ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆ ಇರುವಂತೆ ವಿಕಲಚೇತನರಲ್ಲಿಯೂ ಸಹ ಅಪಾರ ಪ್ರತಿಭೆಗಳಿವೆ, ವಿಕಲಚೇತನವು ತಮ್ಮ ದುರ್ಬಲತೆ ಎಂದು ಭಾವಿಸದೆ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸುರೇಖಾ ಹೇಳಿದರು.
ಮಂಗಳವಾರ ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರದಲ್ಲಿ ನಗರದ ನೆಹರು ಕ್ರೀಡಾಂಗಣದಲ್ಲಿ ಮುಂಬರುವ ವಿಶ್ವ ವಿಕಲಚೇತರ ದಿನಾಚರಣೆ ಅಂಗವಾಗಿ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಫರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಈ ಹಿಂದೆ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಅನೇಕ ವಿಕಲಚೇತನರು ತಮ್ಮ ಛಾಪನ್ನು ಮೂಡಿಸುವ ಮೂಲಕ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ತಾವುಗಳು ಸಹ ಅವರಂತೆ ಉನ್ನತ ಮಟ್ಟಕ್ಕೆ ತಲುಪಬೇಕು. ಕ್ರೀಡೆಯಲ್ಲಿ ಭಾಗವಹಿಸುವದರಿಂದ ಮಾನಸಿಕ ಒತ್ತಡ ಕಡಿಮೆಯಾಗುವದರ ಜೊತೆಗೆ ದೈಹಿಕ ಸದೃಢತೆ ಕಾಪಾಡಿಕೊಂಡು ಆರೋಗ್ಯವಂತ ಜೀವನ ಸಾಗಿಸಲು ಸಾಧ್ಯವಾಗುತ್ತದೆ” ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಮಹೇಶ ಬಿರಾದಾರ ಮಾತನಾಡಿ, “ಎಲ್ಲರೂ ಕೌಶಲ್ಯವೃದ್ಧಿ, ಆರ್ಥಿಕ ವೃದ್ಧಿಗೆ ಒತ್ತು ನೀಡಿದಂತೆ ಕ್ರೀಡೆಗೂ ಸಹ ಒತ್ತು ನೀಡಬೇಕು. ಇಂದಿನ ದಿನಗಳಲ್ಲಿ ಹೆಚ್ಚಿನ ಯುವಕರು ಮೊಬೈಲ್ ಗೀಳಿಗೆ ಬಲಿಯಾಗಿ, ಕ್ರೀಡೆಗಳಲ್ಲಿ ಭಾಗವಹಿಸುವುದು ಕಡಿಮೆಯಾಗುತ್ತಿದೆ. ಇದರಿಂದ ಅಸಾಂಕ್ರಾಮಿಕ ರೋಗಗಳಾದ ಬಿಪಿ, ಶುಗರ್‌ಗೆ ತುತ್ತಾಗುತ್ತಿದ್ದಾರೆ. ಕ್ರೀಡೆಯಲ್ಲಿ ಭಾಗವಹಿಸುವದರಿಂದ ಇಂತಹ ರೋಗಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು” ಎಂದು ಸಲಹೆ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗೌತಮ ಅರಳಿ ಮಾತನಾಡಿ, “ವಿಕಲಚೇತನರಿಗೆ ಆಯೋಜಿಸುವ ಕ್ರೀಡಾ ಕೂಟದಲ್ಲಿ ಹೆಚ್ಚಿನ ಸಂಖ್ಯೆಯ ವಿಕಲಚೇತನರು ಭಾಗವಹಿಸುವಂತಾಗಬೇಕು ಎನ್ನುವ ಸದುದ್ಧೇಶದಿಂದ ಕೇವಲ ಜಿಲ್ಲಾ ಮಟ್ಟದಲ್ಲಿ ಆಯೋಜಿಸುವ ಈ ಕ್ರೀಡಾ ಕೂಟವನ್ನು ಮುಂದಿನ ವರ್ಷ ಗ್ರಾಮ ಪಂಚಾಯತ, ತಾಲ್ಲೂಕ ಪಂಚಾಯತ್ ಮಟ್ಟದಲ್ಲಿಯೂ ಸಹ ಆಯೋಜಿಸುವ ಉದ್ಧೇಶವಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ನಿಗಮ ಮಂಡಳಿ ನೇಮಕಾತಿಯಲ್ಲಿ ಯಾರ ಅಭಿಪ್ರಾಯವನ್ನೂ ಪಡೆದಿಲ್ಲ: ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸುವರ್ಣಾ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ನಾಗರಾಜ ಮಠ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನಾ ಸಹಾಯಕ ರಾಘವೇಂದ್ರ ನಾಯಕ, ಅನಿಲ ಬೆಲ್ದಾರ, ಮೊಗಲಪ್ಪಾ, ವಿಕಲಚೇತನ ವಿವಿಧೋದ್ಧೇಶಗಳ ಪುನರ ವಸತಿ ಕಾರ್ಯಕರ್ತರಾದ ಜಗನ್ನಾಥ ಗಾರಿ, ಶಿವಕುಮಾರ ಪಾಟೀಲ, ಬಾಬುರಾವ ರಾಥೋಡ, ಸುನಿಲ್ ಮಲ್ಗೆ, ಬಸವರಾಜ ದೇಶಮುಖ, ದೆವೇಂದ್ರ ನೈಕೋಡಿ, ವಿಕಲಚೇತನರ ಗ್ರಾಮೀಣ ಪುನರ ವಸತಿ ಕಾರ್ಯಕರ್ತರು, ವಿಕಲಚೇತನರ ನಗರ ಪುನರ ವಸತಿ ಕಾರ್ಯಕರ್ತರು, ವಿಕಲಚೇತನ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.