ಸಂಸತ್ತಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪೌರತ್ವ ರದ್ದುಪಡಿಸಿ ದೇಶದ್ರೋಹ ಪ್ರಕರಣ ದಾಖಲಿಸಿ ದೇಶದಿಂದ ಗಡಿಪಾರು ಮಾಡಬೇಕೆಂದು ಭೀಮ್ ಆರ್ಮಿ ಏಕತಾ ಮಿಷನ್ ಪದಾಧಿಕಾರಿಗಳು ಆಗ್ರಹಿಸಿದರು.
ಭೀಮ್ ಆರ್ಮಿ ತಾಲ್ಲೂಕು ಘಟಕದಿಂದ ಭಾಲ್ಕಿ ಪಟ್ಟಣದ ಶನಿವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಮಿತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಾಲ್ಲೂಕು ಆಡಳಿತಕ್ಕೆ ಸಲ್ಲಿಸಿದರು.
ಶತಮಾನಗಳಿಂದ ಇದ್ದ ಜಾತಿ ವರ್ಣ ವ್ಯವಸ್ಥೆ ದಾಸ್ಯದ ಸಂಕೋಲೆಯಿಂದ ಬಿಡುಗಡೆಗೊಳಿಸಿದ ಬಾಬಾ ಸಾಹೇಬ್ ಅಂಬೇಡ್ಕರ್, ಇಂದು ದೇಶ ಸ್ವಾಭಿಮಾನದಿಂದ ತಲೆಯೆತ್ತಿ ನಡೆಯುತ್ತಿದ್ದರೆ ಅದಕ್ಕೆ ಬಾಬಾ ಸಾಹೇಬರ ಹೋರಾಟವೇ ಕಾರಣ. ಶೋಷಿತ, ತಳಸಮುದಾಯದಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟ ಅಂಬೇಡ್ಕರ್ ಅವರಿಗೆ ಅಮಿತ್ ಶಾ ಅವಮಾನಿಸಿದ್ದು ತೀವ್ರವಾಗಿ ಖಂಡಿಸುತ್ತೇವೆʼ ಎಂದರು.
ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ “ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಅನ್ನೋದು ಈಗ ಕೆಲವರಿಗೆ ಫ್ಯಾಷನ್ ಆಗಿದೆ. ಇಷ್ಟು ಬಾರಿ ದೇವರ ನಾಮ ಜಪಿಸಿದರೆ ಏಳೇಳು ಜನ್ಮಕೂ ಸ್ವರ್ಗ ಪ್ರಾಪ್ತಿಯಾಗುತ್ತದೆ” ಎಂದು ಮಾತನಾಡಿ ಅವಮಾನಿಸಿದ್ದಾರೆ. ಪ್ರಜಾಪ್ರಭುತ್ವದ ಘನತೆಯಿಂದ ಮುನ್ನಡೆಸಬೇಕಾದ ಗೃಹ ಸಚಿವರು ಬಾಬಾ ಸಾಹೇಬರ ಬಗ್ಗೆ ಹಗುರವಾಗಿ ಮಾತನಾಡಿರುವುದು ನೋಡಿದರೆ ದೇಶದಲ್ಲಿ ಮನುಸ್ಮೃತಿಯನ್ನು ಮತ್ತೊಮ್ಮೆ ಜಾರಿಗೊಳಿಸಲು ಯತ್ನಿಸಲಾಗುತ್ತಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಗೃಹ ಸಚಿವ ಅಮಿತ್ ಶಾ ವಿರುದ್ಧ ದೇಶದ್ರೋಹ ದೂರು ದಾಖಲಿಸಿ, ಸಂಪುಟದಿಂದ ವಜಾಗೊಳಿಸಬೇಕು. ದೇಶದಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ರಾಜ್ಯಾದಾದ್ಯಂತ ಹೋರಾಟ ತೀವ್ರಗೊಳಿಸಬೇಕಾಗುತ್ತದೆʼ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ತಾಲ್ಲೂಕು ಘಟಕ ಅಧ್ಯಕ್ಷ ಸಿದ್ಧಾರ್ಥ ಪ್ಯಾಗೆ, ಉಪಾಧ್ಯಕ್ಷರು ಧರ್ಮೇಂದ್ರ ಮೊಳಕೆರೆ ಸೇರಿದಂತೆ ಪ್ರಮುಖರಾದ ವಿಶಾಲ ಬಂಧು, ಅಶೋಕ ಗಾಯಕವಾಡ, ಪ್ರಶಾಂತ ಕೊಟ್ಟಗೇರಾ, ರತನ್ ಸೋನಾಳೆ, ಹರ್ಷಿತ್ ದಾಂಡೇಕರ್, ಸಚಿನ್ ಅಂಬೇಸಾಂಗವಿ, ಸುನೀಲ ವಾಂಜರೆ, ಧನರಾಜ್ ಕುಂದೆ, ತುಕಾರಾಮ್ ಕಾಸ್ಲೆ, ರಾಹುಲ್ ಪ್ಯಾಗೆ, ಲೋಕೇಶ್ ಕಾಂಬ್ಳೆ, ಸಂದೀಪ್ ಮೋರೆ ಹಾಗೂ ಇತರರು ಭಾಗವಹಿಸಿದ್ದರು.
ಔರಾದ್ : ಅಮಿತ್ ರಾಜಿನಾಮೆಗೆ ದಸಂಸ ಒತ್ತಾಯ
ರಾಜ್ಯಸಭೆಯಲ್ಲಿ ಡಾ.ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು. ರಾಷ್ಟ್ರಪತಿಯವರಿಗೆ ಬರೆದ ಮನವಿ ಪತ್ರವನ್ನು ಔರಾದ್ ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಸಲ್ಲಿಸಿದರು.
ಸಂಸತ್ತಿನಲ್ಲಿ ಅಮಿತ್ ಶಾ ಡಾ.ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿ ಅವಹೇಳನ ಮಾಡಿದ್ದು ಖಂಡನೀಯ. ಬಿಜೆಪಿಯವರು ಅಂಬೇಡ್ಕರ್ ಮತ್ತು ಸಂವಿಧಾನವನ್ನು ಗೌರವಿಸುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ದೇಶದಲ್ಲಿ ಮನುಸ್ಮೃತಿ ತರಲು ಹೊರಟಿರುವುದು ಇದರಿಂದ ಸ್ಪಷ್ಟವಾಗಿದೆʼ ಎಂದರು.

ಬಾಬಾ ಸಾಹೇಬರ್ ಅವರ ಕುರಿತು ಅವಹೇಳನ ಮಾತಾಡಿದ ಅಮಿತ್ ಶಾ ತಮ್ಮ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಅವರು ದೇಶದ ಜನತೆಗೆ ಕ್ಷಮೆ ಕೇಳಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆ ನಾಳೆ ಲೋಕಾರ್ಪಣೆ
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ್, ತಾಲೂಕು ಸಂಚಾಲಕ ಜೈಪ್ರಕಾಶ್ ಅಷ್ಟೂರೆ ಇದ್ದರು.