ಯಾದಗಿರಿ ಜಿಲ್ಲೆಯನ್ನು ಒಳಗೊಂಡಿರುವ ರಾಯಚೂರು ಶೈಕ್ಷಣಿಕ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ʼಶುಚಿ ಯೋಜನೆʼ ಅಡಿ ಗುಣಮಟ್ಟದ ಮುಟ್ಟಿನ ಪ್ಯಾಡ್‌ಗಳನ್ನು ಪೂರೈಸುವುದು ಹಾಗೂ ಋತುಚಕ್ರದ ಸಮಯದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕಿಯರು ಶಾಲೆಗೆ ಗೈರುಹಾಜರಾಗುವುದನ್ನು ಕಡಿಮೆ ಮಾಡಲು ಆರಂಭಿಸಿದ್ದ ಯೋಜನೆ ಏಕಾಏಕಿ ಸ್ಥಗಿತಗೊಂಡಿದೆ.
ನಾಲ್ಕು ವರ್ಷಗಳ ಅಂತರದ ನಂತರ, ಕರ್ನಾಟಕ ಸರ್ಕಾರವು ಕಳೆದ ಫೆಬ್ರವರಿಯಲ್ಲಿ ‘ಶುಚಿ ಯೋಜನೆʼಯನ್ನು ಪುನರುಜ್ಜೀವನಗೊಳಿಸಿತ್ತು. ಈ ಕಾರ್ಯಕ್ರಮವು ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 19 ಲಕ್ಷ ಮಂದಿ ಹದಿಹರೆಯದ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ತಲುಪಿಸುವತ್ತ ಗಮನ ಹರಿಸುತ್ತಿದೆ.
“ಕರ್ನಾಟಕ ಆರೋಗ್ಯ ಇಲಾಖೆಯು ನೇರವಾಗಿ ಶಾಲೆಗಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಿದೆ. ಪ್ರತಿ ಪ್ಯಾಕ್‌ನಲ್ಲಿ 10 ಸ್ಯಾನಿಟರಿ ನ್ಯಾಪ್‌ಕಿನ್‌ಗಳಿವೆ. ಅಲ್ಲದೆ, ವಿದ್ಯಾರ್ಥಿನಿಯರಿಗೆ ಒಂದು ವರ್ಷಕ್ಕೆ ಸಾಕಾಗುವಷ್ಟು ಪ್ಯಾಡ್‌ಗಳನ್ನು ನೀಡಲಾಗುವುದು. ರಾಜ್ಯದಲ್ಲಿ ಹೆಣ್ಣು ಮಕ್ಕಳ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಶುಚಿ ಯೋಜನೆ ಮಹತ್ವದ್ದಾಗಿದೆ. ಸಿದ್ದರಾಮಯ್ಯ ಅವರ ಹಿಂದಿನ ಅಧಿಕಾರವಧಿಯಲ್ಲಿ ಪ್ರಾರಂಭಿಸಲಾದ ಈ ಕಾರ್ಯಕ್ರಮವನ್ನು ನಂತರ ಬಿಜೆಪಿ ಆಡಳಿತದಲ್ಲಿ ನಿಲ್ಲಿಸಲಾಗಿತ್ತು. ನಾವು ₹47 ಕೋಟಿ ವೆಚ್ಚದಲ್ಲಿ 19 ಲಕ್ಷ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುತ್ತಿದ್ದೇವೆ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕುಂಭಮೇಳದಲ್ಲಿ ಕಾಲ್ತುಳಿತ; ನಾಲ್ವರು ಸಾವು, ಒಬ್ಬರಿಗೆ ಗಾಯ
ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಮತ್ತು ಹಿಂದೂಸ್ತಾನ್ ಲೈಫ್ ಕೇರ್ ಲಿಮಿಟೆಡ್‌ನ ಸಿಎಸ್‌ಆರ್ ನಿಧಿಯಿಂದ ಈ ಹಿಂದೆ ₹1.1 ಲಕ್ಷ ಮೌಲ್ಯದ ಪ್ಯಾಡ್ ಸರಬರಾಜು ಮತ್ತು ವಿಲೇವಾರಿ ಯಂತ್ರಗಳನ್ನು ಹೊಂದಿರುವ ಶಾಲೆಗಳಿಗೆ ಬೆಂಬಲ ನೀಡಲಾಗಿತ್ತು. ಈ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳು ಉಚಿತ ಮುಟ್ಟಿನ ಸಾಮಗ್ರಿಗಳನ್ನು ಪಡೆದವು. ಆದರೆ ಈ ಯೋಜನೆ ಈಗ ಏಕಾಏಕಿ ಸ್ಥಗಿತಗೊಂಡಿರುವುದರಿಂದ ಪ್ರತಿ ಜಿಲ್ಲೆಯ 200ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿನಿಯರು ಬಟ್ಟೆಯನ್ನು ಬಳಸುವಂತಾಗಿದೆ. ಇದರಿಂದ ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
“ಶುಚಿ ಪ್ಯಾಡ್ ವಿತರಣೆಯಲ್ಲಿ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಗ್ರಾಮೀಣ ಕುಟುಂಬಗಳು ಪ್ಯಾಡ್‌ಗಳನ್ನು ಖರೀದಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಉಚಿತ ಪ್ಯಾಡ್‌ಗಳನ್ನು ಪಡೆದ ವಿದ್ಯಾರ್ಥಿಗಳು ಈಗ ಬಟ್ಟೆ ಬಳಕೆಯನ್ನು ಮುಂದುವರೆಸುವಂತಾಗಿದೆ” ಎಂದು ರಾಯಚೂರು ಜಿಲ್ಲೆಯ ಪೋಷಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಸ್ಯಾನಿಟರಿ ಪ್ಯಾಡ್ ವಿತರಣೆಯನ್ನು ಸ್ಥಗಿತಗೊಳಿಸಿರುವುದು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವಿದ್ಯಾರ್ಥಿನಿಯರ ಮೇಲೆ ಪರಿಣಾಮ ಬೀರಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾದಾಗಿನಿಂದ ಸರಬರಾಜು ನಿಲ್ಲಿಸಿರುವ ಬಗ್ಗೆ ಬಡವರು ಹಾಗೂ ದಲಿತ ವಿದ್ಯಾರ್ಥಿನಿಯರ ಪೋಷಕರು ಚಿಂತಿತರಾಗಿದ್ದಾರೆ. ಇಂತಹ ಪ್ರಮುಖ ವಿಷಯವನ್ನು ಸರ್ಕಾರ ನಿರ್ಲಕ್ಷಿಸಿರುವುದು ಎದ್ದು ಕಾಣುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.