ಎಲ್ಲಾ ವೃತ್ತಿಗಿಂತ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಅನುಗುಣವಾಗಿ ಶಿಕ್ಷಕರು ಗುಣಮಟ್ಟ ಶಿಕ್ಷಣ ನೀಡಲು ಮುಂದಾಗಬೇಕು ಎಂದು ತಡೋಳಾ ಹಿರೇಮಠ ಸಂಸ್ಥೆಯ ಪೀಠಾಧಿಪತಿ ರಾಜೇಶ್ವರ ಶಿವಾಚಾರ್ಯ ಹೇಳಿದರು.
ಬಸವಕಲ್ಯಾಣ ಇಂಜಿನೀಯರಿಂಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ʼವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಕಾರ್ಯ ಸಮಾಜಕ್ಕೆ ಪ್ರಮುಖವಾಗಿದೆʼ ಎಂದರು.
ಬಸವಕಲ್ಯಾಣ ಎಜ್ಯೂಕೇಶನಲ್ ಟ್ರಸ್ಟ್ ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ದೀಲಿಪಕುಮಾರ ಎಸ್.ತಾಳಂಪಳ್ಳಿ ಮಾತನಾಡಿ, ʼಶಿಕ್ಷಕರಾದವರು ವಿದ್ಯಾರ್ಥಿಯ ಜೀವನುದ್ದಕ್ಕೂ ಮಾರ್ಗದರ್ಶಕರಾಗಿ ಇರುತ್ತಾರೆ. ರಾಷ್ಟ್ರ ನಿರ್ಮಾಣ, ಸಾಮಾಜಿಕ ಚಿಂತನೆವುಳ್ಳವರೇ ಉತ್ತಮ ಶಿಕ್ಷಕರಾಗಲು ಸಾಧ್ಯವಿದೆ. ಸರ್.ಎಂ.ವಿಶ್ವೇಶ್ವರಯ್ಯನವರು ಅತ್ಯಂತ ಶಿಸ್ತು ಮೈಗೂಡಿಸಿಕೊಂಡಿದ್ದರು, ಅದಕ್ಕೆ ಅವರು ದೇಶದ ಶ್ರೇಷ್ಠ ಇಂಜಿನೀಯರ್ ಹಾಗೂ ಶಿಕ್ಷಣ ತಜ್ಞರಾಗಲು ಸಾಧ್ಯವಾಗಿತ್ತು. ಅವರ ಸೇವೆ ಇಡೀ ಸಮಾಜಕ್ಕೆ ಅಪಾರವಾಗಿದೆʼ ಎಂದು ಹೇಳಿದರು.
ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದರಿ ಮಾತನಾಡಿ, ʼವಿದ್ಯಾರ್ಥಿಗಳು ಎಸ್.ರಾಧಾಕೃಷ್ಣನವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಬೃಹತ್ ಅಣೆಕಟ್ಟು, ರಸ್ತೆ, ಕಟ್ಟಡ ನಿರ್ಮಾಣ ಸೇರಿದಂತೆ ದೇಶದ ಅಭಿವೃದ್ದಿಯಲ್ಲಿ ಇಂಜಿನಿಯರ್‌ಗಳು ತಮ್ಮ ಅಮೋಘವಾದ ಸೇವೆ ಸಲ್ಲಿಸುತ್ತಿದ್ದಾರೆʼ ಎಂದು ಹೇಳಿದರು.
ಬಿಇಟಿ ಟ್ರಸ್ಟ್ ನಿರ್ದೇಶಕ ಹಾಗೂ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ, ವೈಚಾರಿಕ ಪ್ರಜ್ಞೆ ಬೆಳೆಸಲು ಶಿಕ್ಷಕರು ಗಮನ ಹರಿಸಬೇಕು. ನಾಡಿನ ಖ್ಯಾತ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರು ಕಟ್ಟಿಸಿದ ಕನ್ನಂಬಾಡಿ ಅಣಿಕಟ್ಟು ನಿರ್ಮಿಸಲು ನಡೆದ ಮದ್ರಾಸ್ ಮತ್ತು ಮೈಸೂರು ಪ್ರಾಂತಗಳ ಕುರಿತು ತಿಳಿದುಕೊಳ್ಳಬೇಕುʼ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಿಕ್ಷಕರ ದಿನಾಚರಣೆ ಹಾಗೂ ಇಂಜಿನಿಯರ್ಸ್ ದಿನಾಚರಣೆ ಅಂಗವಾಗಿ ಬಿಇಟಿ ಟ್ರಸ್ಟ್ ಸಮೂಹದ ಎಲ್ಲ ಕಾಲೇಜಿನ ಎಲ್ಲಾ ಶಿಕ್ಷಕ, ಸಿಬ್ಬಂದಿಗಳಿಗೆ ಆಯೋಜಿಸಿದ್ದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಮಾರಂಭದಲ್ಲಿ ಸಿಬ್ಬಂದ್ದಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸವಕಲ್ಯಾಣದಲ್ಲಿ ಅ.19, 20ರಂದು ʼಸ್ವಾಭಿಮಾನಿ ಕಲ್ಯಾಣ ಪರ್ವʼ
ಕಾರ್ಯಕ್ರಮದಲ್ಲಿ ಬಿಇಟಿ ಸಂಸ್ಥೆಯ ವಿವಿಧ ಕಾಲೇಜಿನ ಪ್ರಾಚಾರ್ಯಗಳಾದ ಡಾ.ನಾಗಯ್ಯಾ ಸ್ವಾಮಿ, ವಿಶ್ವನಾಥಯ್ಯ ಸ್ವಾಮಿ, ಪ್ರೊ.ಎನ್.ಆರ್.ಕೋಡ್ಲೆ, ಶಿವಕುಮಾರ ಹಿರೇಮಠ, ಬಿಕೆಇಸಿ ಉಪಪ್ರಾಚಾರ್ಯ ಡಾ.ಅರುಣಕುಮಾರ ಯಲಾಲ್ ಸೇರಿದಂತೆ ಸಂಸ್ಥೆಯ ವೃಷಿಕೇತ ಬಿ., ಶಂಕರ ಆಗರಗಿ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾಸಾಗರ ಮೂಲಗೆ ನಿರೂಪಿಸಿದರು, ಕುಲಸಚಿವ ಪ್ರೇಮಸಾಗರ ಪಾಟೀಲ್ ವಂದಿಸಿದರು.