ರಾಜ್ಯದಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಲಾರಂಭಿಸಿದ್ದು, ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಉಷ್ಣಾಂಶವು 44 ಡಿಗ್ರಿ ಸೆಲ್ಸಿಯಸ್ ದಾಟಿದೆ.
ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಸೋಮವಾರ, ಮಂಗಳವಾರ ಅತ್ಯಧಿಕ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ವರದಿಯಾಗಿದೆ.
ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಉತ್ತರ ಕರ್ನಾಟಕದ 11 ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಬೀದರ್ ಸೋಮವಾರ, ಮಂಗಳವಾರ ಕ್ರಮವಾಗಿ 44.5, 44.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 44.5, 43.1 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ.
ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಯಾದಗಿರಿಯಲ್ಲಿ 42.9, ರಾಯಚೂರಲ್ಲಿ 42.9, ಬಳ್ಳಾರಿಯಲ್ಲಿ 41.3, ಕೊಪ್ಪಳ 40.6 ಹಾಗೂ ಬೆಳಗಾವಿ ವಿಭಾಗದಡಿ ಬರುವ ವಿಜಯಪುರ 42.8, ಬೆಳಗಾವಿ 41.9, ಬಾಗಲಕೋಟೆ 41.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಪಿಯುಸಿ ಪರೀಕ್ಷೆ ಫಲಿತಾಂಶ : ಜಿಲ್ಲೆಯ 13 ಪಿಯು ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ
‘ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ದಾಖಲಾದ ಅಧಿಕ ಉಷ್ಣಾಂಶ ಈ ವರ್ಷದ ಅತಿ ಹೆಚ್ಚು ತಾಪಮಾನ ಆಗಿದೆ. ಏಪ್ರಿಲ್ ತಿಂಗಳಲ್ಲಿ ಉಷ್ಣಾಂಶವು ಗಣನೀಯ ಏರಿಕೆ ಕಾಣುತ್ತಿದೆ. ಇದು ಇನ್ನೂ ಕೆಲ ದಿನಗಳ ಕಾಲ ಹೀಗೆ ಇರಲಿದೆ’ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಬಿಸಿಲಿನ ಪ್ರಖರತೆ ಹೆಚ್ಚುತ್ತಿರುವ ಹಿನ್ನಲೆ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಬಿಸಿಲಿನ ವೇಳೆ ಹೊರಹೋಗದೆ ಆರೋಗ್ಯ ಕಡೆ ಗಮನಹರಿಸಬೇಕು’ ಎಂದು ಹೇಳಿದರು.