ಬೆಂಕಿಯಂತ ಬಿಸಿಲಿನ ಬೇಗೆಗೆ ಬಸವಳಿದ ಗಡಿ ಜಿಲ್ಲೆಯ ಜನರಿಗೆ ಮಳೆ ತಂಪೆರೆದಿದ್ದು, ಜಿಲ್ಲೆಯ ನಾನಾ ಕಡೆಯಲ್ಲಿ ರವಿವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ರವಿವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು, ಸಂಜೆ 4 ಗಂಟೆಗೆ ಜಿಲ್ಲೆಯ ಬೀದರ್ ನಗರ, ಭಾಲ್ಕಿ, ಕಮಲನಗರ ಹಾಗೂ ಔರಾದ ತಾಲೂಕು ಸೇರಿದಂತೆ ಹಲವೆಡೆ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಿದೆ.
ಔರಾದ್ ತಾಲೂಕಿನ ಚಿಕ್ಲಿ(ಜೆ) ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಬಿರುಸಿನ ಮಳೆಗೆ ವಿದ್ಯುತ್ ಕಂಬ ನೆಲಕ್ಕುರುಳಿದ ಪರಿಣಾಮ ಭಾರೀ ಅನಾಹುತ ತಪ್ಪಿದೆ. ಚಿಂತಾಕಿ ತಾಂಡಾದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು ಕೆಲಕಾಲ ಜನಜೀವನ ಪರದಾಡಬೇಕಾಯ್ತು. ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಈ ಸುದ್ದಿ ಓದಿದ್ದೀರಾ? ಬೀದರ್ | ಕಳೆದ ವರ್ಷ ಜಿಲ್ಲೆಯಲ್ಲಿ 1097 ರಸ್ತೆ ಅಪಘಾತ; ಸಾವಿನ ಹಾದಿಗೆ 330 ಮಂದಿ
ಸಂಜೆ 5.30ರವರೆಗೆ ಮಿಂಚು, ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಕೆಲ ಹಳ್ಳಿಗಳಲ್ಲಿ ಮನೆಗಳ ಮೇಲಿನ ಪತ್ರಗಳು ಹಾರಿಹೋಗಿವೆ, ಗಿಡ-ಮರಗಳು ನೆಲಕ್ಕುರಿಳಿವೆ. ಅಕಾಲಿಕ ಮಳೆಯಿಂದ ಬೀದರ್ ನಗರ ಸೇರಿದಂತೆ ನಾನಾ ಕಡೆ ಸಂಚಾರ ಅಸ್ತವ್ಯಸ್ತಗೊಂಡ ಪರಿಣಾಮ ವಾಹನ ಸವಾರರು ಪರದಾಡಬೇಕಾಯ್ತು.