ಕರ್ಚೇಡ-ಸಿಂಧುವಾಳದ ನಡುವಿನ ಪವಿತ್ರ ನಂಟು; ಮೊಹರಂ ಹಿಂದಿನ ʼಪೀರ್ʼ ದೇವರ ಪರ್ವ

Date:

Advertisements

ಭಾವೈಕ್ಯತೆಯ ಮೂಲವನ್ನು ತಿಳಿಸುವಂತೆ ಕೆಲವು ಐತಿಹಾಸಿಕ ಕಥನಗಳು ಇಂದಿಗೂ ಗ್ರಾಮಾಂತರ ಹೃದಯದಲ್ಲಿ ಜೀವಂತವಾಗಿವೆ. ಅವುಗಳಲ್ಲಿ ಕರ್ಚೇಡ ಹಾಗೂ ಸಿಂಧುವಾಳ ಗ್ರಾಮಗಳ ನಡುವಿನ ಪೀರ್‌ ದೇವರ ಕಥೆಯೂ ಒಂದು.

ಕಲ್ಯಾಣ ಕರ್ನಾಟಕದ ಹೃದಯಭಾಗವಾದ ಬಳ್ಳಾರಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮೊಹರಂ ಹಬ್ಬವು ಭಾವೈಕ್ಯತೆ, ಪರಂಪರೆ ಮತ್ತು ನಂಬಿಕೆಗಳ ಸಂಯೋಜನೆಯಂತಿದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಸಂಗಮದಲ್ಲಿ ಮೊಹರಂ ಹಬ್ಬಕ್ಕೆ ಒಂದು ವಿಶಿಷ್ಟ ಸೌಂದರ್ಯ ದೊರೆತಿದ್ದು, ಈ ಭಾವೈಕ್ಯತೆಯ ಮೂಲವನ್ನು ತಿಳಿಸುವಂತೆ ಕೆಲವು ಐತಿಹಾಸಿಕ ಕಥನಗಳು ಇಂದಿಗೂ ಗ್ರಾಮಾಂತರ ಹೃದಯದಲ್ಲಿ ಜೀವಂತವಾಗಿವೆ. ಅವುಗಳಲ್ಲಿ ಕರ್ಚೇಡ ಹಾಗೂ ಸಿಂಧುವಾಳ ಗ್ರಾಮಗಳ ನಡುವಿನ ಪೀರ್‌ ದೇವರ ಕಥೆಯೂ ಒಂದು.

ಪೀರ್ ದೇವರ ಕತೆ – ಕರ್ಚೇಡದಿಂದ ಸಿಂಧುವಾಳದವರೆಗೆ

Advertisements

ಕರ್ಚೇಡ ಹಾಗೂ ಸಿಂಧುವಾಳ ಎಂಬ ಎರಡು ಹಳ್ಳಿಗಳು ಭಕ್ತಿಯ ಹಿನ್ನೆಲೆಯಲ್ಲಿ ಪ್ರತಿ ವರ್ಷ ಹೊಸ ಹುರುಪು ಪಡೆಯುತ್ತವೆ. ಸ್ಥಳೀಯರ ಪ್ರಕಾರ, ನೂರಾರು ವರ್ಷಗಳ ಹಿಂದೆ ಕರ್ಚೇಡ ಗ್ರಾಮದ ಪೀರ್ ದೇವರನ್ನು ಸಿಂಧುವಾಳ ಗ್ರಾಮಸ್ಥರು ‘ಕದ್ದು’ ತಮ್ಮ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದಾರಂತೆ. ಆದರೆ, ಇದಕ್ಕೆ ಸ್ಪಷ್ಟ ದಾಖಲೆ ಇಲ್ಲ, ಮಾತ್ರವಲ್ಲದೆ ಈ ಘಟನೆಗೆ ಸಂಬಂಧಪಟ್ಟಂತೆ ಹಲವಾರು ಆಕರ್ಷಕ, ವಿಚಿತ್ರ ಕಥೆಗಳು ಕೇಳಿಬರುತ್ತಿರುತ್ತವೆ.

ಈ ನಂಬಿಕೆ ಅಥವಾ ಪ್ರತೀತಿಯಿಂದಲೋ ಏನೋ ಕರ್ಚೇಡದ ಗ್ರಾಮಸ್ಥರು ಪ್ರತಿ ವರ್ಷ ಮೊಹರಂ ಹಬ್ಬ ಬಂದಾಗ ಸಿಂಧುವಾಳ ಗ್ರಾಮಕ್ಕೆ ಹೋಗಿ ಅಲ್ಲಿನ ಪೀರಲು ದೇವರಿಗೆ ಪೂಜೆ ಸಲ್ಲಿಸಿ ಬರುವ ಸಂಪ್ರದಾಯ ಅನಾದಿಕಾಲದಿಂದಲೂ ನಡೆಯುತ್ತಿದೆ.

WhatsApp Image 2025 07 08 at 7.12.58 PM

ಸಿಂಧುವಾಳದ ಜನರು ಈ ಆರೋಪವನ್ನು ತಿರಸ್ಕರಿಸುತ್ತಾರೆ. ಅವರ ಪ್ರಕಾರ, ಪೀರ್ ದೇವರುಗಳು ತಮ್ಮ ಸ್ವ ಇಚ್ಛೆಯಿಂದಲೇ ವೇದಾವತಿ ನದಿಯನ್ನು ದಾಟಿ ಸಿಂಧುವಾಳಕ್ಕೆ ಬಂದಿದ್ದರಂತೆ. ಅಲ್ಲಿಯೇ ಅವರನ್ನು ನೆಲೆಗೊಳಿಸಲಾಗಿದೆ. ಈ ನಂಬಿಕೆಯೇ ಆ ಗ್ರಾಮದಲ್ಲಿ ದೇವರಿಗೆ ನಿತ್ಯ ಪೂಜಾ ಕೈಂಕರ್ಯಗಳ ಪ್ರೇರಣೆಯಂತೆ. ಸುಮಾರು 350 ಕ್ಕೂ ಹೆಚ್ಚು ವರ್ಷಗಳಿಂದ ಸಿಂಧುವಾಳ ಗ್ರಾಮದಲ್ಲಿ ‌ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಮೊಹರಂ ಹಬ್ಬ ಆಚರಿಸಲಾಗುತ್ತದೆ. ಇಂದು ದೇವಾಲಯದ ಕೇಂದ್ರದಲ್ಲಿ ಕಾಣುವ ಬೆಳ್ಳಿ ಆಭರಣಗಳಲ್ಲಿ ಬ್ರಿಟಿಷ್ ರಾಣಿ‌ ಎಲಿಜಬೆತ್ ನೀಡಿದ ನಾಣ್ಯಗಳೂ ಸೇರಿವೆ ಎಂಬುದು ಇನ್ನೊಂದು ಐತಿಹಾಸಿಕ ಆಕರ್ಷಣೆ.

ಈ ಪೈಪೋಟಿಯ ನಡುವೆಯೂ ಪ್ರತಿ ವರ್ಷ ಮೊಹರಂ ಬಂದಾಗ ಕರ್ಚೇಡದ ಗ್ರಾಮಸ್ಥರು ನದಿಗೆ ಇಳಿದು, ದಾಟಿ ಸಿಂಧುವಾಳ ಗ್ರಾಮಕ್ಕೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿ ಬರುತ್ತಾರೆ. ಇದು ಯಾರೂ ವಿರೋಧಿಸದ, ತಡೆಹಾಕದ, ಬದಲಿಗೆ ಗೌರವಪೂರ್ಣವಾಗಿ ಆಚರಿಸಲಾಗುವ ಸಂಪ್ರದಾಯವಾಗಿದೆ. ಈ ಮೂಲಕ ಎರಡು ಗ್ರಾಮಗಳ ಮಧ್ಯೆ ಇರುವ ತಾತ್ವಿಕ ದೂರವನ್ನೇ ನಿಗ್ರಹಿಸಿ, ಭಕ್ತಿಭಾವ, ಭಾವೈಕ್ಯತೆ ಮತ್ತು ಭಕ್ತಿಪ್ರಜ್ಞೆಯನ್ನು ಮೊದಲ ಪಂಕ್ತಿಗಿಡುವ ಪರಂಪರೆ ಮುಂದುವರೆದಿದೆ.

ಸುತ್ತಮುತ್ತಲಿನ ಹೊಸಮೋಕ, ಹಳೆಮೋಕ, ಜಾಲವಹಾಳ ಹಳ್ಳಿಗಳ ಜನರು ಹೇಳುವಂತೆ – “ಒಂದೊಂದು ಗ್ರಾಮದ ಸಂಕಷ್ಟದ ಕಾಲದಲ್ಲಿ ಮತ್ತೊಂದು ಊರಿನ ದೇವರನ್ನು ಕರೆದು ಸೇವೆ ಮಾಡುವುದು ಸಾಮಾನ್ಯ. ದೇವರು ಒಂದು ಊರಿಗಷ್ಟೇ ಸೀಮಿತವಲ್ಲ. ದೇವರನ್ನು ಎಲ್ಲಿ ಬೇಕಾದರೂ ಕರೆದು ಪ್ರತಿಷ್ಠಾಪಿಸಬಹುದು. ಅಲ್ಲಿನ ಸೇವೆಯೇ ಅಸ್ತಿತ್ವವನ್ನೀಡುತ್ತದೆ.”

ಉಡುಪಿ, ಮಂಗಳೂರು, ಮೈಸೂರು, ಗೋವಾ, ಬೆಂಗಳೂರು ಇತ್ಯಾದಿ ದೂರದ ಊರುಗಳಲ್ಲಿ ದುಡಿಯುತ್ತಿರುವ ಈ ಭಾಗದ ಜನರು ಮೊಹರಂ ಹಬ್ಬಕ್ಕೆ ತಮ್ಮ ಊರಿಗೆ ಮರಳದೇ ಇರುವುದಿಲ್ಲ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ, ಮನೆ ಬಿಟ್ಟು ಹೋದವರ ಮನಸಿನೊಂದಿಗಿನ ಭಾವನಾತ್ಮಕ ಸಂಪರ್ಕ. ಅವರು ಮರಳುವುದು ಹಬ್ಬದ ಸಂಭ್ರಮಕ್ಕೆ ಮಾತ್ರವಲ್ಲ, ತಮ್ಮ ಸಂಸ್ಕೃತಿ, ನೆಲೆ, ನಂಬಿಕೆಗಳಿಗೆ ಮರುಜೀವ ನೀಡುವ ಪ್ರಕ್ರಿಯೆಯಾಗಿದೆ.

WhatsApp Image 2025 07 08 at 7.13.00 PM

ಮರಳಿ ಊರಿಗೆ ಬಂದು ಹೋದ ಪೀರಲು ದೇವರು

ಬಹಳ ವರ್ಷಗಳ ಹಿಂದೆ ಕರ್ಚೇಡು ಗ್ರಾಮದಲ್ಲಿ ವಿವಿಧ ಕಾರಣಗಳಿಂದ ಮೊಹರಂ ಹಬ್ಬದ ಆಚರಣೆ ನಿಂತ ಸಮಯದಲ್ಲಿ ಸಿಂಧುವಾಳ ಗ್ರಾಮದಿಂದ ಕರ್ಚೇಡು ಗ್ರಾಮಕ್ಕೆ ಪೀರಲು ದೇವರು ಬಂದು ಗ್ರಾಮದ ಜನರಿಗೆ ದರ್ಶನ ನೀಡಿ ಮರಳಿ ಸಿಂಧುವಾಳ ಗ್ರಾಮಕ್ಕೆ ಹೋದ ಉದಾಹರಣೆ ಸಹ ಇವೆ‌ ಎಂದು ಹೇಳಲಾಗುತ್ತದೆ. ಹಬ್ಬಕ್ಕೆ ನಿರ್ಬಂಧ ಹೇರಿದ ಸಮಯದಲ್ಲಿ ‌ಸಿಂಧುವಾಳ ಗ್ರಾಮಕ್ಕೆ ಹೋಗಿ ಹಬ್ಬ ಆಚರಣೆ ಮಾಡಿದ ಉದಾಹರಣೆ ಸಹ ಸಾಕಷ್ಟು ಇವೆ ಎನ್ನುವುದು ಎರಡೂ ಗ್ರಾಮಸ್ಥರ ದೃಢವಾದ ಮಾತು-ನಂಬಿಕೆ.

ಮುಸ್ಲಿಮರು ಮೂಲತಃ ಸಿಂಧುವಾಳ ಗ್ರಾಮದವರು

ಕರ್ಚೇಡು ಗ್ರಾಮದಲ್ಲಿ ಶೇ. 86ರಷ್ಟು ಮಂದಿ ವಲಸಿಗರೇ ಇದ್ದಾರೆಂದು ಹೇಳಲಾಗುತ್ತಿದ್ದು, ಹಾಗೇ ಬಂದವರಲ್ಲಿ ಮುಸ್ಲಿಮರೂ ಇದ್ದಾರೆ. ಇಲ್ಲಿಯ ಮುಸ್ಲಿಮರು ಮೂಲತಃ ಸಿಂಧುವಾಳ ಗ್ರಾಮದವರಂತೆ. ಮುಸ್ಲಿಮರು ಇಲ್ಲದೆ ಪೀರಲು ದೇವರನ್ನು ಕೂಡಿಸಿ ಪೂಜೆ ಪುನಸ್ಕಾರ ಮಾಡುವುದು ಮೊಹರಂ ಹಬ್ಬವನ್ನು ಆಚರಿಸುವುದು ಸರಿಯಲ್ಲ ಎಂದು ಕರ್ಚೇಡು ಗ್ರಾಮದ ಮುಖಂಡರು ಸೇರಿ ಸಿಂಧುವಾಳ ಗ್ರಾಮದಿಂದ ಮುಸ್ಲಿಮರನ್ನು ಕರೆದಂತರೆಂದು‌‌ ಹೇಳುತ್ತಾರೆ. ಆ ಕಾರಣದಿಂದಲೇ ಪೀರ್ ದೇವರ ಕಳ್ಳತನವಾದಾಗ ಎರಡು ಗ್ರಾಮದಲ್ಲಿನ ಜನರು ಕಿತ್ತಾಟ ಮಾಡುವುದಾಗಲಿ‌, ಹೊಡೆದಾಡುವುದಾಗಲಿ ಮಾಡಿದ ಬಗ್ಗೆ ಯಾರೂ ಹೇಳಲ್ಲ. ಎರಡು ಗ್ರಾಮದ ಜನರಲ್ಲಿನ ಸ್ನೇಹ ಸೌಹಾರ್ದ ಸಂಬಂಧಗಳು ಇದುವರೆಗೂ ಹಾಗೇ ಇದೆ ಎಂಬುದು ಗಮನಿಸಬೇಕಾದ ಪ್ರಮುಖ ಅಂಶ.

ಮೊಹರಂ ಹಬ್ಬದ ನಿಷೇಧ

ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ 21 ಗ್ರಾಮ ಹಾಗೂ ನಗರ ಬಡಾವಣೆಗಳಲ್ಲಿ ಮೊಹರಂ ಹಬ್ಬ‌ ಆಚರಿಸದಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ತಾಲೂಕಿನ ಕೆಲವು ಹಳ್ಳಿಗಳಲ್ಲಿ ವಿಚಾರಿಸಿದಾಗ ತಿಳಿದು ಬಂದ ಸಂಗತಿಯೆಂದರೆ, ಯಾವುದೇ ಧಾರ್ಮಿಕ ಕಾರಣದಿಂದ ಗಲಾಟೆ ತಂಟೆ-ತಕರಾರುಗಳಿಲ್ಲ. ವೈಯಕ್ತಿಕ ದ್ವೇಷ, ಹಗೆತನ, ಈರ್ಷೆ, ಹಳೆಯ ದ್ವೇಷ ಹಾಗೂ ಮೊದಲು ಯಾವ ಓಣಿಯಲ್ಲಿ ಪೀರ್ ದೇವರು ಪ್ರವೇಶ ಮಾಡಬೇಕು ಎಂಬ ತಕರಾರುಗಳಿಂದ ದೊಡ್ಡ ಮಟ್ಟದ ಜಗಳಗಳಾಗುತ್ತವೆ. ಇಲ್ಲಿ ಎಲ್ಲಾ ಧರ್ಮದವರು ಭಾವೈಕ್ಯತೆಯಿಂದ ಹಬ್ಬ ಆಚರಿಸುತ್ತಾರೆ. ಅದೇ ಕಾರಣಕ್ಕೆ ಸುಮಾರು ವರ್ಷಗಳಿಂದ ಸಿಂಧುವಾಳ ಗ್ರಾಮ ಸೇರಿದಂತೆ ತಾಲೂಕಿನ ಬೇರೆಬೇರೆ ಗ್ರಾಮಗಳಲ್ಲಿ ‌ಮೊಹರಂ ಹಬ್ಬದ ಸಡಗರ ಕೆಲವೊಮ್ಮೆ ಮಾಸುತ್ತದೆ.

WhatsApp Image 2025 07 08 at 7.12.59 PM

ಸಿಂಧುವಾಳದಲ್ಲಿ ಕಳೆದ ವರ್ಷದಿಂದ ನಿಷೇಶ ತೆರವುಗೊಳಿಸಿದ್ದರಿಂದ ಹಬ್ಬದ ಸಡಗರವೇನೋ ಇದೆ. ಆಗಾಗ ಸಣ್ಣಪುಟ್ಟ ಗಲಾಟೆ ಆಗುತ್ತವೆ. ಹಿರಿಯರ ಹಾಗೂ ಕೆಲವೊಮ್ಮೆ ಪೊಲೀಸರ ಮಧ್ಯಸ್ಥಿಕೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಆದರೆ, ಸಣ್ಣಪುಟ್ಟ ಜಗಳವೇ ದೊಡ್ಡ ಪ್ರಮಾದ ತಂದೊಡ್ಡಿ ಮತ್ತೆ ಈ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮಾಯವಾಗಿಬಿಡುತ್ತದೇನೋ ಎನ್ನುವುದೇ ಆತಂಕ.

ಕರ್ಚೇಡು ಗ್ರಾಮದ ಫಕೀರಮ್ಮ ಈದಿನ.ಕಾಮ್ನೊಂದಿಗೆ ಮಾತನಾಡಿ, “ಮೊಹರಂ ಹಬ್ಬದ ಕೊನೆ ದಿನದಂದು ಸಿಂಧುವಾಳ ಗ್ರಾಮದ ಕೆಲವರು ಮಧ್ಯೆ ರಾತ್ರಿ ಸಮಯದಲ್ಲಿ ನಮ್ಮ ಗ್ರಾಮಕ್ಕೆ ಬಂದು ಊರಾಗಿನ ಮಸೀದಿ ಹೊಕ್ಕು ಪೀರಲು ದೇವರನ್ನು ಕದ್ದು ಸಿಂಧುವಾಳ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ನಮ್ಮ ಅತ್ತೆ ನಮಗೆ ಹೇಳತ್ತಿದ್ದರು. ಅದು ಎಷ್ಟು ಸತ್ಯವೋ ಗೊತ್ತಿಲ್ಲ. ಎಲ್ಲರೂ ಒಟ್ಟುಗೂಡಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವುದಷ್ಟೇ ಸರಿ” ಎನ್ನುತ್ತಾರೆ.

ಸಿಂಧುವಾಳ ಗ್ರಾಮದ ಖಾಸಿಮ್ ಹುಸಿಲಿ, “ಮೊಹರಂ ಹಬ್ಬದ ಸಮಯದಲ್ಲಿ ಪೀರಲು ದೇವರನ್ನು ಕಳುಹಿಸಲು ನದಿಗೆ ಹೋದಾಗ ನದಿಯಲ್ಲಿ ದೇವರು ಮೈತುಂಬಿ ಕುಣಿಯುತ್ತಾ ಸಿಂಧುವಾಳ ಗ್ರಾಮಕ್ಕೆ ಬಂದವು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಹಾಗೂ ಈಗಲೂ ಹಾಗೆ ಹೇಳುತ್ತಾರೆ. ಪ್ರತೀತಿಗಳು, ದಂತ ಕಥೆಗಳು ಏನೇ ಇರಲಿ, ಹಿಂದೂ ಮುಸ್ಲಿಮರೆನ್ನದೆ ಎಲ್ಲರೂ ಒಡಗೂಡಿ ಹಬ್ಬ ಆಚರಣೆ ಮಾಡಿದರೆ ಅದರ ಖುಷಿಯೇ ಬೇರೆ” ಎಂದು ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ: ರಾಯಚೂರು | ಬಾಗಿಲು ಮುಚ್ಚಿರುವ ಕೋಟಿ ವೆಚ್ಚದ ಆಸ್ಪತ್ರೆ; ನಿರ್ಲಕ್ಷ್ಯದಲ್ಲಿ ಖರಾಬದಿನ್ನಿಗರ ಆರೋಗ್ಯ

ಮೊಹರಂ ಕಲ್ಯಾಣ ಕರ್ನಾಟಕದ ಜನರ ಭಾವೈಕ್ಯತೆಯ ಹಬ್ಬವಾಗಿದ್ದು, ಇದಕ್ಕೆ ಸ್ವಾರ್ಥ, ಧಾರ್ಮಿಕ ಕೋಮುವಾದಿಗಳ ನೆರಳು ಬೀಳದೆ ಇರುವುದು ಒಳ್ಳೆಯ ಸಂಗತಿ. ಅನೇಕ ದಂತಕಥೆಗಳು, ನಂಬಿಕೆಗಳು ಹಾಗೂ ಪ್ರತೀತಿಗಳ ನಡುವೆ ಗ್ರಾಮಸ್ಥರು ಪ್ರತಿವರ್ಷ ನದಿಯನ್ನು ದಾಟಿ ದೇವರ ದರ್ಶನಕ್ಕಾಗಿ ಸಂಚರಿಸುತ್ತಾರೆಂಬ ಸಂಪ್ರದಾಯವು, ಕಾಲ ಹಾಗೂ ವಿವಾದಗಳನ್ನು ಮೀರಿ ಜೀವಂತವಾಗಿರುವ ಪವಿತ್ರತೆಯ ಸಂಕೇತವಾಗಿದೆ. ಇದು ಇಡೀ ಸಮಾಜಕ್ಕೆ ಸಿಕ್ಕಿರುವ ನಿಜವಾದ “ಪೀರ್”‌ ಅಂದರೆ ಮಾರ್ಗದರ್ಶಕ.

ಈ ಸಂಸ್ಕೃತಿ, ನಂಬಿಕೆ ಮತ್ತು ಸಮನ್ವಯವನ್ನು ಉಳಿಸಿಕೊಂಡು ಹೋಗುವುದು ಇಂದಿನ ಸಾಮಾಜಿಕ ಮತ್ತು ಧಾರ್ಮಿಕ ಪರಿಸ್ಥಿತಿಯಲ್ಲಿ ಅತ್ಯಗತ್ಯ. ವೈಯಕ್ತಿಕ ದ್ವೇಷ ಅಥವಾ ಆಡಳಿತಾತ್ಮಕ ನಿಷೇಧಗಳು ಈ ಭಾವೈಕ್ಯತೆಯ ಉತ್ಸವದ ಮೇಲೆ ಕಪ್ಪು ನೆರಳಾದರೂ, ಗ್ರಾಮಸ್ಥರ ಬದ್ಧತೆ ಮತ್ತು ನಿಷ್ಠೆ ಆ ನೆರಳಿಗೆ ಬೆಳಕಿನ ಸ್ಪರ್ಶವನ್ನೇ ನೀಡುತ್ತದೆ.

WhatsApp Image 2025 02 05 at 18.09.20 2
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X