- ಮಳೆಯ ಕೊರತೆಯಿಂದ ಮಾರುಕಟ್ಟೆಗೆ ತರಕಾರಿಗಳ ಪೂರೈಕೆ ಕಡಿಮೆ
- ಮೊದಲ ಬಾರಿಗೆ ಕರ್ನಾಟಕ ರಾಜ್ಯದಿಂದ ಬಾಂಗ್ಲಾದೇಶಕ್ಕೆ ಟೊಮೆಟೊ ರಫ್ತು
ರಾಜ್ಯದಲ್ಲಿ ಮುಂಗಾರು ಈಗ ಚುರುಕಾಗಿದ್ದು, ಕೆಲವೆಡೆ ಜೋರು ಮಳೆಯಾಗುತ್ತಿದ್ದರೆ, ಇನ್ನೂ ಕೆಲವೆಡೆ ಮಳೆರಾಯನ ದರ್ಶನವಾಗಿಲ್ಲ. ಮಳೆಯ ಕೊರತೆಯಿಂದ ತರಕಾರಿಗಳು ಒಣಗಿದ್ದು, ಮಾರುಕಟ್ಟೆಗೆ ಸರಬರಾಜು ಕಡಿಮೆಯಾಗುತ್ತಿದೆ. ಜತೆಗೆ ರಾಜ್ಯದಲ್ಲಿ ಬೆಳೆದ ಟೊಮೆಟೊ ಪ್ರಥಮ ಬಾರಿಗೆ ಬಾಂಗ್ಲಾದೇಶಕ್ಕೆ ರಫ್ತಾಗುತ್ತಿದೆ. ಇದೆಲ್ಲದರ ನಡುವೆ, ಕೆ.ಜಿ ಟೊಮೆಟೊ ಬೆಲೆ ₹100ರ ಸನಿಹಕ್ಕೆ ಬಂದಿದೆ.
ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ತರಕಾರಿಗಳ ಬೆಲೆ ಗಗನಕ್ಕೆ ಏರುತ್ತಿದೆ. 15 ಕೆಜಿ ಟೊಮೆಟೊ ಬಾಕ್ಸ್ ಸಾವಿರ ಸನಿಹಕ್ಕೆ ಬಂದಿದೆ. ಅಲ್ಲದೆ, ಮಾರುಕಟ್ಟೆಯಲ್ಲಿನ ತರಕಾರಿಗಳ ಬೆಲೆ ಹೆಚ್ಚಳವಾಗಿದ್ದು, ಗ್ರಾಹಕನ ಕೈ ಸುಡುವಂತಾಗಿದೆ.
ರಾಜ್ಯದ ಟೊಮೆಟೊ ಬಾಂಗ್ಲಾದೇಶಕ್ಕೆ ರಫ್ತು
ದೇಶದ ಇತರೆ ರಾಜ್ಯಗಳಲ್ಲಿ ಭಾರಿ ಮಳೆಯಾದ ಕಾರಣ ಮೊದಲ ಬಾರಿಗೆ ಕರ್ನಾಟಕ ರಾಜ್ಯದಿಂದ ಬಾಂಗ್ಲಾದೇಶಕ್ಕೆ ಟೊಮೆಟೊ ರಫ್ತಾಗುತ್ತಿದೆ. ಇದು ಕೂಡ ರಾಜ್ಯದಲ್ಲಿ ಟೊಮೆಟೊ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.
ಹಾಗೆಯೇ, ಕೋಲಾರದಿಂದ ಹೊರರಾಜ್ಯಗಳಿಗೆ ಟೊಮೆಟೊ ರಫ್ತು ಹೆಚ್ಚಾಗುತ್ತಿದ್ದು, ಬೇರೆ ರಾಜ್ಯಗಳಲ್ಲಿ ಟೊಮೆಟೊಗೆ ಹೆಚ್ಚಿನ ಬೇಡಿಕೆ ಇದೆ.
ಹೆಚ್ಚಳವಾದ ಟೊಮೆಟೊ ದರ
ಕಳೆದ ಒಂದು ವಾರದ ಹಿಂದೆ ಕಡಿಮೆ ಇದ್ದ ಟೊಮೆಟೊ ದರ ಇದೀಗ ₹100ರ ಸಮೀಪಿಸಿದೆ. ಭಾನುವಾರ ಟೊಮೆಟೊ ದರ ಕೆಜಿಗೆ ₹50 ರಿಂದ ₹60 ರೂಪಾಯಿ ಇತ್ತು. ಸೋಮವಾರ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹70-80 ಇದೆ.
ಇತ್ತೀಚೆಗೆ ಸುರಿದ ಮಳೆಯ ಹಿನ್ನೆಲೆಯಲ್ಲಿ ತರಕಾರಿ ಕೊಳೆತಿದ್ದು, ರಾಜಧಾನಿ ಬೆಂಗಳೂರಿನ ಕೆ.ಆರ್.ಮಾರ್ಕೆಟ್, ಯಶವಂತಪುರ, ಮಲ್ಲೇಶ್ವರ, ಜಯನಗರ ಮಾರುಕಟ್ಟೆಗಳಲ್ಲಿ ತರಕಾರಿಗಳ ಪೂರೈಕೆ ತೀರಾ ಕಡಿಮೆಯಾಗಿದೆ. ಟೊಮೆಟೊ ಸೇರಿದಂತೆ ಬದನೆಕಾಯಿ, ಬಟಾಣಿ ಹಾಗೂ ಮೆಣಸಿನಕಾಯಿ ದರ ದುಪ್ಪಟ್ಟಾಗಿದ್ದು, ಕಳೆದ ಒಂದು ವಾರದಲ್ಲಿ ತರಕಾರಿಗಳ ಬೆಲೆ ಹೆಚ್ಚಳವಾಗಿದೆ.
ಈ ಸುದ್ದಿ ಓದಿದ್ದೀರಾ? ಪ್ರಯಾಣಿಕರ ಸುರಕ್ಷತಾ ನಿಯಮ ಅನುಸರಿಸದ ಬಿಎಂಟಿಸಿ ಬಸ್ ಸಿಬ್ಬಂದಿ: ಆರೋಪ
ಕಳೆದ ವಾರ ಕೆಜಿಗೆ ₹40 ಇದ್ದ ಬದನೆಕಾಯಿ ಹಾಗೂ ಮೆಣಸಿನಕಾಯಿ ದರ ಇದೀಗ ₹ 80 ತಲುಪಿದೆ. ಬಟಾಣಿ ಕೆಜಿಗೆ ₹100 ರಿಂದ ₹150 ಏರಿಕೆಯಾಗಿದೆ. ಬೀನ್ಸ್ ಹಾಗೂ ನುಗ್ಗೆಕಾಯಿ ₹100-120 ಇದೆ. ಲಿಂಬು, ಬೆಳ್ಳುಳ್ಳಿ, ಬೀಟ್ರೂಟ್, ಆಲೂಗಡ್ಡೆ, ಹಾಗಲಕಾಯಿ ಬೆಲೆ ₹5-10 ಹೆಚ್ಚಾಗಿದೆ.