ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಧೂಪತಮಹಾಗಾಂವ್ ಗ್ರಾಮ ಪಂಚಾಯತಿಗೆ ಸೇರಿದ ಮಣಗೆಂಪುರ ಗ್ರಾಮದಲ್ಲಿ ವೃದ್ಧ ದಂಪತಿಗಳಾದ ಶಿವಬಸಪ್ಪ ಪಾಟೀಲ್ (82), ನಿರ್ಮಲಾಬಾಯಿ (77) ಅವರು ತಗಡಿನ ಶೆಡ್ ಇರುವ ಪುಟ್ಟ ಕೋಣೆಯೊಂದರಲ್ಲಿ ಬದುಕು ಸಾಗಿಸುತ್ತಿದ್ದು, ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ.
ನಿರಂತರ ಸುರಿಯುವ ಮಳೆ, ರಭಸದಿಂದ ಬೀಸುವ ಗಾಳಿಗೆ ಎಲ್ಲಿ ಬೀಳುತ್ತದೋ ಎಂದು ಹೆದರಿಕೆಯಿಂದಲೇ ಸರಿಯಾಗಿ ನಿದ್ದೆ ಮಾಡದೆ ಚಳಿಯಲ್ಲಿ ದಿನ ದೂಡುತ್ತಿದ್ದಾರೆ. ತನಗೆ ಕೆಲಸ ಮಾಡಲು ಕೈಲಾಗದಿದ್ದರೂ ಅನಾರೋಗ್ಯ ಪೀಡಿತರಾಗಿ, ಸರಿಯಾಗಿ ಕಿವಿ ಕೇಳದೆ, ಕಣ್ಣು ಕಾಣದೆ ಹಾಸಿಗೆ ಹಿಡಿದ ಪತಿಗೆ ಮೂವರು ಮಕ್ಕಳಲ್ಲಿ ಓರ್ವ ಮಗ ಕಳಿಸುವ ಊಟದ ಸಾಮಗ್ರಿಗಳನ್ನು ಬೇಯಿಸಿ ಕೊಡುವುದರ ಮೂಲಕ ವಯೋವೃದ್ಧೆ ಪತ್ನಿ ಕಷ್ಟಕರ ಜೀವನ ಸಾಗಿಸುತ್ತಿದ್ದಾರೆ.
ಈ ಕುರಿತು ನಿರ್ಮಲಾಬಾಯಿ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಕಳೆದ ಹತ್ತು ವರ್ಷಗಳಿಂದ ಇದೇ ತಗಡಿನ ಛಾವಣಿ ಇರುವ ಪುಟ್ಟ ಕೋಣೆಯಲ್ಲಿ ವಾಸಿಸುತ್ತೇವೆ. ಮಳೆಗೆ ಸೋರುತ್ತದೆ, ಬಿಸಿಲಿನ ತಾಪಕ್ಕೆ ಧಗೆಯಾಗುತ್ತದೆ. ಮೊದಲೇ ಇಬ್ಬರಿಗೂ ಕೈಲಾಗುವುದಿಲ್ಲ. ಇಂಥದರಲ್ಲಿ ಧಾರಾಕಾರವಾಗಿ ಸುರಿಯುವ ಮಳೆಗೆ ಕೋಣೆ ತುಂಬಾ ನೀರು ಸಂಗ್ರಹವಾಗುತ್ತದೆ. ಇದನ್ನು ಹೊರ ಹಾಕುವುದೇ ಕೆಲಸವಾಗಿದೆ. ಇಬ್ಬರಿಗೂ ಆಧಾರ್, ಚುನಾವಣೆ ಗುರುತಿನ ಚೀಟಿ ಇದೆ. ರೇಷನ್ ಕಾರ್ಡ್ ಇಲ್ಲ. ಆದರೆ ಸರ್ಕಾರದ ಯಾವುದೇ ಯೋಜನೆ ಬರುವುದಿಲ್ಲ. ಈಗಲಾದರೂ ಅಧಿಕಾರಿಗಳು ನಮ್ಮ ಸಂಕಷ್ಟ ಆಲಿಸಲಿ” ಎಂದು ಮನವಿ ಮಾಡಿದರು.
“ಸ್ವಲ್ಪ ಮಳೆ ಬಂದರೆ ಮಳೆ ನೀರು ಮನೆಗೆ ನುಗ್ಗುತ್ತವೆ. ಸುತ್ತಲೂ ಚರಂಡಿ ವ್ಯವಸ್ಥೆ ಇಲ್ಲ. ಸರ್ಕಾರದ ಪಿಂಚಣಿ, ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಯಾವುದೇ ಯೋಜನೆಯ ಕೂಡ ದಂಪತಿಗಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ವೃದ್ಧ ದಂಪತಿಗಳಿಗೆ ಸೂರು ಕಲ್ಪಿಸಿ, ಅಗತ್ಯವಿರುವ ಯೋಜನೆ ಕೊಡಿಸಬೇಕು” ಎಂದು ಗ್ರಾಮಸ್ಥ ವೀರಶೆಟ್ಟಿ ಪಾಟೀಲ್ ಆಗ್ರಹಿಸಿದರು.
ಕಳೆದ ಮೂರು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಗೆ ಜಿಲ್ಲೆಯಾದ್ಯಂತ 38ಕ್ಕೂ ಅಧಿಕ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಈ ವೃದ್ಧ ದಂಪತಿ ಸೋರುವ ತಗಡಿನ ಮನೆಯಲ್ಲಿಯೇ ರಾತ್ರಿ ಕಳೆಯುತ್ತಿರುವ ಕುರಿತು ಹೃದಯ ವಿದ್ರಾವಕ ವಿಡಿಯೋ ತುಣುಕು ಭಾನುವಾರ ರಾತ್ರಿ ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ ಕುರಿತು ವಿಶೇಷ ವರದಿಗಾಗಿ ಸೋಮವಾರ ಬೆಳಗ್ಗೆ ಈ ದಿನ.ಕಾಮ್ ತಂಡ ವೃದ್ಧ ದಂಪತಿ ಮನೆಗೆ ಧಾವಿಸಿ ಸಮಸ್ಯೆಗೆ ಆಲಿಸಿತು. ಇದೇ ವೇಳೆ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಸಹ ದಂಪತಿ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಈಗಾಗಲೇ ಇಬ್ಬರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಲಾಗಿದೆ. ರೇಷನ್ ಕಾರ್ಡ್ ಇಲ್ಲದ ಕಾರಣ ಮನೆ ಮಂಜೂರಾತಿಗೆ ಸಮಸ್ಯೆಯಾಗಿದೆ. ಹೀಗಾಗಿ, ಪಡಿತರ ಚೀಟಿಗಾಗಿ ಹೊಸ ಅರ್ಜಿ ಸಲ್ಲಿಸಲು ಸ್ಥಳೀಯರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕಾಣೆಯಾಗಿದ್ದ ಯುವತಿ ಮೂರು ದಿನಗಳ ಬಳಿಕ ಶವವಾಗಿ ಪತ್ತೆ; ಕೊಲೆ ಶಂಕೆ
ಈ ವೇಳೆ ಸಂತಪೂರ ನಾಡ ಕಚೇರಿ ಉಪ ತಹಸೀಲ್ದಾರ್ ಗುರುನಾಥ ಬಿರಾದರ್, ಕಂದಾಯ ನಿರೀಕ್ಷಕ ನರಸಿಂಹಲು, ಗ್ರಾಮ ಲೆಕ್ಕಾಧಿಕಾರಿ ಪಂಡಿತ ಸಿಂಧೆ, ಪಿಡಿಒ ಅನಿತಾ ರಾಠೋಡ್ ಸೇರಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರು ಇದ್ದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
Government help imidetly
Help them immediately what doing modi sarakar
My dear respected BIDAR MP MR. SAGAR KHANDRE ji please help them old age people quickly it’s my humble request to you sir🙌🙏🏻
Jai hind 🇮🇳
Jai karnataka💛❤️