ಬೀದರ್ ನಗರದ ಗುರುನಾನಕ್ ಪಬ್ಲಿಕ್ ಸ್ಕೂಲ್ ಸ್ಥಾಪನೆಯ ಸುವರ್ಣ ಮಹೋತ್ಸವ ಅಂಗವಾಗಿ ಭಾನುವಾರ ಬೆಳಗಿನ ಜಾವ ಆಯೋಜಿಸಿದ ʼಬೀದರ್ ಮ್ಯಾರಾಥಾನ್ʼಗೆ ಖ್ಯಾತ ನಟ, ನಿರ್ಮಾಪಕ ಸೋನು ಸೂದ್ ಚಾಲನೆ ನೀಡಿದರು.
ನಟ ಸೋನು ಸೂದ್ ಮಾತನಾಡಿ, ʼವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದು, ಯಾರೂ ಕೂಡ ಅಧ್ಯಯನ ಸಮಯ ವ್ಯರ್ಥಮಾಡಿಕೊಳ್ಳಬಾರದು. ಆನ್‌ಲೈನ್ ಗೇಮ್ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಸಾಧನೆಯ ಗುರಿಯೆಡೆಗೆ ಸಾಗಬೇಕು. ಕನಸಿನ ಬೆನ್ನತ್ತಿ ಸಾಕಾರಗೊಳಿಸಲು ಶ್ರಮಿಸಬೇಕುʼ ಎಂದರು.
ʼಸಾಧನೆ ಮಾಡಬೇಕು ಎಂದು ನಿಮ್ಮ ಮನಸ್ಸಿನಲ್ಲಿ ಅಂದುಕೊಂಡರೆ ಆ ಕೆಲಸ ಇಂದಿನಿಂದಲೇ ಪ್ರಾರಂಭಿಸಬೇಕು. ನಾಳೆಗಾಗಿ ಕಾಯಬಾರದು. ತನಗಾಗಿ ಎಲ್ಲರೂ ಬದುಕುತ್ತಾರೆ. ಆದರೆ ಸಮಾಜಕ್ಕಾಗಿ, ದೇಶಕ್ಕಾಗಿ ಬದುಕುವವರ ಸಂಖ್ಯೆ ವಿರಳವಾಗಿದೆ. ದೇಶಕ್ಕೆ ಏನಾದರೂ ಕೊಡುಗೆ ನೀಡಿ ಹೆಸರು ಉಳಿಸಿಕೊಳ್ಳಬೇಕು. ಪುಸ್ತಕ ಮುಚ್ಚುವ ವ್ಯಕ್ತಿಗಳಾಗದೆ ಪುಟಗಳನ್ನು ತೆರೆದು ಓದುವ ಆದರ್ಶ ಸಾಧಕರಾಗಬೇಕುʼ ಎಂದು ಕಿವಿಮಾತು ಹೇಳಿದರು.
ʼಕೋವಿಡ್ ಸಂದರ್ಭದಲ್ಲಿ ನಾವು ಮಾಡಿದ ಕಾರ್ಯ ಜನಮೆಚ್ಚುಗೆಗೆ ಕಾರಣವಾಗಿದೆ. ಗುರುನಾನಕ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಬಲಬೀರಸಿಂಗ್ ಹಾಗೂ ಉಪಾಧ್ಯಕ್ಷೆ ರೇಷ್ಮಾ ಕೌರ್ ಅವರು ಆದೇಶ ಮಾಡಿದರೆ ನನ್ನ ಜನಸೇವೆ ಬೀದರ ಜಿಲ್ಲೆಗೂ ವಿಸ್ತರಿಸುವೆʼ ಎಂದರು.
ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಮಾತನಾಡಿ,ʼಬೀದರ ಮ್ಯಾರಥಾನ್ ನಲ್ಲಿ 6 ಸಾವಿರ ಜನರು ನೋಂದಣಿ ಮಾಡಿಸಿಕೊಂಡಿದ್ದರು. ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದಕ್ಕೆ ಎಲ್ಲರಿಗೂ ಕೃತಜ್ಞತೆಗಳು ಸಲ್ಲಿಸುತ್ತೇನೆ. ಸೋನು ಸೂದ್ ಅವರ ನಮ್ಮ ಕರೆಗೆ ಓಗೊಟ್ಟು ಬಂದಿದ್ದು ಖುಷಿ ತಂದಿದೆ. ಅವರ ಸಮಾಜಮುಖಿ ಕಾರ್ಯ ಮತ್ತು ಆದರ್ಶಗಳು ಇತರರಿಗೆ ಮಾದರಿಯಾಗಿವೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಎಮ್‌ಎಲ್‌ಸಿ ಮಾಡುವಂತೆ ಒತ್ತಾಯ
ಇದೇ ವೇಳೆ 21 ಕಿ.ಮೀ, 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ಮ್ಯಾರಥಾನ್‌ನಲ್ಲಿ ಪ್ರಥಮ ,ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿಜೇತರಿಗೆ ಸೋನು ಸೂದ್ ಅವರು ಮೆಡಲ್, ಟ್ರೋಫಿ, ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಿದರು.
ಗುರುನಾನಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಬಲಬೀರಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಪುನೀತ್ ಸಿಂಗ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.