ದಲಿತ ಕುಟುಂಬವೊಂದು ತಮ್ಮ ಆಸ್ತಿಗೆ ಹದ್ದುಬಸ್ತು ಮತ್ತು ಪೋಡಿ ಮಾಡಿಕೊಡುವಂತೆ ಮನವಿ ಸಲ್ಲಿಸಿ, ವರ್ಷಾನುಗಟ್ಟಲೆ ಅಲೆದರೂ ಕೆಲಸವಾಗಿಲ್ಲ. ದಲಿತ ಕುಟುಂಬದ ಮನವಿಗೆ ಸ್ಪಂದಿಸದ ಶಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ. ತುಮಕೂರು ಎಸ್‌ಪಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
“ತುಮಕೂರು ತಾಲೂಕಿನ ಕೌತಮಾರನಹಳ್ಳಿಯ ನಿವಾಸಿ, ಆದಿ ದ್ರಾವಿಡ ಸಮುದಾಯದ ಎಲ್ಲಪ್ಪ ಅವರು ತಮ್ಮ ಜಮೀನನ್ನು ಹದ್ದುಬಸ್ತು ಮತ್ತು ಪೋಡಿ ಮಾಡಿಕೊಡುವಂತೆ ತುಮಕೂರು ತಹಶೀಲ್ದಾರ್ ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ, ಅವರಿಗೆ ಸರ್ಕಾರಿ ಸೇವೆಯನ್ನು ಒದಗಿಸುವಲ್ಲಿ ತಹಶೀಲ್ದಾರ್ ಸಿದ್ದಯ್ಯ ವಿಫಲರಾಗಿದ್ದಾರೆ” ಎಂದು ವೇದಿಕೆಯ ಮುಖಂಡ ಎಚ್.ಎಂ ವೆಂಕಟೇಶ್ ಆರೋಪಿಸಿದ್ದಾರೆ.
“ತಮ್ಮ ಮನವಿ ಸ್ಪಂದಿಸದೆ, ವರ್ಷಾನುಗಟ್ಟಲೆ ಅಲೆದಾಡಿಸಿದ ತಹಶೀಲ್ದಾರ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೆಕೆಂದು ಎಲ್ಲಪ್ಪ ಅವರು ತುಮಕೂರು ನಗರ ಉಪ ಪೋಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದರು. ಆದರೆ, ಈವರೆಗೆ ದೂರು ದಾಖಲಿಸಿಕೊಳ್ಳದೆ, ಪೊಲೀಸರೂ ಕರ್ತವ್ಯ ಲೋಪ ಎಸಗಿದ್ದಾರೆ” ಎಂದು ದೂರಿದ್ದಾರೆ.
“ದೂರುದಾರರಿಗೆ ರಕ್ಷಣೆ ನೀಡಬೇಕಾಗಿದ್ದ ತುಮಕೂರು ನಗರ ಪೊಲೀಸ್ ಅಧಿಕ್ಷಕರು ತಪ್ಪಿತಸ್ಥ ತಹಸಿಲ್ದಾರ್ ಮತ್ತು ಇತರ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದಾರೆ. ಇದು ದುರಾದೃಷ್ಟಕರ ಸಂಗತಿ. ಬಡತನ, ಜಾತಿ ದೌರ್ಜನ್ಯ, ಸರ್ಕಾರದ ನಿರ್ಲಕ್ಷ್ಯದಿಂದ ಎಲ್ಲಪ್ಪ ಕುಟುಂಬ ಸಾಕಷ್ಟ ನೋವುಂಡಿದೆ. ಆ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.