ವಚನಕಾರರು ಕಲ್ಯಾಣಕ್ಕೆ ಸಾಂಸ್ಕೃತಿಕ ಅಸ್ಮಿತೆ ತಂದುಕೊಟ್ಟಿದ್ದಾರೆ. ಖಚಿತ ಆಕರಗಳನ್ನು ಆಧರಿಸಿ ಕಲ್ಯಾಣದ ಚರಿತ್ರೆಯ ಪುನರ್ ಕಟ್ಟುವಿಕೆ ಆಗಬೇಕು ಎಂದು ಕಲಬುರ್ಗಿಯ ವಿಭಾಗೀಯ ಪತ್ರಾಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ ಹೇಳಿದರು.
ಬಸಕಲ್ಯಾಣದ ಎಸ್‌ಎಸ್‌ಕೆ ಬಸವೇಶ್ವರ ಸ್ನಾತಕ ಹಾಗೂ ಸ್ನಾತಕೋತ್ತರ ಕಾಲೇಜಿನಲ್ಲಿ ಕಲಬುರ್ಗಿಯ ವಿಭಾಗೀಯ ಪತ್ರಾಗಾರ ಇಲಾಖೆ ಮತ್ತು ಇತಿಹಾಸ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವಕಲ್ಯಾಣ ಇತಿಹಾಸ ಮತ್ತು ಸಂಸ್ಕೃತಿ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ʼಪ್ರಭುತ್ವ, ವಾಸ್ತುಶಿಲ್ಪ, ಸಂಸ್ಕೃತಿ ಹಾಗೂ ಹಲವು ಪಂಥಗಳು ಪ್ರವಹಿಸಿದ ಕಲ್ಯಾಣದ ಚರಿತ್ರೆಗೆ ಬಹುತ್ವದ ಆಯಾಮವಿದೆʼ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ.ಚಂದ್ರಶೇಖರ ಬಿರಾದಾರ ಮಾತನಾಡಿ, ʼಬಸವಕಲ್ಯಾಣ ಚರಿತ್ರೆಗೆ ಸಂಬಂಧಿಸಿದ ಶಾಸನಗಳು, ಕೃತಿಗಳು ದಾಖಲೆಗಳಾಗಿವೆ. ರಾಷ್ಟ್ರಕೂಟರು ಸೇರಿ ಹಲವು ಅರಸರ, ವಚನಕಾರರ, ಸೂಫಿಗಳಿಂದ ಕಲ್ಯಾಣದ ಅಸ್ತಿತ್ವ ರೂಪುಗೊಂಡಿದೆʼ ಎಂದರು.
ಪ್ರಾಧ್ಯಾಪಕ ಡಾ. ಶಿವಕುಮಾರ ಉಪ್ಪೆ ಮಾತನಾಡಿ, ʼಜಾಗತಿಕ ಚರಿತ್ರೆಗೆ ಮಹತ್ವ ಬರಬೇಕಾದರೆ ಮೊದಲು ಸ್ಥಳೀಯ ಚರಿತ್ರೆಯ ರಚನೆಗೆ ಆದ್ಯತೆಯಿರಲಿ. ಭಾರತದಲ್ಲಿ ಇತಿಹಾಸದ ಬರವಣಿಗೆಗೆ ಆದ್ಯತೆ ನೀಡಿದ ಕಾರಣ ಸ್ಥಳೀಯ ಚರಿತ್ರೆ ದಾಖಲಾಗಿಲ್ಲʼ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಬಸವರಾಜ ಎವಲೆ ಮಾತನಾಡಿ, ʼಬಸವಕಲ್ಯಾಣದ ಇತಿಹಾಸ ಮತ್ತು ಸಂಸ್ಕೃತಿಯ ಕುರಿತು ಹಲವು ದಾಖಲೆಗಳಿವೆ. ಕಲ್ಯಾಣದ ಕುರಿತು ಸಮಗ್ರ ಸಂಗತಿಗಳು ಒಳಗೊಂಡ ಪುಸ್ತಕ ಪ್ರಕಟವಾಗುವ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ಇತಿಹಾಸ ಪ್ರಜ್ಞೆ ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ದೊಡ್ಡದುʼ ಎಂದರು.
ಇತ್ತೀಚೆಗೆ ಪ್ರಾಧ್ಯಾಪಕರಾಗಿ ಬಡ್ತಿ ಹೊಂದಿದ ಎಸ್‌ಎಸ್‌ಕೆಬಿ ಕಾಲೇಜು ಪ್ರಾಚಾರ್ಯ ಪ್ರೊ. ಬಸವರಾಜ ಎವಲೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ವಚನಗಳಲ್ಲಿ ಸಂವಿಧಾನದ ಆಶಯವಿದೆ : ಎನ್.ಕೆ.ಫಣೀಂದ್ರ
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಶಿವಕುಮಾರ ಪಾಟೀಲ, ಪ್ರೊ. ವಿಠೋಬಾ ಡೊಣ್ಣೇಗೌಡರು, ಡಾ. ರಮೇಶ, ಡಾ. ಸುರೇಶ್ ಎಚ್.ಆರ್, ಲಕ್ಷ್ಮೀಬಾಯಿ ಬಂಕೂರ, ಭಾರತಿ ಮಠ, ಭೀಮಾಶಂಕರ ಪೂಜಾರಿ, ಡಾ. ಬಸವರಾಜ ಖಂಡಾಳೆ, ಅಧ್ಯಾಪಕ ಡಾ. ಭೀಮಾಶಂಕರ ಬಿರಾದಾರ ಸೇರಿದಂತೆ ಎಸ್‌ಎಸ್‌ಕೆಬಿ ಕಾಲೇಜು, ಶ್ರೀ ಬಸವೇಶ್ವರ ಪದವಿ ಕಾಲೇಜು, ರಾಜೀವ್ ಗಾಂಧಿ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಶಿವಕುಮಾರ ಕೊಲ್ಲೆ ಸ್ವಾಗತಿಸಿದರು, ಮಹಾದೇವ ದೇಗಾಂವ ನಿರೂಪಿಸಿದರು . ಕಲ್ಯಾಣಪ್ಪಾ ನಾವದಗಿ ವಂದಿಸಿದರು.