ಮುಂಗಾರಿನ ಮೊದಲ ಉಳುಮೆ ‘ ಹೊನ್ನಾರು ‘. ಬೇಸಿಗೆಯ ಸುಡು ಬಿಸಿಲಿನ ನಡುವೆಯೇ ಮಳೆ ಬಿರುಸುಗೊಂಡಿದ್ದು ಕೊಂಚ ನಿರಾಳ. ನೀರಿನ ಅಭಾವ ತಲೆದೂರುವ ಆರಂಭಿಕ ದಿನಗಳಲ್ಲಿರುವಾಗ ಮಾರ್ಚ್ ತಿಂಗಳಲ್ಲಿ ಮೈಸೂರು, ಚಾಮರಾಜನಗರ, ಕೊಡಗು ಸೇರಿದಂತೆ ಬೇರೆ ಬೇರೆ ಜಿಲ್ಲೆಯಲ್ಲಿಯೂ ಸಹ ಮಳೆಯಾಗುತ್ತಿರುವುದು ಹರ್ಷಧಾಯಕ ವಿಚಾರ.
ಫೆಬ್ರವರಿ ತಿಂಗಳ ಆರಂಭದಲ್ಲೇ ಬಿಸಿಲಿನ ಝಳಕ್ಕೆ ಮೈ ಒಡ್ಡದಾದ ಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲೂ ಬಿಸಿಲ ಬೇಗುದಿ ಮಾರ್ಚ್ ತಿಂಗಳ ಮೊದಲವಾರದ ಆರಂಭಿಕ ದಿನಗಳಲ್ಲೇ ಹೊರ ಬಾರಲಾರದಷ್ಟು ತಿಕ್ಷಣವಾಗಿ, ಉರಿ ಬಿಸಿಲನ ನರ್ತನ ಆರಂಭವಾಗಿತ್ತು. ಸುಡು ಬಿಸಿಲ ಬೇಗೆ ಎಷ್ಟರ ಮಟ್ಟಿಗೆ ಅಂದರೆ ಕೆರೆಕಟ್ಟೆಗಳು, ನದಿ ಮೂಲಗಳು ಬತ್ತಿ, ಹಸಿರು ಒಣ ತರಗೆಲೆಯಾಗಿತ್ತು. ಹವಾಮಾನ ಇಲಾಖೆ, ಜಿಲ್ಲಾಡಳಿತ ಕೂಡ ಕೆಲವೊಂದು ನಿಯಮ ಹೇರಿ ಬಿಸಿಲಿನಿಂದ ಪಾರಾಗಲು ಸಲಹೆ, ಸೂಚನೆ ಹೊರಡಿಸುವಷ್ಟರ ಮಟ್ಟಿಗೆ ಏರಿಕೆ ಕಂಡಿತ್ತು.ಜನರಿಗೂ ಅಷ್ಟೇ ಮದ್ಯಾನ್ಹ 12 ರಿಂದ 3 ರ ವರೆಗೆ ಹೊರ ಹೋಗುವುದನ್ನು ತಪ್ಪಿಸಿರಿ ಅಂದಿತ್ತು.
ಇನ್ನೂ, ಬೇಸಿಗೆಯ ದಿನಗಳು ಬಾಕಿ ಇರುವಾಗಲೇ ಮಳೆಯ ಆರಂಭ ಮನಸ್ಸಿಗೆ ನಿರಾಳ, ನೆಮ್ಮದಿ ತರಿಸಿರುವುದಂತು ನಿಜ. ಅದರಲ್ಲೂ ವಾಡಿಕೆಯಂತೆ ಈ ತಿಂಗಳಲ್ಲಿ ಆಗೋಮ್ಮೆ, ಹೀಗೊಮ್ಮೆ ಅಡ್ಡ ಮಳೆ ಬೀಳುವುದು ಸಹಜ. ವ್ಯಾಪಾಕವಾಗಿ ಮಳೆಯಾಗುವುದು ಕಡಿಮೆ. ಆದರೆ, ಈ ಬಾರಿ ಸತತವಾಗಿ ಹಿಂದಿಂದೆಯೇ ಮಳೆಯಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ತರಿಸಿದೆ. ಈಗ ಬಿತ್ತನೆ, ವ್ಯವಸಾಯದ ಕಾಲವಲ್ಲ. ಆದರೂ, ಭೂಮಿಯನ್ನು ಹಸನು ಮಾಡುವ ಸಮಯ.

ಭೂಮಿಯನ್ನು ಉತ್ತಿ ಕಳೆ ತೆಗೆದು ಮಳೆ ಬೀಳುವ ಸಮಯಕ್ಕೆ ಅಣಿ ಮಾಡಿಕೊಳ್ಳುವ ಸಂದರ್ಭ. ರೈತಾಪಿ ವರ್ಗ ಸರ್ವೇ ಸಾಮಾನ್ಯ ಒಕ್ಕಲುತನಕ್ಕೆ ಇಳಿಯುವುದು ಯುಗಾದಿ ಹಬ್ಬದಂದು ಧನ ಕರಿಗೆ ಸಿಂಗಾರ ಮಾಡಿ. ನೊಗ, ನೇಗಿಲಿಗೆ ಪೂಜೆ ಸಲ್ಲಿಸಿ. ಹೊನ್ನಾರನ್ನು ಊರಿನ ಬಸಪ್ಪನ ಗುಡಿ ಮುಂದೆ ಕಟ್ಟಿ ಊರಿನ ನೆರೆ ಹೊರೆಯವರೆಲ್ಲ ಭೂಮಿಗೆ ಇಳಿದು ಉತ್ತುವುದೇ ಮುಂಗಾರಿನ ಮೊದಲ ಕೃಷಿ ಆರಂಭದ ‘ ಹೊನ್ನಾರು ‘.
” ರೈತಾಪಿ ವರ್ಗಕ್ಕೆ ಸಡಗರ, ಸಂಭ್ರಮದ ಸಮಯ. ಅಲ್ಪ ಸಮಯದ ಬಿಡುವಿನಿಂದ ಮತ್ತೆ ಕೃಷಿ ಕಾಯಕಕ್ಕೆ ಹೊರಳುವ ಸಮಯ. ರೈತ ಎಂದಿಗೂ ವಿಶ್ರಾಂತಿ ಬಯಸಲ್ಲ, ವಿಶ್ರಾಂತಿ ಅನ್ನುವ ಮಾತೆ ಇಲ್ಲ. ಆದರೂ, ಕೃಷಿ ಚಟುವಟಿಕೆಯಿಂದ ಒಂದಷ್ಟು ದಿನ ವಿರಮಿಸಿ ಆರ್ಥಿಕ ಸಂಪನ್ಮೂಲದ ಕಡೆಗೆ ಗಮನ ಹರಿಸಿ ಮತ್ತೆ ವ್ಯವಸಾಯಕ್ಕೆ ಹೊಂದಿಸಿಕೊಳ್ಳುವ ತವಕ. ಉತ್ತಿ,ಬಿತ್ತಿ ಕೈ ಕೆಸರಾದಂತೆ ನಾಡಿಗೆ ಅನ್ನ ನೀಡುವ ಅನ್ನದಾತ. ನೇಗಿಲನ್ನು ಹಿಡಿಯುವ ಸ್ಪರ್ಶ್ಷಾ ಕ್ಷಣ. ಭೂಮಿಯನ್ನು ಹಸನು ಮಾಡಲು ನೇಗಿಲಿಗೆ ನೊಗ ಏರಿಸಿ, ಎತ್ತಿಗೆ
ಕಟ್ಟಿ, ಮಾರುಗುಕ್ಕೆ ಇರಿಸಿ, ಮೇಣಿ ಹಿಡಿದ ಅಂದರೆ ಅಲ್ಲಿಗೆ ಕಾಯಕ ಆರಂಭ.ಅದೇ ಆತನಿಗೆ ನಿಜ ಸ್ವರ್ಗ, ಮುಖದಲ್ಲಿ ನಗು, ಮಳೆ ಬಿದ್ದರೆ ಅನ್ನದಾತನ ಹರ್ಷಕ್ಕೆ ಪಾರವೇ ” ಇಲ್ಲ.

ಉಳುಮೆಯಲ್ಲಿ ಕರ್ಮ, ಧರ್ಮ ಕಂಡುಕೊಂಡ ರೈತಾಪಿ ವರ್ಗ ಹೊನ್ನಾರಿನ ಮೂಲಕ ಚಟುವಟಿಕೆ ಆರಂಭಿಸುತ್ತಾರೆ. ಬಿಗಿತುಗೊಂಡ ಭೂಮಿಯನ್ನ ಸಡಿಲ ಮಾಡುತ್ತಾ ಉಳುಮೆಯಲ್ಲಿ ಹಳ ತೆಗೆದು, ಎಂಟೆ ಒಡೆದು ಭೂಮಿ ಹಸನು ಮಾಡುತ್ತಾ. ಬಿತ್ತನೆಗೆ ತಯಾರಿ, ಮಳೆ ಬಿದ್ದಾಗ ಘಮ್ಮೆನ್ನುವ ಮಣ್ಣಿನ ಸುವಾಸನೆಯಲ್ಲಿ ನೇಗಿಲ ಹೇಗಿಲಿಗೇರಿಸಿ, ಎತ್ತು ಗಳ ಅಟ್ಟುವುದೇ ಬಲು ಸೋಜಗ.
‘ ರೈತನಿಗೆ ಹಬ್ಬ, ಹರಿದಿನ ಎಷ್ಟೇ ಇದ್ದರು ಗುಳ, ನೇಗಿಲು, ನೊಗ, ಕುಂಟೆ, ಹರಗು, ಚಾವಟಿ, ಮಾರುಗುಕ್ಕೆ, ಮೂಗುದಾರ, ಹಗ್ಗ, ಮೇಣಿ, ಎತ್ತುಗಳೇ ಸರ್ವಸ್ವ, ಐಸಿರಿ ಅದಕ್ಕೆಲ್ಲ ನಮಿಸಿ, ಪೂಜಿಸಿ ಮತ್ತೆ ಅನ್ನ ನೀಡುವ ಪರಿಕರಗಳಿಗೆ ದೈವತ್ವ ಕೊಟ್ಟು ಕಾಯಕವೇ ಕೈಲಾಸ ಅನ್ನುವ ರೈತಾಪಿಗಳ ಆಚರಣೆ ‘ ಹೊನ್ನಾರು ‘. ಕೃಷಿಕರ ಸಂಪ್ರದಾಯಿಕ ಆಚರಣೆ ‘.

ಅಂದಿನಿಂದ ” ಸಹಜವಾಗಿ ಬೆಳೆಗಳ ಅನುಸಾರ ಭೂಮಿ ಹದ ಮಾಡುವುದು ಆರಂಭ ಆಗುತ್ತೆ. ಮೈಸೂರು ಸೀಮೆಯಲ್ಲಿ ವಾಣಿಜ್ಯ ಬೆಳೆಯದ್ದೇ ಮೇಲುಗೈ. ಅದರಲ್ಲೂ, ಪಿರಿಯಾಪಟ್ಟಣ, ಹುಣಸೂರು, ಕೆ ಆರ್ ನಗರ, ಹೆಗ್ಗಡದೇವನ ಕೋಟೆ, ಸರಗೂರು ಭಾಗಗಳು ಹೆಚ್ಚಾಗಿ ವಾಣಿಜ್ಯ ಬೆಳೆಗಳಿಗೆ ಹೊಂದಿಕೊಂಡಿವೆ. ತಂಬಾಕು, ಶುಂಠಿ ಪ್ರಮುಖ ಆಧ್ಯತೆಯ ಬೆಳೆಯಾದರೆ,k ರಾಗಿ, ಚೆಲ್ಕೆ ಇಲ್ಲವೇ ನಾಟಿ ಮಾಡುವುದು ಇದೇ. ಸಾಲು ಬಿತ್ತನೆಗೆ ಅವರೆ, ತಡ್ನಿ, ಹುರುಳಿ, ತೊಗರಿ ಸಹ ವಾಣಿಜ್ಯ ಬೆಳೆಯ ಬಳಿಕ ಬೆಳೆಯುವ ಉಪ ಬೆಳೆಗಳು. ಮನೆ ಬಳಕೆಗೆ ಭತ್ತ ಕೂಡ ಬೆಳೆಯುತ್ತಾರೆ ಅಲ್ಪ ಪ್ರಮಾಣದಲ್ಲಿ “.
ಕೆ ಆರ್ ನಗರ, ಸಾಲಿಗ್ರಾಮ ಹೇಳಿ ಕೇಳಿ ನೀರಾವರಿ ಪ್ರದೇಶ ಮೂಡಲ ಸೀಮೆ ಅಂತಾನೆ ಪ್ರಸಿದ್ದಿ.ಭತ್ತ ಹೆಚ್ಚಾಗಿ ಬೆಳೆಯುವುದರಿಂದ ‘ ಭತ್ತದ ಕಣಜ ‘ ಅಂತಾಲು ಕರೆಸಿಕೊಂಡಿದೆ. ಇಲ್ಲಿ ತಂಬಾಕು ಬೆಳೆಯುವ ರೈತರು ಒಂದು ವರ್ಗವಾದರೆ ಅದರ ಜೊತೆಗೆ ಬಹುಭಾಗ ಭತ್ತ ಬೆಳೆಯುವುದಿದೆ.

ಇನ್ನ ನಂಜನಗೂಡು ಭಿನ್ನವಾಗಿದ್ದು ಇಲ್ಲಿನ ರೈತರಿಗೆ ತಂಬಾಕಿನ ಗಂಧ ಗಾಳಿಯೇ ಗೊತ್ತಿರದ ಪ್ರದೇಶ. ಒಂದಷ್ಟು ಬದಲಾವಣೆ ಇಲ್ಲಿ ಕಾಣಬಹುದು ಇತ್ತೀಚಿಗೆ ಶುಂಠಿ ವ್ಯಾಪಿಸಿದೆ. ಸೂರ್ಯಕಾಂತಿ, ಮೆಕ್ಕೆ ಜೋಳ, ರಾಗಿ,ನೆಲಗಡಲೆ ಬೆಳೆಗಳನ್ನ ಹೆಚ್ಚಾಗಿ ಅವಲಂಬಿಸಿದೆ. ಭತ್ತ ಬೆಳೆಯುವುದಕ್ಕೂ ಆದ್ಯತೆ ಇದ್ದರೆ. ಸರಗೂರು, ಕೋಟೆ ಭಾಗದ ವರೆಗೂ ವ್ಯಾಪಿಸಿದೆ.
” ಒಕ್ಕಲುತನಕ್ಕೆ ಆರಂಭ ‘ಹೊನ್ನಾರು’. ಅದುವರೆಗೆ, ವರ್ಷದ ಒಂದೆರಡು ತಿಂಗಳು ಬಿಡುವು ಬಿಟ್ಟರೆ ವರ್ಷ ಪೂರ್ತಿ ದುಡಿಯುವ ಶ್ರಮಜೀವಿಗಳೆಂದರೆ ರೈತ. ತಂಬಾಕು ಮಾರಾಟ ಮಾಡಿ ಹಣ ಪಡೆಯುವತನಕವು ಕೆಲಸವೇ. ಇದನ್ನ ಆಡು ಬಾಷೆಯಲ್ಲಿ ದೈಗೆಲ್ಸಾ ಅಂತಾರೆ. ಅಂದ್ರೆ ಪೂರ್ಣವಾದಿಗೆ ಸಮಯಕ್ಕೆ ತಕ್ಕಂತೆ ಕೆಲಸ ಮಾಡಲೇಬೇಕು, ನಿರ್ವಹಣೆ ಮಾಡಲೇಬೇಕು.ನಾಳೆ ಮಾಡೋಣ, ನಾಡಿದ್ದು ಮಾಡೋಣ ಅನ್ನುವ ಬೆಳೆ ಅಲ್ಲ.ಆ ಸಮಯಕ್ಕೆ ಆಯಾ ಕೆಲಸ ಆಗಲೇ ಬೇಕು ಇಲ್ಲಾಂದ್ರೆ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಅನ್ನುವ ಅವಸ್ಥೆ “.

ಈಗಾಗಲೇ, ತಂಬಾಕು ಬೆಳೆಗೆ ಪೂರಕವಾಗಿ ಹೊಗೆ ಪಟ ಮಾಡಿ ನಿರ್ವಹಣೆ ಆರಂಭವಾಗಿದೆ.ಇನ್ನೇನು ಏಪ್ರಿಲ್ ತಿಂಗಳಿಗೆ ಟ್ರೈ ಸಸಿ ಮಾಡ್ತಾರೆ. ಇನ್ನ ಇದೇ ರೀತಿ ಸಮಯಕ್ಕೆ ಮಳೆಯಾದರೆ ಸಸಿ ನೆಡುವ ಕೆಲಸ ಆರಂಭ ಆಗುತ್ತೆ.ಗುಣಿ ಯಾರಾಕುವುದು, ಗೊಬ್ಬರ, ಕಳೆ ಹಾಯುವುದು ರಿಡ್ಜ್ ಹೊಡೆಯುವುದು ಹೀಗೆ ರೈತರ ಕೆಲಸ ಚುರುಕಾಗುವ ಸಮಯ.
” ವ್ಯಾಪಾಕವಾಗಿ ಅಲ್ಲದೆ ಇದ್ದರು ಶುಂಠಿ ಕೆಲಸವೂ ಅಲ್ಲಲಿ ಆರಂಭ ಆಗಿದೆ. ಬಿತ್ತನೆ ಕೆಲಸ, ಬೆಡ್ ಮಾಡುವುದು, ಕಂಗು ಯಾರಾಕುವುದು, ಜೆಟ್ ಕೂರಿಸಿ ನೀರು ಚಿಮುಕಿಸುವುದು. ನೆಲ ಹುಲ್ಲು ಹೊದಿಸುವುದು. ಆದರೆ, ಶುಂಠಿ ಬೆಳೆದ ರೈತರಿಗೆ ಈ ಬಾರಿ ಆತಂಕವಿದೆ. ಬೆಳೆದ ಶುಂಠಿಗೆ ಬೆಲೆ ಇರದೆ ನಷ್ಟಕ್ಕೊಳಗಾಗಿ ಭಾಧೆ ಪಟ್ಟಿದ್ದಾರೆ. ದುಬಾರಿ ಬೆಲೆ ತೆತ್ತು ಬಿತ್ತನೆ ಶುಂಠಿ ಖರೀದಿ ಮಾಡಿ, ಖರ್ಚು ಮಾಡಿಯು ಮತ್ತದೇ ಪರಿಸ್ಥಿತಿ ಆದರೆ ಏನಪ್ಪಾ? ಅನ್ನುವ ಗೊಂದಲ ಸಹ ಇರೋದ್ರಿಂದ ಸಧ್ಯಕ್ಕೆ ವಿರಳವಾಗಿ ಶುಂಠಿ ಕೆಲಸ ಆರಂಭಿಕ ಕಂಡಿದೆ “.

ತಂಬಾಕು ಅಂತೂ ಇಂತೂ ರೈತರ ಕೈ ಹಿಡಿದಿದೆ, ಮಾರ್ಕೆಟ್ ಏರುಪೇರು, ಹರಾಜಿನ ಏರಿಳಿತದಿಂದ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರು ಭಾರಿ ಹೊಡೆತವನ್ನೇನು ಅನುಭವಿಸಿಲ್ಲ. ಈ ಭಾರಿ ರೈತರ ನಿರೀಕ್ಷೆಯಂತೆ ಅಲ್ಲದೆ ಇದ್ದರು, ಸಮಾಧಾನಕರವಾಗಿ ತಂಬಾಕು ವಹಿವಾಟು ನಡೆದಿರುವುದು ಸಮಾಧಾನಕರ. ಇವೆರೆಡು ವರ್ಷದ ಬೆಳೆಯಾಗಿದ್ದು ಅತಿ ಹೆಚ್ಚು ಖರ್ಚು ತಗಲುವ, ಕೆಲಸ ಹಿಡಿಯುವಂತದ್ದು.
ಏಪ್ರಿಲ್ ನಿಂದ ಮೇ ತಿಂಗಳಲ್ಲಿ ಬಹುತೇಕ ಕೃಷಿ ಚಟುವಟಿಕೆ ಚುರುಕಾಗಲಿದೆ. ಮಳೆಯ ವಾತಾವರಣ ಇರೋದ್ರಿಂದ, ಈಗಾಗಲೇ ಮಳೆ ಬಿದ್ದು ಭರವಸೆ ಮೂಡಿಸಿರುವುದರಿಂದ. ರೈತರಿಗೆ ಅಷ್ಟೊಂದು ಚಿಂತೆ ಇಲ್ಲ. ಇರುವುದು ದುಬಾರಿ ಗೊಬ್ಬರಗೋಡು ಖರೀದಿ, ಖರ್ಚು, ವೆಚ್ಚ, ಬಿತ್ತನೆ ಕೆಲಸ ಇತ್ಯಾದಿ. ಕಳೆದ ವರ್ಷ, ವರ್ಷದುದ್ದಕ್ಕೂ ಮಳೆಯಾದ್ದರಿಂದ ಕೆರೆಕಟ್ಟೆ ತುಂಬಿ ನೀರಿಗೆ ಅಂತಹ ಅಭಾವ ತರಿಸಲಿಲ್ಲ, ಹಸಿರು ಮೇವಿಗೂ ಅಂತಹ ಕೊರತೆ ಆಗಲಿಲ್ಲ. ಬಿಸಿಲು ಹೆಚ್ಚಾದಂತೆ ಈ ಒಂದೆರೆಡು ತಿಂಗಳು ಆತಂಕ ಮೂಡಿಸಿದ್ದವು. ಈಗ ಮಳೆ ಬೀಳುತ್ತಿರುವುದು, ವಾತಾವರಣ ಮಳೆ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತಿರುವುದು ನೆಮ್ಮದಿ ತರಿಸಿದೆ.

ಆದರೆ, ಇತ್ತೀಚಿಗಿನ ತಾಂತ್ರಿಕವಾಗಿ ಕೃಷಿ ಚಟುವಟಿಕೆಗಳು ಟ್ರ್ಯಾಕ್ಟರ್,ಟಿಲ್ಲರ್ ಬಳಸಿ ಕಲ್ಟಿವೇಟರ್,ಡಿಸ್ಕ್, ರಿಡ್ಜ್ ಮೂಲಕ ಉಳುಮೆ ಮಾಡುವಂತದ್ದು ಆಗ್ತಿದೆ. ಹಳ್ಳಿಯ ಸೊಗಡು ಹೊನ್ನಾರಿನ ಕಳೆ ಮಾಸುತ್ತಿರುವುದು ಭವಿಷ್ಯದ ಆತಂಕ. ಒಕ್ಕಲುತನ ಅಂದರೆ ಎತ್ತು, ಗಾಡಿ, ಧನ, ಕರು, ನೇಗಿಲು ಇದನ್ನೆಲ್ಲಾ ಇತ್ತೀಚಿಗಿನ ಉಪಕರಣ ಅದನ್ನೆಲ್ಲ ಆವರಿಸಿಕೊಂಡು ನೈಜತೆ ತೆರೆಮರೆಗೆ ಸರೆಯುತ್ತಿರುವ ಹೊತ್ತಿನಲ್ಲಿ ‘ ಹೊನ್ನಾರು’ ಮುಂಗಾರಿನ ಕೃಷಿಯ ಆರಂಭದ ಸಂಕೇತವಾಗಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ
ಒಕ್ಕಲುತನದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಒಂದೆರೆಡು ದಿನಗಳಲ್ಲಿ ಯುಗಾದಿ ಬರಲಿದೆ, ಹೊಸ ಹರುಷ ತರಲಿದೆ, ರೈತಾಪಿ ವರ್ಗಕ್ಕೆ ‘ಹೊನ್ನಾರು ‘ ಸಂಭ್ರಮ ತರಲಿದೆ. ನಾಡಿಗೆ ಅನ್ನ ನೀಡುವ ಅನ್ನದಾತರಿಗೆ ಈ ದಿನ.ಕಾಮ್ ಶುಭಕೋರುತ್ತದೆ.