇಯ್ದಂತಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಂಚಾಲಕ ಚಂದ್ರಶೇಖರ ವಿ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕ್ರಷ್ಣ ಶೆಟ್ಟಿ, ಎಚ್ ನರಸಿಂಹ, ರಾಜೀವ ಪಡುಕೋಣೆ, ರಾಮಚಂದ್ರ ನಾವಡ, ನಾಗರತ್ನ ನಾಡ, ಶೋಭ ನಾಡ, ಶಶಿಧರ ಗೊಲ್ಲ, ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಶೆಟ್ಟಿಗಾರ್, ಕವಿರಾಜ್ ಎಸ್, ರವಿ ವಿ ಎಂ, ಮೊದಲಾದವರಿದ್ದರು. ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರಾದ ಪ್ರತಾಪ ಚಂದ್ರ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.
