ಶನಿವಾರ ಅಪಘಾತವಾದ ಸ್ಥಳದಲ್ಲೇ ಭಾನುವಾರವೂ ಅಪಘಾತ | ಗಾಯಾಳುಗಳು ಆಸ್ಪತ್ರೆಗೆ ದಾಖಲು
ಶನಿವಾರವಷ್ಟೇ ಕಾರು ಬೈಕ್ ನಡುವೆ ಅಪಘಾತವಾದ ಸ್ಥಳದಲ್ಲೇ ಭಾನುವಾರವೂ ಮತ್ತೊಂದು ಅಪಘಾತವಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಂತಾಮಣಿ-ಮದನಪಲ್ಲಿ ಹೆದ್ದಾರಿಯ ದಂಡುಪಾಳ್ಯದ ಬಳಿ ನಡೆದಿದೆ.
ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ಕಾರು ಮತ್ತು ಶ್ರೀ ವೆಂಕಟೇಶ್ವರ ಖಾಸಗಿ ಬಸ್ ನಡುವೆ ಭೀಕರ ಅಫಘಾತ ಸಂಭವಿಸಿದ್ದು, ಆಂಧ್ರ ಮೂಲದ ಕಾರು ಚಾಲಕ ಪ್ರವೀಣ್ ಚಂದ್ರ ನಾಯ್ದು(44) ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿಕೊಂಡು ಬಂದಿದ್ದು, ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಪರಿಣಾಮ ಬಸ್ಸಿನ ಮುಂಭಾಗದ ಚಕ್ರ ಮತ್ತು ಗಾಜುಗಳು ಪುಡಿಪುಡಿಯಾಗಿವೆ. ಕಾರಿನ ಮುಂಭಾಗದ ಬಾನೆಟ್ ಹಾರಿ ಹೋಗಿದ್ದು, ಕಾರಿನ ಇಂಜಿನ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರು ಚಾಲಕನ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಾರಿನಲ್ಲಿ ಸಿಲುಕಿಕೊಂಡಿದ್ದ ಮೃತದೇಹವನ್ನು ಜೆಸಿಬಿ ಮೂಲಕ ಹೊರತೆಗೆದು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ಕಾರಿನ ಚಾಲಕ ಬೆಂಗಳೂರಿನ ಎ.ಎನ್.ಝಡ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಬೆಳಿಗ್ಗೆ ಬೆಂಗಳೂರಿನಿಂದ ಚಿಂತಾಮಣಿ ಮಾರ್ಗವಾಗಿ ಸ್ವಗ್ರಾಮವಾದ ರಂಗಪ್ಪಗಾರಿಪಲ್ಲಿ ಗ್ರಾಮಕ್ಕೆ ತೆರಳುತ್ತಿದ್ದ ಎನ್ನಲಾಗಿದೆ. ಖಾಸಗಿ ಬಸ್ ಆಂದ್ರಪ್ರದೇಶದ ಮದನಪಲ್ಲಿಯಿಂದ ಚಿಂತಾಮಣಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತಿತ್ತು ಎಂದು ತಿಳಿದುಬಂದಿದೆ.
ಖಾಸಗಿ ಬಸ್ ಚಾಲಕ ಸೇರಿದಂತೆ ಬಸ್‌ನಲ್ಲಿದ್ದ ಹಲವಾರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಂತಾಮಣಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಇದನ್ನೂ ಓದಿ : ಬಾಗೇಪಲ್ಲಿ | ಮಕ್ಕಳ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ಕಲಿಸಿ : ಮಂಗಳನಾಥ ಸ್ವಾಮೀಜಿ ಕಿವಿಮಾತು
ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಪಿ.ಮುರಳೀಧರ, ಕೆಂಚರ‍್ಲಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ವೆಂಕಟರಾಮಪ್ಪ, ಕೆಂಚಾರ‍್ಲಹಳ್ಳಿ ಪಿಎಸ್‌ಐ ಶಿವಕುಮಾರ್, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ನಾಗೇಂದ್ರ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.