ಕರ್ನಾಟಕದಲ್ಲಿ ನೋಂದಣಿ ಆಗದೆ ಅನಧಿಕೃತವಾಗಿ ನಡೆಯುತ್ತಿರುವ ಶಾಲೆಗಳನ್ನು ಆ. 14ರೊಳಗಾಗಿ ಮುಚ್ಚಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ.
ಶಿಕ್ಷಣ ಕಾಯಿದೆ-1983 ಸೆಕ್ಷನ್-30 ಮತ್ತು 31ರಂತೆ ನೋಂದಣಿ ಅನುಮತಿಯನ್ನು ಪಡೆಯದ ಶಾಲೆಯನ್ನು ಮುಚ್ಚಿಸಲು ಆದೇಶಿಸಿದ್ದಾರೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಜಿಲ್ಲಾ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದು, “ರಾಜ್ಯದಲ್ಲಿನ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕರ್ನಾಟಕ ಶಿಕ್ಷಣ ಕಾಯಿದೆ-1983 ಸೆಕ್ಷನ್-30, 31ರ ಪ್ರಕಾರ ಇಲಾಖಾ ವತಿಯಿಂದ ಯಾವುದೇ ನೋಂದಣಿ ಪಡೆಯದೆ ಅನಧಿಕೃತವಾಗಿ ಶಾಲೆ ನಡೆಸುವುದು ಕಾನೂನು ಬಾಹಿರವಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
“ನಿಮ್ಮ ಜಿಲ್ಲೆಯಲ್ಲಿ ನೋಂದಣಿ ಪಡೆಯದೆ ಅನಧಿಕೃತವಾಗಿ ಶಾಲೆ ನಡೆಸುತ್ತಿರುವುದು, ನೋಂದಣಿ ಇಲ್ಲದೆ ಉನ್ನತೀಕರಿಸಿದ ತರಗತಿ ನಡೆಸುತ್ತಿರುವುದು, ಅನಧಿಕೃತ ಪಠ್ಯಕ್ರಮ ಮತ್ತು ಅನಧಿಕೃತ ಪಠ್ಯಪುಸ್ತಕ ಬೋಧಿಸುತ್ತಿರುವುದು ಹಾಗೂ ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜಿಸಿದ ನಂತರವೂ ರಾಜ್ಯ ಪಠ್ಯಕ್ರಮದ ಶಾಲೆ ನಡೆಸುತ್ತಿರುವುದು ಅತ್ಯಂತ ಆಕ್ಷೇಪಾರ್ಹ ಮತ್ತು ನಿಯಮಬಾಹಿರವಾಗಿರುತ್ತದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮನೆ ಬಾಡಿಗೆ ಹಣ ಕೇಳಿದಕ್ಕೆ ಚಾಕುವಿನಿಂದ ಹಲ್ಲೆ
“ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ನೋಂದಣಿ ಪಡೆಯದ ನಡೆಯುತ್ತಿರುವ ಶಾಲೆಗಳು ಯಾವುದು ಇರುವುದಿಲ್ಲವೆಂದು ದೃಢೀಕರಣ ನೀಡಬೇಕು. 2023-24ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಾರಂಭವಾಗುವ ಮುನ್ನ ತಕ್ಷಣ ನಿಯಮಾನುಸಾರ ಕ್ರಮವಹಿಸಬೇಕು. 45 ದಿನಗಳ ಒಳಗಾಗಿ ಮಕ್ಕಳ ದಾಖಲಾತಿಗಳನ್ನು ನೀಡಬೇಕು. ಈ ಕ್ರಮ ಮುಗಿದ ನಂತರದಲ್ಲಿ ಶಾಲೆ ಮುಂದುವರೆಸಿದ್ದಲ್ಲಿ ಅಂತಹ ಶಾಲೆಗಳಿಗೆ ಪೋಷಕರು ಮಕ್ಕಳನ್ನು ದಾಖಲಿಸದಂತೆ ಸಾರ್ವಜನಿಕವಾಗಿ ಪ್ರಕಟಣೆ ಪ್ರಕಟಿಸಬೇಕು” ಎಂದು ತಿಳಿಸಿದ್ದಾರೆ.
“ಸಾರ್ವಜನಿಕರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿ ಪಡೆಯದ ಅನಧಿಕೃತವಾಗಿ ಶಾಲೆಗಳು ನಡೆಯುತ್ತಿವೆ ಎಂದು ದೂರು ಬಂದಲ್ಲಿ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದುʼ’ ಎಂದು ಎಚ್ಚರಿಕೆ ನೀಡಿದ್ದಾರೆ.