ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಡಿಸೆಂಬರ್ 14ರಂದು ರಾಜ್ಯದ ಎಲ್ಲ ಶಾಸಕರ ಮನೆಮುಂದೆ ತಮಟೆ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನರಸಪ್ಪ ದಂಡೋರ ಹೇಳಿದರು.
ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿಸೆಂಬರ್ 16ರಂದು ಒಳಮೀಸಲಾತಿ ಹಕ್ಕೊತ್ತಾಯ ಸಮಾವೇಶವನ್ನು ಬೆಳಗಾವಿಯಲ್ಲಿ ಬೆಳಿಗ್ಗೆ 11.30 ಕ್ಕೆ ನಡೆಯಲಿದೆ ಎಂದರು.
ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿ ನಾಲ್ಕು ತಿಂಗಳಾದರೂ ರಾಜ್ಯ ಸರ್ಕಾರ ಅಮೆ ಗತಿಯಲ್ಲಿ ಸಾಗಿದೆ. ಕಾಟಾಚಾರಕ್ಕೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಿದ್ದು, ಬಿಟ್ಟರೆ ಬೇರೆ ಏನು ಮಾಡಿಲ್ಲ. 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ, ಆಯೋಗಕ್ಕೆ ಬೇಕಾದ ಕಛೇರಿ, ಸಿಬ್ಬಂದಿ, ಹಣಕಾಸಿನ ನೆರವುಕೊಡದೆ ಕಾಲ ಹರಣ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
2011ರ ಜನಗಣತಿಯ ಅಂಕಿ-ಅಂಶಗಳ ಆಧಾರದಲ್ಲಿ ವರ್ಗೀಕರಣ ಮಾಡಿದೆ. ಈಗ ಮತ್ತೆ ನಾಗಮೋಹನ್ ದಾಸ್ ಆಯೋಗಕ್ಕೆ ಅದೇ ಕೆಲಸ ಕೊಡಲಾಗಿದೆ. ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ದೊಮ್ಮರಾಜು ಗುಕೇಶ್: ಹದಿನೆಂಟರ ಪೋರ, ಚೆಸ್ ಲೋಕದ ಸಾಮ್ರಾಟ
ಒಳಮೀಸಲಾತಿ ಜಾರಿ ಆಗುವ ವರೆಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿತ್ತು. ಆದರೆ ಈ ಭರವಸೆ ಜಾರಿಯಾಗಿಲ್ಲ, ನೇಮಕಾತಿಯ ಘೋಷಣೆಗಳು ವಿವಿಧ ಇಲಾಖೆಯಿಂದ ಬರುತ್ತಲೆ ಇದೆ. ಇದು ಖಂಡನಾರ್ಹ ಎಂದರು.
ಈ ಸಂದರ್ಭದಲ್ಲಿ ರವೀಂದ್ರ ಜಲ್ದಾರ್, ಪಿ. ಲಕ್ಷ್ಮಣ್ ಸೀತಾಮಠ ಯಲ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
