ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ನಾಗಾವಿ ದೇವಸ್ಥಾನದಿಂದ ಸಾತನೂರ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗುಂಡಿಗಳು ಬಿದ್ದು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಕೂಡಲೇ ರಸ್ತೆ ದುರಸ್ತಿಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಮೌನೇಶ್ ಭಂಕಲಗಾ ಒತ್ತಾಯಿಸಿದ್ದಾರೆ.
“ಚಿತ್ತಾಪುರ ಪಟ್ಟಣದಿಂದ ಸಾತನೂರ ಗ್ರಾಮದ ರಸ್ತೆ ಮಧ್ಯೆ ಪ್ರತಿನಿತ್ಯ ನೂರಾರು ರೈತರು ಎತ್ತಿನ ಬಂಡಿ, ಟ್ರ್ಯಾಕ್ಟರ್ ಗಳ ಮೂಲಕ ಕೃಷಿ ಕೆಲಸ, ಕಾರ್ಯಗಳಿಗಾಗಿ ತಿರುಗಾಡುತ್ತಾರೆ. ಅಲ್ಲದೆ ಸಾತನೂರ, ಅಳ್ಳೊಳ್ಳಿ, ಭಂಕಲಗಿ, ಆಲ್ಲೂರ, ದಂಡಗುಂಡ ಗ್ರಾಮಗಳ ಜನರು ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ. ಸುಮಾರು 3ಕಿ.ಮೀ. ರಸ್ತೆ ಹದಗೆಟ್ಟ ಪರಿಣಾಮ ರೈತರು, ವಾಹನ ಸವಾರರು ಪರದಾಡುವಂತಾಗಿದೆ” ಎಂದು ದೂರಿದರು.
ವಾಹನ ಸವಾರರು ಗುಂಡಿ ತಪ್ಪಿಸುವ ಭರದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮಳೆಗಾಲ ಆರಂಭದ ಮುನ್ನ ಗುಂಡಿ ಮುಚ್ವುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿ ಮಾಹಿತಿ : ಅನಂತ್ ದೇಶಪಾಂಡೆ