ಹೊಸಪೇಟೆ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ವಿಜಯನಗರ ವತಿಯಿಂದ ಮಹಿಳಾ ದಿನದ ಅಂಗವಾಗಿ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಮಹಿಳಾ ಘನತೆ ಬಹು ಆಯಾಮ ಚಿಂತನಾ ಗೋಷ್ಠಿಯಲ್ಲಿ ʼದೇವದಾಸಿ ಪದ್ಧತಿ-ಒಳ ಹೊರ ನೋಟʼ, ʼಯುವ ಜನರ ತಲ್ಲಣʼ ಹಾಗೂ ʼಮಹಿಳಾ ಪ್ರತಿನಿಧೀಕರಣʼದ ಕುರಿತು ಮೂವರು ವಿಚಾರವಾದಿಗಳು ವಿಚಾರ ಹಂಚಿಕೊಂಡರು.
ಪ್ರೊ. ಆರ್.ಸುನಂದಮ್ಮ ‘ದೇವದಾಸಿ ಪದ್ದತಿ ಒಳ-ಹೊರ ನೋಟ’ದ ಕುರಿತು ಮಾತನಾಡಿ, “ಔರಂಗಜೇಬನ ಅವಧಿಯಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆ ಆಯ್ತು. ದೆವದಾಸಿ ಮಹಿಳೆಯರಿಗೆ ಪುನಶ್ಚೇತನ ಕಲ್ಪಿಸಿಕೊಡಲಾಯಿತು. ವಿವಾಹಕ್ಕೆ ಅವಕಾಶ ಮಾಡಿಕೊಟ್ಟು, ಘನತೆವೆತ್ತ ಬದುಕಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಕೃಷ್ಣದೇವರಾಯನ ಕಾಲದಲ್ಲಿ ದೇವದಾಸಿ ಪದ್ಧತಿಗೆ ಮತ್ತೆ ಜಾರಿಯಾಯಿತು. ಬ್ರಿಟಿಷರು ಕೂಡ ಈ ಅನಿಷ್ಟ ಪದ್ಧತಿಯನ್ನು ತಡೆಗಟ್ಟಲು ಸಾಧ್ಯವಾಗಿರಲಿಲ್ಲ” ಎಂದರು.

ಆರ್. ರಾಮಕ್ಕ ‘ಯುವಜನರ ತಲ್ಲಣ’ ಕುರಿತು ಮಾತನಾಡಿ, “ತಳಸಮುದಾಯದ ಯುವಜನರ ಕುಟುಂಬಗಳು, ಮಕ್ಕಳು ಉನ್ನತ ಶಿಕ್ಷಣ ಪಡೆದು ಕುಟುಂಬಕ್ಕೆ, ಸಮುದಾಯಕ್ಕೆ ಆಧಾರ ಸ್ತಂಭವಾಗಲಿ ಎಂದು ಆಸಿಸುತ್ತಾರೆ. ಬದುಕು ಕಟ್ಟಿಕೊಳ್ಳಲು ಯುವಜನ ಅಭಿವೃದ್ಧಿಗೊಳಿಸುವ ಕೆಲಸ ಆಗಬೇಕು. ಯುವಜನರ ಬದುಕು ಶಕ್ತಿ ಆಗುವುದಕ್ಕಿಂತ ಮುಂಚೆ ಅವರ ತಲ್ಲಣಗಳನ್ನು ಗಮನಿಸಬೇಕು. ಅದಕ್ಕೆ ಪೂರಕವಾದ ಶಿಕ್ಷಣ ಬೇಕು. ಸಾಮಾಜಿಕ ಜಾಲತಾಣದಿಂದ ಯುವಜನರು ಹೊರಬರಬೇಕು. ಆರೋಗ್ಯಕರವಾದ ಓದು ಅವರ ರೂಢಿಯಾಗಬೇಕು. ಪ್ರಶ್ನಿಸುವ ಮನಸ್ಥಿತಿ ಇವತ್ತಿನ ಯವಜನತೆಯಲ್ಲಿ ಕಡಿಮೆ ಆಗಿದೆ” ಎಂದರು.

ಮಲ್ಲಿಗೆ ಸಿರಿಮನೆ ‘ಮಹಿಳಾ ಪ್ರತಿನಿಧಿಕರಣದ’ ಕುರಿತು ಮಾತನಾಡಿ, “ಇಪ್ಪತ್ತನಾಲ್ಕು ಸಾವಿರ ಕೋಟಿ ರೂ ಮಹಿಳಾ ಸಬಲೀಕರಣಕ್ಕೆ ಮೀಸಲಿಡಲಾಗಿದೆ. ಗ್ಯಾರಂಟಿ ಯೋಜನೆಯಿಂದ ಗ್ರಾಮೀಣ ಭಾಗದ ಮತ್ತು ಎಲ್ಲಾ ಭಾಗದ ಮಹಿಳೆಯರಿಗೂ ನೂರಕ್ಕೆ ನೂರರಷ್ಟು ಅನುಕೂಲವಾಗಿದೆ. ಸರಕಾರದ ಯಾವುದೇ ಯೋಜನೆ ಸಾರ್ವಜನಿಕ ನೀತಿಯಾಗಿರಬೇಕು. ಸರಕಾರದ ಹಾಗೂ ರಾಜಕೀಯ ನೀತಿಯಾಗಿರಬಾರದು. ಪಾಕಿಸ್ತಾನ, ಬಾಂಗ್ಲಾದೇಶದಂತ ರಾಷ್ಟ್ರಗಳನ್ನು ಗಮನಿಸಿದರೆ ಶಾಸಕಾಂಗ ಪ್ರಾತಿನಿಧ್ಯವಿದೆ. ಆದರೆ, ಭಾರತದ ಮಹಿಳೆಯರ ಪ್ರಾತಿನಿಧಿಕ ನೋಡಿದರೆ ತುಂಬ ಕೆಳಮಟ್ಟದಲ್ಲಿದೆ. ಅಮೆರಿಕದಲ್ಲಿ ಮತದಾನ ಮತ್ತು ಪ್ರಾತಿನಿಧಿಕ ಹಕ್ಕಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಮಹಿಳಾ ಪಕ್ಷ ಉದ್ಘಾಟನೆ ಮಾಡುತ್ತಾರೆ. ಆದರೆ, ಭಾರತದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಇದುವರೆಗೂ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಒಬ್ಬ ಮಹಿಳಾ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕವಾಗಿಲ್ಲ” ಎಂದು ಬೇಸರವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯನಗರ | ಮಹಿಳಾ ಶಿಕ್ಷಣಕ್ಕೆ ಪೆಟ್ಟು ಕೊಡಲು ಹುಟ್ಟಿದ ತಂತ್ರ ‘ಹಿಜಾಬ್’: ಶಾರದಾ ಉಡುಪಿ
ಗೋಷ್ಠಿಯ ಬಳಿಕ ಹೊಸಪೇಟೆಯ ಅಂಬೇಡ್ಕರ್ ವೃತ್ತದಲ್ಲಿ ಕಪ್ಪು ಉಡುಪಿನಲ್ಲಿ, ಮೇಣದ ಬತ್ತಿ ಹಿಡಿದು 1 ಗಂಟೆಗಳ ಮೌನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಮಹಿಳೆಯರ ಅತ್ಯಾಚಾರ, ಕೊಲೆ, ಧಾರ್ಮಿಕ ದಾಳಿಗಳನ್ನು ಗಾಂಧಿ, ಹಾಗೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಡಿ ಪ್ರತಿಭಟಿಸಲಾಯಿತು.

