ಚಲಿಸುತ್ತಿದ್ದ ಆಟೋಗೆ ಹಿಂದಿನಿಂದ ವೇಗವಾಗಿ ಬಂದು ಲಾರಿ ಡಿಕ್ಕಿಯಾಗಿ ಮಹಾರಾಷ್ಟ್ರ ಮೂಲದ ನಾಲ್ವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗಡಿಭಾಗದ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದಿದೆ.
ಈ ಭೀಕರ ಅಪಘಾತದಲ್ಲಿ ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ಸುಂದರವಾಡಿ ಗ್ರಾಮದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಆಟೋ ಚಾಲಕನ ಪತ್ನಿ ಪ್ರಮೀಳಾ (32), ಆಟೋ ಚಾಲಕ ಸುನೀಲ ಜಗದಾಳೆ (35), ಚಾಲಕನ ತಾಯಿ ಅನುಷಾಬಾಯಿ ಜಗದಾಳೆ(65) ಹಾಗೂ ಅದೇ ಗ್ರಾಮದ ಪೂಜಾ ಜಾಧವ (35) ಎಂಬ ಮೃತ ದುರ್ದೈವಿಗಳಾಗಿದ್ದಾರೆ. ಗೀತಾ ಶಿವರಾಮ ಜಗದಾಳೆ ಎನ್ನುವ ಮಹಿಳೆಗೆ ಗಂಭೀರವಾಗಿ ಗಾಯಗಳಾಗಿದ್ದು, ಇವರನ್ನು ಲಾತೂರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆಟೋದಲ್ಲಿ ಒಟ್ಟು 8 ಜನ ಪ್ರಯಾಣಿಸುತಿದ್ದರು ಎಂದು ತಿಳಿದು ಬಂದಿದೆ.
ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಬಸವಕಲ್ಯಾಣ ತಾಲೂಕಿನ ಚಂಡಕಾಪೂರ ಹತ್ತಿರದ ಐತಿಹಾಸಿಕ ಶ್ರೀ ಕ್ಷೇತ್ರ ಅಮೃತಕುಂಡ ದೇವರ ದರ್ಶನಕ್ಕೆಂದು ಆಗಮಿಸಿದ್ದರು. ದರ್ಶನ ಮುಗಿಸಿಕೊಂಡು ವಾಪಸ್ ಊರಿಗೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ. ಬಸವಕಲ್ಯಾಣದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.