ಕೆಎಸ್ಆರ್ಟಿಸಿ ಬಸ್ ಚಾಲಕ ಅಬ್ದುಲ್ ರಫಿ ಆನೆಹೊಸೂರ ಅವರನ್ನು ವಿನಾಕಾರಣ ಅಮಾನತುಗೊಳಿಸಿದ್ದನ್ನು ಖಂಡಿಸಿ ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಲಿಂಗಸುಗೂರು ಬಸ್ ಡಿಪೋ ಕಚೇರಿ ಮುಂಭಾಗದಲ್ಲಿ ನಡೆದಿದೆ.
ಬಸ್ ಚಾಲಕ ಅಬ್ದುಲ್ ರಫಿ ಆನೆಹೊಸುರ ಅವರು ಸಮಯ ಪಾಲನೆ ಮಾಡುತ್ತಿಲ್ಲ, ಅಧಿಕಾರಿಗಳಿಗಳೊಂದಿಗೆ ಅಸಭ್ಯ ವರ್ತನೆ ಸೇರಿದಂತೆ ಹಲವು ಆರೋಪದಡಿ ಅವರನ್ನು ಅಮಾನತು ಮಾಡಲಾಗಿತ್ತು.
ಈ ಕುರಿತು ಚಾಲಕ ಅಬ್ದುಲ್ ರಫಿ ಮಾತನಾಡಿ, ‘ಡಿಪೊ ವ್ಯವಸ್ಥಾಪಕರ ನಡತೆ ಸರಿ ಇಲ್ಲ, ಇಲ್ಲದ ಸಲ್ಲದ ಸುಳ್ಳು ಆರೋಪ ಮಾಡಿ ಕಿರುಕುಳ ನೀಡುತ್ತಾರೆ. ಇವರ ಆಡಳಿತದಲ್ಲಿ ಒಂದು ವರ್ಷದಲ್ಲಿ ಸುಮಾರು 23 ಸಿಬ್ಬಂದಿಗಳನ್ನು ಅಮಾನತು ಮಾಡಿದ್ದಾರೆ. ಇದರಿಂದ ನೌಕರರು ಕುಟುಂಬ ನಿರ್ವಹಿಸಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದ್ದಾರೆ.
ʼಓರ್ವ ಬಸ್ ಚಾಲಕ 33 ಸಾವಿರ ಕಿ ಮೀ. ಬಸ್ ಓಡಿಸುವ ನಿಯಮ ಇದೆ. ಆದರೆ ಉತ್ತಮ ಅಧಿಕಾರಿ ಎನ್ನಿಸಿಕೊಳ್ಳಲು 50 ಸಾವಿರ ಕಿ.ಮೀ.ತನಕ ಬಸ್ ಕ್ರಮಿಸಬೇಕು ಎಂದು ನೌಕರರನ್ನು ದುಡಿಸಿಕೊಳ್ಳುತ್ತಾರೆ. ದಿನಕ್ಕೆ 330 ಕಿ.ಮೀ. ನಿಯಮ ಪ್ರಕಾರವಾದರೆ ಇವರು ಒಂದು ದಿನಕ್ಕೆ 430ಕಿ.ಮೀ. ಓಡಿಸಬೇಕು. ಹೀಗೆ ಅಗತ್ಯಕ್ಕಿಂತ ಹೆಚ್ಚಿನ ಕೆಲಸ ಮಾಡಿಸುಕೊಳ್ಳುತ್ತಾರೆ. ಹೇಳಿದಂತೆ ಮಾಡದಿದ್ದರೆ ಬೆದರಿಕೆ ಹಾಕುತ್ತಾರೆʼ ಎಂದು ಆರೋಪಿಸಿದ್ದಾರೆ.
ʼಈ ಬಗ್ಗೆ ಅನೇಕ ಸಲ ಮನವಿ ಮಾಡಿದರೆ ಇದೆಲ್ಲಾ ಸಮಸ್ಯೆ ಹೇಳಬಾರದು ಎಂದು ಗದರಿಸುತ್ತಾರೆ.ಇಲ್ಲಾಂದ್ರೆ ಅಮಾನತು ಮಾಡುವೆ ಎಂದು ಬೆದರಿಕೆ ಒಡ್ಡುತ್ತಾರೆ. ಇಂತಹ ಕಿರುಕುಳ ಎಲ್ಲಾ ಬಸ್ ಚಾಲಕರಿಗೆ, ಸಿಬ್ಬಂದಿಗಳು ಅನುಭವಿಸುತ್ತಿದ್ದಾರೆ. ಆದರೆ ನೌಕರಿ ಹೋಗುತ್ತದೆ ಎಂಬ ಹೆದರಿಕೆಯಿಂದ ಮೌನವಾಗಿದ್ದಾರೆ. ಈ ಕುರಿತು ತನಿಖೆ ನಡೆದರೆ ಬಸ್ ಡಿಪೊ ವ್ಯವಸ್ಥಾಪಕರು ಎಲ್ಲಾ ವಿಷಯಗಳು ಬಯಲಾಗುತ್ತವೆʼ ಎಂದರು.
ಈ ಕುರಿತು ಎಲ್ಲಾ ತನಿಖೆ ನಮಗೆ ದೊರಕಿಸಿಕೊಡಬೇಕು. ಅಮಾನತುಗೊಂಡ ಕಾರಣ ನಮ್ಮ ಕುಟುಂಬ ಬೀದಿಗೆ ಬಂದಿದೆ. ನಮ್ಮ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಹಸಿದ ಹೊಟ್ಟೆ ತಣಿಸುವ ʼರಿಶೈನ್ʼ ಯುವಕರು
ಕಾರ್ಮಿಕ ಮುಖಂಡ ರಮೇಶ್ ವೀರಾಪುರ ಮಾತನಾಡಿ, ‘ಕೆಲವು ತಿಂಗಳಿಂದ ಸಾರಿಗೆ ನೌಕರರ, ಸಿಬ್ಬಂದಿಗಳಿಗೆ ಡಿಪೋ ಮ್ಯಾನೇಜರ್ ಅವರು ಸಣ್ಣಪುಟ್ಟ ಕೆಲಸಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಗಮನಕ್ಕೆ ಬಂದಿತ್ತು. ಇವರ ಆಡಳಿತದಲ್ಲಿ ಸುಮಾರು 20ಕ್ಕೂ ಅಧಿಕ ಸಿಬ್ಬಂದಿಗೆ ಅಮಾನತು ಮಾಡಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಡಿಪೋ ವ್ಯವಸ್ಥಾಪಕರಿಗೆ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
