ಔರಾದ್ ತಾಲ್ಲೂಕಿನ ಲಿಂಗಿ ಗ್ರಾಮದಲ್ಲಿ ಶಿಕ್ಷಕರೊಬ್ಬರು ಮದ್ಯ ಸೇವಿಸಿ ಶಾಲೆಗೆ ಬರುತ್ತಾರೆ. ಶಿಕ್ಷಕರು ಮತ್ತು ಮಕ್ಕಳೊಂದಿಗೆ ಗಲಾಟೆ ಮಾಡುತ್ತಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇಂತಹ ಶಿಕ್ಷಕರು ನನ್ನ ಕ್ಷೇತ್ರದಲ್ಲಿ ಇರುವುದು ಬೇಡ ಎಂದು ಶಾಸಕ ಪ್ರಭು ಚವ್ಹಾಣ ಖಡಕ್ ಸೂಚನೆ ನೀಡಿದರು.
ಔರಾದ ತಾಲ್ಲೂಕಿನ ಗಣೇಶಪೂರ(ಎ), ಬೋರಾಳ, ತುಳಜಾಪೂರ, ಎಕಲಾರ, ಕೊಳ್ಳುರ, ಬರದಾಪೂರ, ಲಿಂಗದಳ್ಳಿ(ಕೆ), ನಾಗೂರ(ಎನ್) ಹಾಗೂ ನಾಗೂರ(ಎಂ)ನಲ್ಲಿ ಬುಧವಾರ ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರಲ್ಲದೇ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಪರಿಶೀಲನೆ ನಡೆಸಿದರು.
ʼಮದ್ಯ ಸೇವಿಸಿ ಶಾಲೆಗೆ ಬರುವ ಶಿಕ್ಷಕರಿಂದ ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಂತಹ ಶಿಕ್ಷಕರನ್ನು ಗುರುತಿಸಿ ಕಾನೂನಿನ ಚೌಕಟ್ಟಿನಲ್ಲಿ ಶಿಸ್ತು ಕ್ರಮ ಜರುಗಿಸಿ ಬೇರೆಡೆ ಕಳುಹಿಸಬೇಕುʼ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರುʼ
ʼಗ್ರಾಮ ಸಂಚಾರದ ಸಂದರ್ಭದಲ್ಲಿ ನಾನು ಪ್ರತಿ ಶಾಲೆಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದೇನೆ. ಅನೇಕ ಶಾಲೆಗಳಲ್ಲಿ ಅವ್ಯವಸ್ಥೆ ಎದ್ದು ಕಾಣಿಸುತ್ತಿದೆ. ಬೆರಳೆಣಿಕೆಯಷ್ಟು ಶಾಲೆಗಳನ್ನು ಹೊರತುಪಡಿಸಿ ಬಹಳಷ್ಟು ಶಾಲೆಗಳಲ್ಲಿ ಮಕ್ಕಳ ಕೊರತೆಯಿದೆ. ಶಿಕ್ಷಕರ ಸಮಸ್ಯೆಯೂ ಮಕ್ಕಳ ಕಲಿಕೆಗೆ ಅಡ್ಡಿಯಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನಿಯೋಜಿಸಬೇಕುʼ ಎಂದರು.
ಬಯೋಮೆಟ್ರಿಕ್ ವ್ಯವಸ್ಥೆಯಿದ್ದರೂ ಶಿಕ್ಷಕರು ಗೈರಾಗುವುದು ನಿಂತಿಲ್ಲ :
ʼಶಾಲೆಗಳಲ್ಲಿ ಶಿಕ್ಷಕರ ಹಾಜರಾತಿ ಸುಧಾರಣೆಗೆ ಬಯೋಮೆಟ್ರಿಕ್ ವ್ಯವಸ್ಥೆ ಮಾಡಿರುವುದಾಗಿ ತಿಳಿಸಲಾಗುತ್ತಿದೆ. ಆದರೂ ಶಿಕ್ಷಕರು ಕೆಲಸಕ್ಕೆ ಗೈರಾಗುವುದು ನಿಂತಿಲ್ಲ. ಸಾಕಷ್ಟು ಕಡೆಗಳಲ್ಲಿ ಶಿಕ್ಷಕರು ಸಮಯಕ್ಕೆ ಶಾಲೆಗೆ ಹೋಗುತ್ತಿಲ್ಲವೆಂಬ ದೂರುಗಳು ಬರುತ್ತಿವೆ. ಇವುಗಳನ್ನು ಕೂಡಲೇ ಸರಿಪಡಿಸಬೇಕಕು ಎಂದು ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ʼನಾನು ಶಿಕ್ಷಣದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದು, ಉತ್ತಮ ತರಗತಿ ಕೋಣೆಗಳು, ಶುದ್ದ ಕುಡಿಯುವ ನೀರು, ಆಟದ ಮೈದಾನ, ಡಿಜಿಟಲ್ ಕ್ಲಾಸ್‌ರೂಮ್ ನಂತಹ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸುತ್ತಿದ್ದೇನೆ. ಇನ್ನು ಏನು ಬೇಕೆಂದರೂ ಕೊಡಲು ಸಿದ್ದ. ಆದರೆ ಶಿಕ್ಷಕರು ಸರಿಯಾಗಿ ಕೆಲಸ ಮಾಡಬೇಕು. ಪರಿಣಾಮಕಾರಿಯಾಗಿ ಬೋಧನೆ ಮಾಡುವ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಬೇಕುʼ ಎಂದು ಶಿಕ್ಷಕರಿಗೆ ಹೇಳಿದರು.
ʼಕ್ಷೇತ್ರದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಿಸುತ್ತಿದ್ದೇನೆ. ಶಾಲೆಗಳಲ್ಲಿ ಮಕ್ಕಳಿಲ್ಲದಿದ್ದರೆ ಶಾಲೆಗಳು ಮುಚ್ಚಿ ಹೋಗುವ ಆತಂಕವಿರುತ್ತದೆ. ಹಾಗಾಗಿ ಸಾರ್ವಜನಿಕರು ಕೂಡ ಈ ದಿಶೆಯಲ್ಲಿ ಜವಾಬ್ದಾರಿತನ ತೋರಿಸಬೇಕು. ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸದೇ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಮಾಡಿಸಬೇಕುʼ ಎಂದು ಶಾಸಕರು ಜನರಲ್ಲಿ ಮನವಿ ಮಾಡಿಕೊಂಡರು.
ಉತ್ತಮ ಶಾಲೆಯ ಮುಖ್ಯಗುರುಗಳಿಗೆ ಸನ್ಮಾನ:
ಗ್ರಾಮ ಸಂಚಾರದ ವೇಳೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಶಾಸಕರು, ಶಾಲೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಗಣೇಶಪೂರ ಶಾಲೆ ಮುಖ್ಯಗುರು ಸಂಜು ಬಿರಾದಾರ, ಎಕಲಾರ ಮುಖ್ಯಗುರು ಪ್ರಭು ಬಾಳೂರೆ ಹಾಗೂ ಕೊಳ್ಳುರ ಶಾಲೆಯ ಮುಖ್ಯಗುರು ಕಲ್ಲಪ್ಪ ಬೋರಾಳೆ ಅವರನ್ನು ಶಾಸಕರು ಶಾಲು ಹೊದಿಸಿ ಸನ್ಮಾನಿಸಿದರು.
ʼಎಲ್ಲ ಶಾಲೆಗಳಲ್ಲಿಯೂ ಇದೇ ರೀತಿಯ ಕೆಲಸಗಳಾಗಬೇಕು. ಶಾಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಕ್ಕಳ ಹಾಜರಾತಿ ಹೆಚ್ಚಾಗಬೇಕು. ತರಗತಿಗಳು ಸರಿಯಾಗಿ ನಡೆಯಬೇಕು ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್ | ತೊಗರಿ ಬೆಲೆ ಕುಸಿತದಿಂದ ರೈತರು ಕಂಗಾಲು : ಸ್ಪಂದಿಸುವುದೇ ಸರ್ಕಾರ?
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ವಸಂತ ಬಿರಾದಾರ, ಶಿವರಾಜ ಅಲ್ಮಾಜೆ, ಧೊಂಡಿಬಾ ನರೋಟೆ, ಸಚಿನ್ ರಾಠೋಡ, ರಮೇಶ ಉಪಾಸೆ, ಖಂಡೋಬಾ ಕಂಗಟೆ, ದಯಾನಂಧ ಘೂಳೆ, ಸಂತೋಷ ಪೋಕಲವಾರ, ಕೇರಬಾ ಪವಾರ, ಸಂಜು ವಡೆಯರ್, ಸಚಿನ ಬಿರಾದಾರ, ರಾಜಪ್ಪ ಸೋರಾಳೆ, ಸಾಗರ ಪಾಟೀಲ, ಶಿವಾಂಜಯ ಬಿರಾದಾರ ಅಧಿಕಾರಿಗಳಾದ ಸುಭಾಷ, ರವಿ ಕಾರಬಾರಿ, ಡಾ.ಗಾಯತ್ರಿ, ಧೂಳಪ್ಪ, ವೆಂಕಟರಾವ ಶಿಂಧೆ, ಇಮಲಪ್ಪಾ ಸೇರಿದಂತೆ ವಿವಿಧ ಇಲಾಖೆಗಳ ಆಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.