ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ತೇವರೇಚಟ್ನಳ್ಳಿಯ ಸೇತುವೆ ನಿರ್ಮಾಣವಾಗಿ ನಾಲ್ಕೇ ವರ್ಷಕ್ಕೆ ಶಿಥಿಲಗೊಂಡಿದೆ. ಸೇತುವೆಯ ತಡೆಗೋಡೆಗಳು ಬಿರುಕು ಬಿಟ್ಟಿವೆ. ಸೇತುವೆ ಯಾವಾಗ ಕುಸಿಯಾತ್ತದೋ ಎಂಬ ಆತಂಕದಲ್ಲೇ ಸಾರ್ವಜನಿಕರು ಸೇತುವೆಯನ್ನು ಬಳಸುತ್ತಿದ್ದಾರೆ.
ಸೇತುವೆಯು ತೇವರೇಚಟ್ನಳ್ಳಿಯಿಂದ ರಾಗಿಗುಡ್ಡ, ನವುಲೇ ಹಾಗೂ ಮುತ್ತೋಡ ಗ್ರಾಮಗಳಿಗೆ ಸಂಪರ್ಕಕೊಂಡಿಯಾಗಿದೆ. ಸೇತುವೆಗೆ ತೀಕ್ಷ್ಣ ತಿರುವಿದ್ದು, ಗುಂಡಿಗಳೂ ಬಿದ್ದಿವೆ. ರಾತ್ರಿ ವೇಳೆಯಲ್ಲಿ ಸೇತುವೆಯ ರಸ್ತೆ ಸರಿಯಾಗಿ ಕಾಣಿಸುವುದೇ ಕಷ್ಟವಾಗಿದೆ. ಸೇತುವೆ ಬದಿಗಳಲ್ಲಿ ವಿದ್ಯುತ್ ದೀಪಗಳಾಗಲೀ, ಸೂಚನಾ ಫಲಕಗಳಾಗಲಿ ಹಾಕಲಾಗಿಲ್ಲ. ರಾತ್ರಿ ವೇಳೆ ಸೇತುವೆ ಮೇಲೆ ಅಪಘಾತವಾಗುವ ಭಯ ಜನರಲ್ಲಿ ಕಾಡುತ್ತಿದೆ.
ತೇವರೇಚಟ್ನಳ್ಳಿಯಲ್ಲಿರುವ ಪದವಿ ಪೂರ್ವ ಕಾಲೇಜಿಗೆ ದಿನನಿತ್ಯ ಕಾಲೇಜು ಬಸ್‌ಗಳು ಓಡಾಡುತ್ತವೆ. ಒಂದು ಬದಿಯಿಂದ 4 ಚಕ್ರದ ವಾಹನ ಸೇತುವೆ ಮೇಲೆ ಬಂದರೆ, ಮತ್ತೊಂದು ಬದಿಯಿಂದ ಬರುವ ವಾಹನಕ್ಕೆ ಜಾಗವಿರುವುದಿಲ್ಲ.
ಸೇತುವೆ ಕೆಳಗಿರುವ ನಾಲೆಯೂ ಗೆಬ್ಬೆದ್ದು ನಾರುತ್ತಿದೆ. ಶೌಚಾಲಯದ ಕೊಳಕು ನೀರು, ಕಸ ಕಡ್ಡಿ ತ್ಯಾಜ್ಯಗಳಿಂದ ತುಂಬಿ ಕೊಳಚೆ ಗುಂಡಿಯಂತಾಗಿದೆ. ಆದರೂ, ಪಾಲಿಕೆ ಅಧಿಕಾರಿಗಳು ಅದನ್ನು ಸ್ವಚ್ಛಗೊಳಿಸಲು ಮುಂದಾಗಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೇವರೇಚಟ್ನಳ್ಳಿ ವಾರ್ಡ್‌ನಲ್ಲಿನ ಚರಂಡಿ ನೀರು ನಿಂತಲ್ಲೇ ನಿಂತಿದೆ. ಚರಂಡಿಗಳು ಸ್ವಚ್ಛಗೊಳಿಸಿಲ್ಲ. ರಾಜಕಾಲುವೆಗೆ ಕಲುಷಿತ ನೀರು ಸೇರುವ ಹಾಗೆ ವ್ಯವಸ್ಥೆ ಮಾಡಿಲ್ಲ. ನಾಲೆ ಕೊಳಚೆಯಾಗಿರುವ ಕಾರಣ, ಇಲ್ಲಿನ ನಿವಾಸಿಗಳಿಗೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿಯಲ್ಲಿ ಎದುರಾಗಿದೆ. ಮಹಾನಗರ ಪಾಲಿಕೆ ಸದಸ್ಯರು ವಾರ್ಡ್‌ಗೆ ಬರುವುದೇ ಇಲ್ಲ. ಸಮಸ್ಯೆಗಳ ಬಗ್ಗೆ ಗಮನ ಕೊಡುತ್ತಿಲ್ಲ. ಏನು ನೋಡುತ್ತಿಲ್ಲ, ಸರಿಪಡಿಸುತ್ತಿಲ್ಲ ಎಂದು ದೂರುತ್ತಿದ್ದಾರೆ.
ಸತತವಾಗಿ 3 ಬಾರಿ ಕಾರ್ಪೊರೇಟರ್ ಆಗಿರವು ಎಚ್.ಸಿ ಯೋಗೇಶ್ ಅವರು ಕೂಡ ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಕಾರ್ಪೊರೇಟರ್ ಎಚ್.ಸಿ ಯೋಗೇಶ್ ಅವರು ವಿಷಯದ ಬಗ್ಗೆ ಮಾಹಿತಿ ಪಡೆದುಕೊಂಡು ತಿಳಿಸುತ್ತೇನೆ ಎಂದಿರುತ್ತಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಈ.ದಿನ.ಕಾಮ್ ಜೊತೆ ಮಾತನಾಡಿ, ಸೇತುವೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಕಾಲುವೆಗಳಿಗೆ ಶೌಚಾಲಯದ ನೀರು ಹಾಗೂ ಕಸ ಕಡ್ಡಿ ತ್ಯಾಜ್ಯ ಸೇರದಂತೆ ತಡೆಗಟ್ಟಲು ಒಳಚರಂಡಿ ಮತ್ತು ನೀರಾವರಿ ಇಲಾಖೆ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ” ಎಂದು ತಿಳಿಸಿದ್ದಾರೆ.