ಖ್ಯಾತ ಬರಹಗಾರ, ಲೇಖಕ ನಿರಂಜನ ಅವರು ಕನ್ನಡದ ಅನನ್ಯ ಪ್ರತಿಭೆ. ಸಾಹಿತ್ಯ ಮತ್ತು ರಾಜಕಾರಣವನ್ನು ಬೇರೆಯಾಗಿ ಕಾಣದ ಹಲವು ಲೇಖಕರಲ್ಲಿ ನಿರಂಜನರು ಒಬ್ಬರು ಎಂದು ಬಾಗಲಕೋಟೆ ಅಧ್ಯಾಪಕ ರೇವಣಸಿದ್ದಪ್ಪ ದೊರೆಗಳ್ ಹೇಳಿದರು.
ಬಸವಕಲ್ಯಾಣ ನಗರದ ಸಂಜೀವಿನಿ ಆಸ್ಪತ್ರೆ ಸಭಾಂಗಣದಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಭಾನುವಾರ ಹಮ್ಮಿಕೊಂಡಿದ್ದ ನಿರಂಜನ ಜನ್ಮ ಶತಮಾನೋತ್ಸವ ಪ್ರಯುಕ್ತ ನಿರಂಜನರ ಸಾಹಿತ್ಯದ ತಾತ್ವಿಕತೆ ಕುರಿತು ಪ್ರತಿಷ್ಠಾನದ 81ನೇ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.
ʼಬರಹದಿಂದಲೇ ಬದುಕುತ್ತೇನೆ ಎಂದು ನಂಬಿದ ಬಹುದೊಡ್ಡ ಬರಹಗಾರ ನಿರಂಜನ. ಕನ್ನಡದ ಹಲವು ಲೇಖಕರು ಪತ್ರಕರ್ತರಾಗಿದ್ದರು. ಅವರ ಬರಹ ಪತ್ರಿಕೆ ಬರಹ, ಅಂಕಣ ಹಾಗೂ ಸೃಜನಶೀಲ ಬರಹವು ಬರೆಯುತ್ತಿದ್ದರು. ನಿರಂಜನರು ಹಾಗೂ ಅವರ ಪತ್ನಿ ಅನುಪಮಾ ನಿರಂಜನ ಕನ್ನಡದ ಶ್ರೇಷ್ಠ ಬರಹಗಾರ ದಂಪತಿ. ಬಾಲ್ಯದಲ್ಲಿ ಕತೆಗಳು ಬರೆದ ನಿರಂಜನರು ಕಮ್ಯುನಿಸ್ಟ್ ತತ್ವ ಸಿದ್ಧಾಂತಗಳನ್ನು ನಿರಂತರವಾಗಿ ಉಳಿಸಿಕೊಂಡು ಬಂದಿದ್ದರುʼ ಎಂದರು.
ನಿರಂಜನರು ಬರೆದ ‘ಕೊನೆಯ ಗಿರಾಕಿ’ ಕತೆಯನ್ನು ಕಲಬುರ್ಗಿಯ ಅಧ್ಯಾಪಕ ಡಾ.ಶಿವಾಜಿ ಮೇತ್ರೆ ಅವರು ವಿಮರ್ಶಿಸಿ, ʼನಿರಂಜನರ ಅವರ ಕತೆ ಮಾತು ಬಾರದ, ಅಸಹಾಯಕ, ಬಡ ಹುಡುಗಿಯನ್ನು ಪುರುಷ ಪ್ರಧಾನ ವ್ಯವಸ್ಥೆ ಎಸಗಿದ ದೌರ್ಜನ್ಯ ಹಾಗೂ ದಾರುಣತೆಯನ್ನು ಬಿಂಬಿಸುತ್ತದೆ. ಕನ್ನಡದ ಶ್ರೇಷ್ಠ ಕತೆಗಳ ಸಾಲಿಗೆ ಸೇರುವ ಈ ಕತೆ ಸಮಾಜದ ವಿಕೃತ ಮುಖವನ್ನು ಅನಾವರಣಗೊಳಿಸುತ್ತದೆʼ ಎಂದು ವಿಶ್ಲೇಷಿಸಿದರು.
ಅಧ್ಯಾಪಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ʼಜನ ಚಳುವಳಿ ಹಾಗೂ ಸಾಮಾಜಿಕ ಬದುಕಿನ ನೋವಿನ, ಅಸಹಾಯಕತೆ, ಸಂಘರ್ಷದ ಹಲವು ಮುಖಗಳು ನಿರಂಜನರ ಸೃಜನಶೀಲ ಕೃತಿಗಳಲ್ಲಿ ಅಡಕಗೊಂಡಿವೆ. ಕನ್ನಡದ ಪ್ರಗತಿಶೀಲ ಚಳುವಳಿಯ ಪ್ರಮುಖ ಧ್ವನಿ ನಿರಂಜನರುʼ ಎಂದು ಹೇಳಿದರು.
ರಂಗಕರ್ಮಿ ಉಮೇಶ ಪಾಟೀಲ ನಿರಂಜನರ ʼಕೊನೆಯ ಗಿರಾಕಿʼ ಕತೆಯನ್ನು ನಾಟಕೀಯವಾಗಿ ಓದಿದರು. ನಾಗೇಂದ್ರ ಬಿರಾದಾರ ರಂಗಗೀತೆ ಹಾಡಿ ಸಭಿಕರನ್ನು ರಂಜಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸರಳ ಸಾಮೂಹಿಕ ವಿವಾಹ : ದಾಂಪತ್ಯಕ್ಕೆ ಕಾಲಿಟ್ಟ 138 ಜೋಡಿಗಳು
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಡಾ. ಬಸವರಾಜ ಸ್ವಾಮಿ, ಪ್ರತಿಷ್ಠಾನದ ನಿರ್ದೇಶಕ ಬಕ್ಕಯ್ಯ ಸ್ವಾಮಿ, ಭೀಮಾಶಂಕರ ಮಾಶಾಳಕರ, ನಾಗಪ್ಪ ನಿಣ್ಣೆ, ಬಸವಣ್ಣಪ್ಪ ನೆಲೋಗಿ, ವೀರಶೆಟ್ಟಿ ಪಾಟೀಲ್, ಶಿವಪುತ್ರ ಸಂಗನಬಸವ, ಸೋಮನಾಥ ಡೊಣಗಾರೆ, ಶಿವಪುತ್ರ ಮಿರಾಜದಾರ ಮೊದಲಾದವರು ಇದ್ದರು. ಚಂದ್ರಕಾಂತ ಅಕ್ಕಣ್ಣ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು. ಶರಣಬಸವ ಬಿರಾದಾರ ವಂದಿಸಿದರು.