ಸ್ಮಶಾನಕ್ಕೆ ತೆರಳುವ ದಾರಿಯ ಸಮಸ್ಯೆ ಬಗೆಹರಿಯದ ಕಾರಣ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಚಿಕ್ಕಮಣ್ಣೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಣ್ಣೂರು ಗ್ರಾಮದ ಯಲ್ಲಮ್ಮ ತಳವಾರ ಎಂಬ ಮಹಿಳೆ ಭಾನುವಾರ ಮೃತಪಟ್ಟಿದ್ದು, ಅಂತ್ಯಸಂಸ್ಕಾರಕ್ಕೆ ತೆರಳುವ ವೇಳೆ ಗ್ರಾಮದ ಜಮೀನಿನ ಮಾಲೀಕರೊಬ್ಬರು ಬೆಳೆ ಹಾಳಾಗುವುದರಿಂದ ಸ್ಮಶಾನಕ್ಕೆ ತೆರಳಲು ಅವಕಾಶ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಕುಟುಂಬಸ್ಥರು ಗ್ರಾಮ ಪಂಚಾಯತ್ ಕಚೇರಿ ಮುಂದೆ ಶವ ತೆಗೆದುಕೊಂಡು ಹೋಗಿ ಪ್ರತಿಭಟನೆ ನಡೆಸಿದರು.
ಸ್ಮಶಾನ ಭೂಮಿಗೆ ತೆರಳಲು ದಾರಿ ಸಮಸ್ಯೆಯಿದ್ದು, ಸರಿಪಡಿಸುವಂತೆ ತಹಶೀಲ್ದಾರ್ ಗಮನಕ್ಕೆ ತರಲಾಗಿತ್ತು. ಆದರೆ ಸಮಸ್ಯೆ ಬಗೆಹರಿಸುವ ಬಗ್ಗೆ ಯಾವುದೇ ಪ್ರಯತ್ನ ಮಾಡಿಲಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕೆ.ನಾಗರಾಜ, ಸಿಪಿಐ ಸಿದ್ದಪ್ಪ ಬೀಳಗಿ ಅವರೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿ ಪ್ರತಿಭಟನೆ ಮುಂದುವರೆಸಿದರು.
ಸ್ಮಶಾನ ಜಾಗದ ಸಮಸ್ಯೆ ಹಿಂದಿನ ತಹಶೀಲ್ದಾರ್ ಗಮನಕ್ಕೆ ಬಂದಿದ್ದು, ನನಗೆ ಗೊತ್ತಿಲ್ಲ. ಸ್ಮಶಾನಕ್ಕೆ ದಾರಿ ಇರುವ ಬಗ್ಗೆ ಯಾವುದೇ ದಾಖಲೆ ಲಭ್ಯವಿಲ್ಲ. ಸಮೀಕ್ಷೆ ನಡೆಸಿ ರಸ್ತೆಗೆ ಅಗತ್ಯವಾದ ಜಾಗ ಖರೀದಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು” ಎಂದು ರೋಣ ತಹಶಿಲ್ದಾರ್ ಕೆ.ನಾಗರಾಜ ಭರವಸೆ ನೀಡಿದರು.