ಅಗಷ್ಟೇ ಜನಿಸಿದ್ದ ನವಜಾತ ಶಿಶುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿರುವ ಅಚ್ಚರಿಯ ಘಟನೆ ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವರದಿಯಾಗಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಹಿಳೆಯೊಬ್ಬರು ತಮ್ಮ 2ನೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಯಾವುದೇ ತೊಂದರೆ ಇಲ್ಲದೆ, ಸೆಪ್ಟೆಂಬರ್ 23ರಂದು ಹೆರಿಗೆಯಾಗಿ, ಗಂಡು ಮಗು ಜನಿಸಿತ್ತು. ಆದರೆ, ಮಗುವಿನ ದೇಹದಲ್ಲಿ ಕೆಲ ಬದಲಾವಣೆಗಳು ಕಂಡು ಬಂದಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.
ಶಿಶುವಿನ ದೇಹದಲ್ಲಿ ಬದಲಾವಣೆಗಳು ಕಾಣಿಸಿದ್ದರಿಂದ, ಆ ಮಗುವನ್ನು ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ, ಮಗುವಿನ ಹೊಟ್ಟೆಯಲ್ಲಿ ಬೆನ್ನುಹುರಿ ಇರುವ ಭ್ರೂಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಹುಟ್ಟುವಾಗಲೇ ನವಜಾತ ಶಿಶುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಬೆಳೆಯುವುದನ್ನು ವೈದ್ಯಕೀಯ ಭಾಷೆಯಲ್ಲಿ Fetus in fetu ಎಂದು ಕರೆಯಲಾಗುತ್ತದೆ. ಇಂತಹ ಘಟನೆಗಳು ಈವರೆಗೆ ವಿಶ್ವದಾದ್ಯಂತ 200 ಪ್ರಕರಣಗಳು ದಾಖಲಾಗಿರಬುದು ಎಂದು ಹೇಳಲಾಗಿದೆ.
ಭ್ರೂಣದ ಅಂಗಗಳು ಜೀವಂತವಾಗಿಲ್ಲ. ಅಂತಹ ಭಾಗಗಳು ಮಗುವಿನ ದೇಹದಲ್ಲಿ ಬೇರೆಡೆ ಇರುವ ಸಾಧ್ಯತೆಯಿದೆ. ನವಜಾತ ಶಿಶುವಿನ ದೇಹದೊಳಗೆ ಅಸಹಜ ದ್ರವ್ಯರಾಶಿ ಬೆಳೆಯುವ ಅಪರೂಪದ ಸ್ಥಿತಿಯಾಗಿದೆ. ಈ ದ್ರವ್ಯರಾಶಿಯು ತಲೆಬುರುಡೆ, ಬೆನ್ನು, ಬಾಯಿಯ ಒಳಭಾಗದಂತಹ ಸ್ಥಳಗಳಲ್ಲಿ ಕಾಣಿಸಿಕೊಳ್ಳಬಹುದು. ಆದರೆ, ಇವು ಎಂದಿಗೂ ಸಂಪೂರ್ಣವಾಗಿ ಬೆಳವಣಿಗೆಯಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.