ಗಾಂಧೀಜಿ ಚಿಂತನೆ ಹಾಗೂ ಗಾಂಧಿವಾದದಲ್ಲಿ ಬದುಕಿನ, ಸಮಾಜದ ಹಲವು ಹುಡುಕಾಟದ ನೆಲೆಗಳಿವೆ. ನೈತಿಕ ವಿಕಾಸವೇ ಬದುಕಿನ ಸಮಾಜದ ಬೆಳವಣಿಗೆಯಾಗಿ ಗಾಂಧೀಜಿ ಗ್ರಹಿಸಿದ್ದರು ಎಂದು ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು.
ಬಸವಕಲ್ಯಾಣ ನಗರದ ಎಸ್.ಎಸ್.ಕೆ.ಬಸವೇಶ್ವರ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ, ʼಸಾಮಾಜಿಕ ಹಾಗೂ ಆರ್ಥಿಕ ಸತ್ಯಗಳಿಗೂ ಸ್ವಾನುಭವಕ್ಕೂ ಇರುವ ಗಾಢವಾದ ಸಂಬಂಧವನ್ನು ಗಾಂಧಿಯವರ ಶೋಧನೆಯಲ್ಲಿ ಕಂಡುಬರುತ್ತದೆʼ ಎಂದರು.
ʼಗಾಂಧೀಜಿ ರಾಜಕಾರಣವನ್ನು ಮನುಷ್ಯನ ನೈತಿಕ ನೆಲೆಯ ಪ್ರಕ್ರಿಯೆಯಾಗಿ ಗ್ರಹಿಸಿದ್ದರು. ವೈಯಕ್ತಿಕವಾಗಿ ಮೆಚ್ಚಿದ ಮೌಲ್ಯಗಳನ್ನು ಸಾರ್ವತ್ರಿಕ ವ್ಯವಹಾರದಲ್ಲಿ ಆಚರಿಸಬೇಕೆಂದು ಆದೇಶಿಸಿದ್ದರು. ಗಾಂಧೀಜಿ ತಮ್ಮ ಸುತ್ತಲಿನ ಸಂಗತಿಗಳನ್ನು ಶೋಧನಾತ್ಮಕ ದೃಷ್ಟಿಯಿಂದಲೇ ಕಂಡಿದ್ದಾರೆ. ಗಾಂಧಿ ತತ್ವದಲ್ಲಿ ಅಧಿಕಾರ, ಸಂಪತ್ತು, ಆಧುನಿಕ ನಾಗರಿಕತೆಗೆ ಸ್ಥಾನವಿಲ್ಲ. ಸತ್ಯ, ಅಹಿಂಸೆ, ತ್ಯಾಗ ಮತ್ತು ಶಾಂತಿ ಸಂದೇಶಗಳು ಗಾಂಧಿ ಚಿಂತನೆಯಲ್ಲಿ ಮಾನ್ಯತೆ ಪಡೆದಿವೆ. ಅಹಿಂಸೆ ಮತ್ತು ಯುದ್ಧ ವಿರೋಧದ ಗಾಂಧಿ ತತ್ವಗಳನ್ನು ಜಗತ್ತು ಅರಿಯುವ ತುರ್ತು ಈ ಕಾಲದಲ್ಲಿದೆʼ ಎಂದು ವಿಶ್ಲೇಷಿಸಿದರು.
ʼಗಾಂಧೀಜಿ ಹಳ್ಳಿಗಳ ಪುನರುಜ್ಜೀವನದ ಕನಸುಗಾರ. ಜ್ಞಾನದ ಜೊತೆಗೆ ಕಸುಬುಗಾರಿಕೆ, ಆರ್ಥಿಕ ಭದ್ರತೆಗೆ, ಸ್ವಾವಲಂಬನೆಗೆ ಆದ್ಯತೆ ನೀಡಿದ್ದರು. ಬಹುಭಾಷಿಕತೆಗಳ ಮಹತ್ವ ಅರಿತ ಅವರು ಭಾರತೀಯ ಎಲ್ಲ ಭಾಷೆಗಳಲ್ಲಿನ ಜ್ಞಾನ ಪರಂಪರೆಯನ್ನು ಗೌರವಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಪರಿಕಲ್ಪನೆಯು ಗಾಂಧಿಜಿಯವರ ಗ್ರಾಮ ಸ್ವರಾಜ್‌ದ ಅಂಶವಾಗಿದೆ. ಸ್ವಾವಲಂಬನೆ, ಸಹಕಾರ, ಪ್ರೇಮ, ನ್ಯಾಯ ಮತ್ತು ಸರ್ವಸಮಾನತೆ, ಸರ್ವೊದಯವೇ ಸ್ವರಾಜ್ ಆಗಿದೆ. ಇದರ ಫಲಿತಾಂಶವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ನಾಗರಿಕತ್ವವನ್ನು ಗುಣಗಳನ್ನು ಬೆಳೆಸುತ್ತದೆʼ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ಕೆ.ಬಸವೇಶ್ವರ ಪದವಿ ಕಾಲೇಜು ಐಕ್ಯೂಎಸಿ ಸಂಯೋಜಕ ಡಾ. ಶಿವಕುಮಾರ ಪಾಟೀಲ ಮಾತನಾಡಿ, ʼಶಿಸ್ತು ವಿದ್ಯಾರ್ಥಿ ಜೀವನದ ಬಹುದೊಡ್ಡ ಧೋರಣೆಯಾಗಿದೆ. ಬದುಕಿನ ಪ್ರತಿಯೊಂದರಲ್ಲೂ ಶಿಸ್ತು ಬದ್ಧತೆಯಿದ್ದರೆ ಜೀವನಕ್ಕೊಂದು ಅರ್ಥವಿದೆ. ಎನ್‌ಎಸ್‌ಎಸ್ ಶಿಸ್ತಿನ ದಾರಿಯಾಗಿದೆ. ಹಳ್ಳಿಗಳ ಸುಧಾರಣೆಯಿಂದಲೇ ದೇಶದ ಪ್ರಗತಿ ಸಾಧ್ಯ. ಅದರ ಸಣ್ಣ ಪ್ರಯತ್ನ ಎನ್ನೆಸ್ಸೆಸ್ ಘಟಕವಾಗಿದೆʼ ಎಂದರು.
ʼವಸಾಹತುಶಾಹಿ ಶಿಕ್ಷಣ ವ್ಯವಸ್ಥೆ ಭಾರತದಲ್ಲಿ ಕೆಲಸ ಸೃಷ್ಟಿಸುವ ಶಿಕ್ಷಣ ನೀಡಿದೆ. ಭಾರತದ ಮೂಲ ಶಿಕ್ಷಣ ಪದ್ಧತಿ ಮತ್ತು ಗಾಂಧಿಜಿಯವರ ಶೈಕ್ಷಣಿಕ ಪರಿಕಲ್ಪನೆ ಸೇವಾಗುಣಕ್ಕೆ ಮಹತ್ವ ನೀಡಿದೆ. ನಮ್ಮ ಸುತ್ತಲಿನ ಸಮಸ್ಯೆಗಳ ಅರಿವು ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಎನ್‌ಎಸ್‌ಎಸ್ ನಿಂದ ಆಗುತ್ತದೆʼ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ವಿಠೋಬಾ ಡೊಣ್ಣೇಗೌಡರು ಮಾತನಾಡಿ, ʼನಾಡು, ನುಡಿ, ನೆಲ, ಸಂಸ್ಕೃತಿ ಬಗ್ಗೆ ಕಾಳಜಿ ಮತ್ತು ಪ್ರೀತಿ ಮೂಡಿಸುವ ಕೆಲಸ ಎನ್‌ಎಸ್‌ಎಸ್ ನಿಂದ ನೆರವೇರುತ್ತದೆ. ಕುವೆಂಪು ಅವರ ‘ನಿರಂಕುಶ ಮತಿಗಳಾಗಿ’, ವಿಚಾರ ಕ್ರಾಂತಿಗೆ ಆಹ್ವಾನ, ಗಾಂಧೀಜಿ ಅವರ ಗ್ರಾಮ ಸ್ವರಾಜ್, ಹಿಂದ್ ಸ್ವರಾಜ್ ಸೇರಿ ಹಲವು ಕೃತಿಗಳನ್ನು ಓದುವ ಮೂಲಕ ಸಾಹಿತ್ಯ ಸಂಸ್ಕೃತಿ ಕುರಿತು ಆಸಕ್ತಿ ಮತ್ತು ಅಭಿರುಚಿ ಬೆಳೆಸಿಕೊಳ್ಳಲು ಸಾಧ್ಯʼ ಎಂದರು.
ಎನ್ನೆಸ್ಸೆಸ್ ಅಧಿಕಾರಿ ಮಹಾದೇವ ದೇಗಾಂವ ಮಾತನಾಡಿ, ʼಸಮಾಜ, ಪರಿಸರ, ಸ್ವಚ್ಛತೆ, ಶಿಸ್ತು, ಬದ್ಧತೆಗಳನ್ನು ಬೆಳೆಸುವ ಗುಣ ಎನ್ನೆಸ್ಸೆಸ್‌ಗಿದೆ. ವಿದ್ಯಾರ್ಥಿಗಳಿಗೆ ಸೇವಾ ಮನೋಭಾವ ಬಿತ್ತುವ ಕೆಲಸ ಇಲ್ಲಿಂದ ಆಗಿರುತ್ತದೆ. ಯುವ ಸಮೂಹದಲ್ಲಿ ಸೇವಾ ಮನೋಭಾವ ಎನ್ನೆಸ್ಸೆಸ್ ಹುಟ್ಟಿಸುತ್ತದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಪೋಕ್ಸೋ ಪ್ರಕರಣ: ಮುರುಘಾ ಶ್ರೀಗೆ ಜಾಮೀನು ಮಂಜೂರು
ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಸುರೇಶ ಎಚ್.ಆರ್. ಪ್ರಾಧ್ಯಾಪಕರಾದ ಡಾ. ರಮೇಶ, ಸೂರ್ಯಕಾಂತ ನಾಸೆ, ದೀಪಕ ಕಾಡಾದಿ, ಶರಣಬಸವ ಮಠಪತಿ, ಭಾರತಿ ಮಠ, ಆಶ್ವಿನಿ, ವೈಶಾಲಿ, ಶಿಲ್ಪಾ ಬಿರಾದಾರ, ಕಲ್ಯಾಣಪ್ಪ ನಾವದಗಿ, ಭೀಮಾಶಂಕರ ಪೂಜಾರಿ, ಸಚಿನ್ ರಾಠೋಡ, ಸುಮನ್ ರೆಡ್ಡಿ ಮೊದಲಾದವರಿದ್ದರು. ಮೀನಾಕ್ಷಿ ಸ್ವಾಗತಿಸಿದರು. ನೇತ್ರಾ ನಿರೂಪಿಸಿದರು.