ದೆಹಲಿ ಚಲೋ ಪ್ರತಿಭಟನೆಗಾಗಿ ದೆಹಲಿಗೆ ಹೊರಟಿದ್ದ ರೈತರ ಮೇಲೆ ಕೇಂದ್ರ ಮತ್ತು ಹರಿಯಾಣ ಬಿಜೆಪಿ ಸರ್ಕಾರ ದೌರ್ಜನ್ಯ ಎಸಗುತ್ತಿರುವುದನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಹುಮನಾಬಾದ್ ತಾಲೂಕು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಡಾ.ಬಿ.ಅಂಬೇಡ್ಕರ್ ವೃತ್ತ ಮೂಲಕ ಹೊಸ ತಹಸೀಲ್ದಾರ್ ಕಚೇರಿವರೆಗೆ ತೆರಳಿ, ಪ್ರಧಾನಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ಸಲ್ಲಿಸಿದರು.
“ದೇಶಕ್ಕೆ ಅನ್ನ ನೀಡುವ ರೈತ ಬೆಳೆದ ಬೆಳೆಗಳಿಗೆ ಡಾ.ಸ್ವಾಮಿನಾಥನ್ ಶಿಫಾರಸ್ಸಿನಂತೆ ಬೆಂಬಲ ಬೆಲೆಗೆ ಕಾನೂನು ತರುವ ಬದಲು ರೈತನನ್ನು ಬಲಿ ತಗೆದು ಕೊಳ್ಳುವ ನೀತಿ ಸರಿಯೇ? ಕೋಮುಭಾವನೆಗಳನ್ನು ಪ್ರಚೋದನೆಗೊಳಿಸಿ ಜನರನ್ನು ಧಾರ್ಮಿಕವಾಗಿ ಕಿತ್ತಾಡಲು ಬೇಕಾದ ವಿಷಮ ವಾತಾವರಣವನ್ನು ಸೃಷ್ಟಿಸುವುದು ಸಬ್ ಕಾ ವಿಶ್ವಾಸ್ ಎಂದಾರಾಗುತ್ತದೆಯೇ” ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
“ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷಗಳಾಗಿವೆ. ಚುನಾವಣೆಗೂ ಮೊದಲು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ 2 ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಡಾ.ಸ್ವಾಮಿನಾಥನ್ ರವರ ಶಿಫಾರಸ್ಸಿನಂತೆ ಬೆಂಬಲ ಬೆಲೆಯ ಕಾನೂನು ರಚಿಸುವುದಾಗಿ ತಿಳಿಸಿದ್ದೀರಿ. ಆದರೆ ಎಲ್ಲಿ ಭರವಸೆಗಳು ಈಡೇರಿಸುವಲ್ಲಿ ಕೇಂದ್ರ ವಿಫಲವಾಗಿದೆ” ಎಂದು ದೂರಿದರು.
ಸರ್ಕಾರ ಸಂಪೂರ್ಣವಾಗಿ ತನ್ನ ನೀತಿಗಳನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ದೇಶದ ಎಲ್ಲಾ ರೈತರು ಕಾರ್ಮಿಕರು ಒಂದಾಗಿ ಚಳುವಳಿ ನಡೆಸುತ್ತಿದ್ದಾರೆ. ಆದರೆ ಇಂತಹ ಚಳುವಳಿಗಳ ಮೇಲೆ ದೆಹಲಿಯಲ್ಲಿ ಪೋಲೀಸ್ ದಬ್ಬಾಳಿಕೆ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ನೀಡುವ ನೀತಿಗಳನ್ನು ಜಾರಿಗೆ ತರಬೇಕು. ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಮತ್ತು NMP ಯನ್ನೊಳಗೊಂಡಂತೆ ಎಲ್ಲಾ ಸ್ವರೂಪದ ಖಾಸಗಿಕರಣವನ್ನು ಕೈಬಿಡಬೇಕು. ಡಾ.ಸ್ವಾಮಿನಾಥನ್ ಶಿಫಾರಸ್ಸಿನಂತೆ ಬೆಂಬಲ ಬೆಲೆಗೆ ಕಾನೂನು ರಚಿಸಬೇಕು. ನ್ಯಾಯಯುತ GST ಪಾಲು ರಾಜ್ಯಗಳಿಗೆ ಕೊಡುವ ಮುಖಾಂತರ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದು ಸೇರಿ ಒಟ್ಟು 14 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೌಡಗಾಂವ್ ಗ್ರಾಮದಿಂದ ಬೀದರ್‌ಗೆ ಪಾದಯಾತ್ರೆ
ಪ್ರತಿಭಟನೆಯಲ್ಲಿ ಸಮಿತಿಯ ಪ್ರಮುಖರಾದ ಗೌಸೋದ್ದಿನ್, ಬಸವರಾಜ ಮಾಳಗೆ, ಶಶಿಕಾಂತ್ ಡಾಂಗೆ, ಇಸಾಮೋದ್ದಿನ್, ಲಖನ್ ಮಹಾಜನ್, ಆರತಿ, ಅಂಬುಬಾಯಿ ಮಾಳಗೆ, ರೇಷ್ಮಾ ಹಂಸರಾಜ್, ಪ್ರಭು ಸಂತೋಷ್ಕರ್, ಖಾಸೀಂ ಸಾಬ್, ಜೈಶ್ರೀ ಜಾಧವ್ ಸೇರಿದಂತೆ ಇತರರಿದ್ದರು.