ನಗರದ ಅಂಬೇಡ್ಕರ್ ಭವನದಲ್ಲಿ ಯಶ್ವಂತ್ ಅಕಾಡೆಮಿ ಆಫ್ ಕಲ್ಚರಲ್ ಫಿಲಂ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಶಾಲಾ ಬ್ಯಾಗ್ ವಿತರಣೆ ಹಾಗೂ ಸಾಂಸ್ಕೃತಿಕ ಸುಗ್ಗಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಸಂಸ್ಥೆಯ ಸಾಮಾಜಿಕ ಸೇವೆಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಯಶ್ವಂತ್ ಅಕಾಡೆಮಿ ಅಧ್ಯಕ್ಷ ಮಂಚನಬೆಲೆ ಶ್ರೀನಿವಾಸ್ ಮಾತನಾಡಿ, ಕಳೆದ 16 ವರ್ಷಗಳಿಂದ ಸಮಾಜದ ಬಡ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಬ್ಯಾಗ್ ವಿತರಣೆ ಸೇರಿದಂತೆ ಇತ್ಯಾದಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಸಂಸ್ಥೆ ನಡೆಸಿಕೊಂಡು ಬರುತ್ತಿದೆ. ಪ್ರತಿಭಾನ್ವಿತ ಬಡ ಮಕ್ಕಳಿಗಾಗಿ ಸಾಂಸ್ಕೃತಿಕ ವೇದಿಕೆಯನ್ನು ಸೃಷ್ಟಿಸಿ, ಮಕ್ಕಳಲ್ಲಿನ ಕಲೆಯನ್ನು ಹೊರ ತೆಗೆಯುವಲ್ಲಿ ಸಂಸ್ಥೆ ಮುಂದೆಜ್ಜೆಯಿಡುತ್ತಿದೆ. ಬಡ ಕಲಾವಿದರಿಗೆ ವೇದಿಕೆ ಒದಗಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ವಕೀಲ ಸಂಘದ ಜಂಟಿ ಕಾರ್ಯದರ್ಶಿ ಅಭಿಲಾಶ್ ಕೆ.ವಿ ಮಾತನಾಡಿ, ಕಲೆ ಯಾರಪ್ಪನ ಸ್ವತ್ತಲ್ಲ. ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಮೊದಲನೆಯ ಸ್ಥಾನದಲ್ಲಿ ಇರುವಂತಹ ಯಶವಂತ್ ಅಕಾಡೆಮಿ ಆಫ್ ಕಲ್ಚರಲ್ ಫಿಲಂ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಕಾರ್ಯ ಶ್ಲಾಘನೀಯ. ಜಾತ್ಯಾತೀತವಾಗಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಕಲಾ ವೇದಿಕೆ ರೂಪಿಸಿಕೊಡುತ್ತಿರುವ ಸಂಸ್ಥೆಯ ಕಾರ್ಯ ಅಭಿನಂದನಾರ್ಹ ಎಂದು ಹೊಗಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಜಕಾಂತ್ ಮಾತನಾಡಿ, ಸಮಾಜ ಸೇವೆಯ ಮೂಲಕ ಮಾನವೀಯತೆಯನ್ನು ಮೆರೆಯುತ್ತಿರುವ ಸಂಸ್ಥೆಯು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸಿದರು.
ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರಮಣಪ್ಪ ಮಾತನಾಡಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ಸರ್ಕಾರದ ಆತ್ಮಾವಲೋಕನಕ್ಕಿದು ಸಕಾಲ
ಸಮಾರಂಭದಲ್ಲಿ ಹೈಕೋರ್ಟ್ ವಕೀಲ ಪಾವಗಡ ಶ್ರೀರಾಮ್, ಗುಡಿಬಂಡೆ ಕಸಾಪ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ, ಎಂ.ಪಿ.ಉಪೇಂದ್ರ, ಮಂಚಲಬೆಲೆ ಗ್ರಾಪಂ ಸದಸ್ಯ ಮಧು, ಅಹಿಂದ ಜನಪದ ವೇದಿಕೆ ಜಿಲ್ಲಾಧ್ಯಕ್ಷ ಕೃಷ್ಣಾಚಾರಿ, ವರುಣ ಸೇವಾ ಟ್ರಸ್ಟ್ ಅಧ್ಯಕ್ಷ ಉಮೇಶ್ ಜಿ, ನಗರ ಠಾಣೆ ಆರಕ್ಷಕ ಉಪನಿರೀಕ್ಷಕ ನಂಜುಂಡಯ್ಯ ಹೆಚ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಕಲಾಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
