ಕಳೆದ ಮೂರು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ನಡೆಯುತ್ತಿದೆ. ಮಾರ್ಚ್ 7 ರವರೆಗೂ ನಡೆಯುವ ಈ ಪ್ರತಿಭಟನೆಯಲ್ಲಿ ಪ್ರಮುಖವಾಗಿ ಶಿಕ್ಷಣ, ಆರೋಗ್ಯ ಎಲ್ಲವು ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಕಟ್ಟಡ ಕಾರ್ಮಿಕರ ವೇತನ ಪರಿಷ್ಕರಣೆಯಾಗಬೇಕು ಎಂಬುದು ಪ್ರತಿಭಟನಾಕಾರರ ಬೇಡಿಕೆಯಾಗಿದೆ. ಮಾರ್ಚ್ 5ರಂದು ನಡೆದ ಪ್ರತಿಭಟನೆಯಲ್ಲಿ ಕಾರ್ಮಿಕರಿಗೆ ನಿವೇಶನ, ವಿದ್ಯಾರ್ಥಿ ವೇತನ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸಿಐಟಿಯು ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ಮಾರ್ಚ್ 3ರಂದು ಗ್ರಾಮ ಪಂಚಾಯಿತಿ ಕಾರ್ಮಿಕರು, ಮಾರ್ಚ್ 4ರಂದು ಅಕ್ಷರ ದಾಸೋಹ ಕಾರ್ಮಿಕರು, ಮಾರ್ಚ್ 5ರಂದು ಕಟ್ಟಡ ನಿರ್ಮಾಣ ಕಾರ್ಮಿಕರು, ಮಾರ್ಚ್ 6ರಂದು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರು ಹಾಗೂ ಮಾರ್ಚ್ 7ರಂದು ಅಂಗನವಾಡಿ ಕಾರ್ಮಿಕರು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳು ರದ್ದಾಗಬೇಕು, ಸಮಾನ ಕನಿಷ್ಟ ವೇತನ 36 ಸಾವಿರ ಪರಿಷ್ಕರಣೆ ಮಾಡಬೇಕು, ಸ್ಕೀಂ ನೌಕರರಿಗೆ ಭರವಸೆ ನೀಡಿದಂತೆ ವೇತನ ಹೆಚ್ಚಳ ಮಾಡಬೇಕು, ಗ್ರಾಮ ಪಂಚಾಯತ್, ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು, ಗುತ್ತಿಗೆ, ಹೊರಗುತ್ತಿಗೆ ನೌಕರರ ಖಾಯಂಮಾತಿಯ ಶಾಸನ ರೂಪಿಸಬೇಕು, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಈ ಧರಣಿ ನಡೆಯುತ್ತಿದೆ.
ಕಟ್ಟಡ ಕಾರ್ಮಿಕರ ಪ್ರತಿಭಟನೆಯ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಸಿಐಟಿಯು ಮಹಾಂತೇಶ್, “ಕಳೆದ ಮೂರು ದಿನಗಳಿಂದ ಸಿಐಟಿಯು ವತಿಯಿಂದ ಈ ಹೋರಾಟ ನಡೆಯುತ್ತಿದೆ. ರಾಜ್ಯದ ಬಜೆಟ್ ಸಮಯದಲ್ಲಿ ಗಮನ ಸೆಳೆಯಲು ಹಾಗೂ ಸಮಸ್ಯೆಗಳನ್ನ ಪರಿಹಾರ ಮಾಡಬೇಕು ಎಂದು ಈ ಹೋರಾಟ ಮಾಡುತ್ತಿದ್ದೇವೆ. ಮಾರ್ಚ್ 5ರಂದು ರಾಜ್ಯದ ಸಾವಿರಾರು ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. 1996ರಲ್ಲಿ ಕಾನೂನು ಬಂದಿದೆ. 2007 ಕಲ್ಯಾಣ ಮಂಡಳಿ ರಚನೆಯಾಗಿದೆ. 10ಕ್ಕಿಂತ ಹೆಚ್ಚು ಸೌಲಭ್ಯಗಳು ಸಿಗುತ್ತಿವೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಶೈಕ್ಷಣಿಕ ಧನಸಹಾಯ. ಈಗ ಈ ಧನಸಹಾಯವನ್ನ ಕಡಿತ ಮಾಡಿದ್ದಾರೆ. 9.5 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ಕಡಿತ ಮಾಡಿದ್ದಾರೆ. ಕಟ್ಟಡ ಕಾರ್ಮಿಕರು ಅನಕ್ಷರಸ್ಥರು, ಆದರೆ, ಅವರ ಮಕ್ಕಳು ಕಲಿಯುತ್ತಿದ್ದಾರೆ. ಇದು ಹೆಮ್ಮೆಪಡಬೇಕಾದ ವಿಚಾರ. ಆದರೆ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಇದನ್ನ ಜಾರಿ ಮಾಡಬೇಕು. ಸಾವಿರಾರು ಕೋಟಿ ಹಣವಿದೆ. ಆದರೆ, ಕಾರ್ಮಿಕರಿಗೆ ಮನೆ ಕಟ್ಟುವುದಕ್ಕೆ ಸಹಾಯಧನ ನೀಡಬೇಕು. ವೈದ್ಯಕೀಯ ಸೌಲಭ್ಯವಿಲ್ಲ. ರಕ್ಷಣೆ ಇಲ್ಲ. ಅಗತ್ಯ ಇರುವವರಿಗೆ ಸೌಲಭ್ಯ ನೀಡಬೇಕು. ಮಹಿಳೆಯರಿಗೆ ಸುರಕ್ಷತೆ ಇಲ್ಲ. ಕನಿಷ್ಠ ವೇತನ ಇಲ್ಲ. ಕಾರ್ಮಿಕರು ಕೆಲಸ ಮಾಡುವಾಗ ಕಟ್ಟಡ ಬಿದ್ದಾಗ ಸತ್ತವರಿಗೆ ಪರಿಹಾರ ನೀಡಿದ್ದಾರೆ. ಆದರೆ, ಇಂದಿಗೂ ಸಾವು ಬದುಕಿನ ನಡುವೆ ಹೋರಾಟ ಮಾಡುವವರಿಗೆ ಪರಿಹಾರ ನೀಡಿಲ್ಲ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಇತ್ಯರ್ಥ ಪಡಿಸಬೇಕು. ಈ ಹಿಂದೆ ಭ್ರಷ್ಟ ಬಿಜೆಪಿ ವಿರುದ್ಧವಾಗಿ ಹೋರಾಟ ಮಾಡಿದ್ದೀವಿ. ಇವತ್ತಿನ ಕಾಂಗ್ರೆಸ್ ಸರ್ಕಾರ ತರುವ ನೀತಿಗಳು ಕಾರ್ಮಿಕರ ಪರವಾಗಿದ್ದರೇ ಸ್ವಾಗತ ಮಾಡುತ್ತೇವೆ. ಕಾರ್ಮಿಕರ ವಿರುದ್ಧವಾಗಿದ್ದರೇ, ಇದರ ವಿರುದ್ಧ ಹೋರಾಟ ಮಾಡುತ್ತೇವೆ” ಎಂದು ತಿಳಿಸಿದರು.
“ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹಲವಾರು ಸಮಸ್ಯೆಗಳಿವೆ. ನಿವೇಶನ ಭದ್ರತೆ ಸಮಸ್ಯೆಗಳಿವೆ. ಈ ಬಗ್ಗೆ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸುತ್ತಿಲ್ಲ. ಕಿಟ್‌ಗಳ ಹೆಸರಿನ ಮೇಲೆ ಬೇರೆ ಬೇರೆ ಕಾರ್ಯಕ್ರಮಗಳನ್ನ ಆಯೋಜನೆ ಮಾಡುತ್ತಿದ್ದಾರೆ. ಹಲವಾರು ಸಮಸ್ಯೆಗಳು ಕಾರ್ಮಿಕರನ್ನ ಭಾದಿಸುತ್ತಿದೆ. ಸರ್ಕಾರದ ನಡೆ ಖಂಡನೀಯ” ಎಂದು ಕಾರ್ಮಿಕ ಎನ್ ಯಲ್ಲಾಲಿಂಗ ಹೇಳಿದರು.
ಈ ಸುದ್ದಿ ಓದಿದ್ದೀರಾ? ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ನೌಕರರ ಅಹೋರಾತ್ರಿ ಧರಣಿ
ಕಾರ್ಮಿಕೆ ಜ್ಯೋತಿ ಮಾತನಾಡಿ, “ನಾವು ಬೀದರ್‌ನವರು. ನಮಗೆ ಸರ್ಕಾರದಿಂದ ಯಾವುದೇ ರೀತಿಯ ಸಹಾಯ ಇಲ್ಲ. ಕೂಲಿ ಕಡಿಮೆ ಇದೆ. ಮಕ್ಕಳ ವಿದ್ಯಾರ್ಥಿ ವೇತನವೂ ಕೂಡ ಬರುತ್ತಿಲ್ಲ. ಮೂರು ವರ್ಷದಿಂದ ಮಕ್ಕಳ ವಿದ್ಯಾರ್ಥಿ ವೇತನ ನಿಂತು ಹೋಗಿದೆ. 300 ರೂಪಾಯಿ ಕೂಲಿ ಒದೆ. ಈಗ ಬರುವ ಕೂಲಿಯಲ್ಲಿ ಜೀವನ ಹೇಗೆ ಸಾಗಿಸಬೇಕು. ಚುನಾವಣೆಯಲ್ಲಿ ಗೆಲ್ಲುವವರೆಗೂ ಮಾತ್ರ ರಾಜಕಾರಣಿಗಳು ನಮ್ಮ ಬಳಿ ಬರುತ್ತಾರೆ. ಆದರೆ, ಗೆದ್ದ ಮೇಲೆ ನಮ್ಮ ಸಮಸ್ಯೆಗಳ ಬಗ್ಗೆ ಗಮನವೇ ಕೊಡುವುದಿಲ್ಲ. ನಮಗೆ ಇರುವುದಕ್ಕೆ ಮನೆ ಇಲ್ಲ. ಮನೆಬಾಡಿಗೆ 3000 ಇದೆ. ಮಕ್ಕಳ ವಿದ್ಯಾರ್ಥಿ ವೇತನ ಲಾಕ್‌ಡೌನ್ ಸಮಯದಲ್ಲಿಯೇ ನಿಂತುಹೋಗಿದೆ. ಬರುವ ಕಡಿಮೆ ಸಂಬಳದಲ್ಲಿ ನಮಗೆ ಮನೆ ನಡೆಸುವುದೇ ಕಷ್ಟವಾಗಿದೆ” ಎಂದು ತಮ್ಮ ಸಮಸ್ಯೆ ಹೇಳಿಕೊಂಡರು.
ಬೀದರ್ ಜಿಲ್ಲೆಯ ಕಾರ್ಮಿಕೆ ಪೂಜಾ ಮಾತನಾಡಿ, “ನಮ್ಮ ಮನೆಯಲ್ಲಿ ನಾನು ಒಬ್ಬಳೇ ದುಡಿಯುತ್ತೇನೆ. ನಮ್ಮ ಮನೆಯವರು ತೀರಿಕೊಂಡು ಹತ್ತು ವರ್ಷ ಆಯಿತು. ಇಬ್ಬರೂ ಮಕ್ಕಳನ್ನ ಕಟ್ಟಿಕೊಂಡು ಜೀವನ ಮಾಡುತ್ತಿದ್ದೇವೆ. ಜೀವನ ಮಾಡುವುದು ಕಷ್ಟವಾಗಿದೆ. ಕೂಲಿ ಮಾಡಿದರೆ, ಮಾತ್ರ ನಮ್ಮ ಹೊಟ್ಟೆ ತುಂಬುತ್ತದೆ. ನಮಗೆ ಸರ್ಕಾರದಿಂದ ಯಾವುದೇ ಯೋಜನೆ ಇಲ್ಲ. ಕಟ್ಟಡ ಕಟ್ಟುವ ನಮಗೇ ಸ್ವಂತ ಮನೆ ಇಲ್ಲ” ಎಂದು ಹೇಳಿದರು.
ಕಾರ್ಮಿಕೆ ಸುರೇಖಾ ಮಾತನಾಡಿ, “ನಮ್ಮ ಮನೆಯವರಿಗೆ ಆರೋಗ್ಯ ಸಮಸ್ಯೆ ಇದೆ. ಮಕ್ಕಳ ವಿದ್ಯಾರ್ಥಿ ವೇತನ ಬರುವುದು ನಿಂತು ಹೋಗಿದೆ. ದಿನಕ್ಕೆ ಸಂಬಳ ಬರುವುದೇ 350 ರೂಪಾಯಿ. ಜೀವನ ನಡೆಸುವುದೇ ಕಷ್ಟವಾಗಿದೇ” ಎಂದು ತಿಳಿಸಿದರು.