ಕರ್ನಾಟಕದ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳೊಂದಿಗೆ ಭಾರಿ ಬಹುಮತ ಗಳಿಸಿ ಸರ್ಕಾರ ರಚನೆಗೆ ಸಿದ್ಧವಾಗಿದೆ. ಈ ಬಾರಿ 92 ವರ್ಷದ ಹಿರಿಯರಿಂದ 28 ವರ್ಷದ ಯುವಕರವರೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಅತಿ ಹಿರಿಯ ಶಾಸಕರು:
ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್‌ನ 92 ವಯಸ್ಸಿನ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಅತಿ ಹಿರಿಯ ಸದಸ್ಯರಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ಈ ಬಾರಿ ಎದುರಾಳಿ ಅಭ್ಯರ್ಥಿ ಬಿಜೆಪಿಯ ಬಿ ಜಿ ಅಜಯಕುಮಾರ್ ಅವರನ್ನು 27,888 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸದ್ಯ ದೇಶದ ಅತಿ ಹಿರಿಯ ಶಾಸಕ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ.
ಜಿ ಹಂಪಯ್ಯ ನಾಯಕ್
84 ವರ್ಷದ ರಾಯಚೂರಿನ ಮಾನ್ವಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಶಾಸಕ ಜಿ ಹಂಪಯ್ಯ ನಾಯಕ್ ಬಿಜೆಪಿಯ ಬಿ ವಿ ನಾಯಕ್ ಅವರ ವಿರುದ್ಧ 7 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಎಂ ವೈ ಪಾಟೀಲ
ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ವೈ ಪಾಟೀಲ್ ಬಿಜೆಪಿಯ ಮಾಲೀಕಯ್ಯ ಗುತ್ತೇದಾರ್ ವಿರುದ್ಧ ಜಯ ಗಳಿಸಿದ್ದಾರೆ. 82 ವರ್ಷ ವಯಸ್ಸಿನ ಇವರು ಮೂರನೇ ಅತಿ ಹಿರಿಯ ಶಾಸಕರೆನಿಸಿದ್ದಾರೆ. ಅಲ್ಲದೆ ಶಾಸನ ಸಭೆಗೆ ಮೂರನೆ ಬಾರಿ ಆಯ್ಕೆಯಾಗುತ್ತಿದ್ದಾರೆ.
ಎಚ್ ವೈ ಮೇಟಿ
77 ವರ್ಷದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಎಚ್ ವೈ ಮೇಟಿ ಬಿಜೆಪಿಯ ಪ್ರಬಲ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಮೇಟಿ 2013ರ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದರು.
ಆರ್ ವಿ ದೇಶಪಾಂಡೆ
ಕಾಂಗ್ರೆಸ್‌ನ ಆರ್ ವಿ ದೇಶಪಾಂಡೆ ಸತತ 9 ಬಾರಿ ಆಯ್ಕೆಯಾದ ದಾಖಲೆ ಹೊಂದಿರುವ ರಾಜ್ಯದ ಎರಡನೆ ನಾಯಕರು. ಉತ್ತರ ಕನ್ನಡದ ಹಳಿಯಾಳ- ಜೊಯಿಡಾ- ದಾಂಡೇಲಿ ಕ್ಷೇತ್ರದಿಂದ 10 ಚುನಾವಣೆ ಎದುರಿಸಿರುವ ಇವರು 9 ಬಾರಿ ಗೆಲುವು ಕಂಡಿದ್ದಾರೆ. ಎಸ್ ಎಂ ಕೃಷ್ಣ ಹಾಗೂ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನೀಲ್ ಹೆಗಡೆ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇವರ ವಯಸ್ಸು 75 ವರ್ಷ.
ಅತಿ ಕಿರಿಯ ಶಾಸಕರು:
ದರ್ಶನ್ ಧ್ರವನಾರಾಯಣ
ಮೈಸೂರಿನ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ 28 ವರ್ಷದ ದರ್ಶನ್ ಧ್ರವನಾರಾಯಣ್ ರಾಜ್ಯದ ಅತಿ ಕಿರಿಯ ಶಾಸಕರಾಗಿದ್ದಾರೆ. ತಂದೆ ಮಾಜಿ ಶಾಸಕ, ಕಾಂಗ್ರೆಸ್‌ನ ಹಿರಿಯ ನಾಯಕ ಆರ್ ಧ್ರವನಾರಾಯಣ್ ಅವರ ಪುತ್ರ. ತಂದೆ, ತಾಯಿಯ ಅಕಾಲಿಕ ಮರಣದಿಂದಾಗಿ ಪಕ್ಷದ ಹೈಕಮಾಂಡ್ ದರ್ಶನ್ ಅವರಿಗೆ ಟಿಕೆಟ್ ನೀಡಿತ್ತು. ಬಿಜೆಪಿಯ ಹಾಲಿ ಶಾಸಕ ಹರ್ಷವರ್ಧನ್ ಅವರನ್ನು 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.
ಧೀರಜ್ ಮುನಿರಾಜು
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ 31 ವರ್ಷ ವಯಸ್ಸಿನ ಧೀರಜ್ ಮುನಿರಾಜು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ರಿಯಲ್ ಎಸ್ಟೇಟ್ ಹಿನ್ನಲೆಯುಳ್ಳ ಇವರು ಕೋವಿಡ್ ಸಾಂಕ್ರಾಮಿಕ ಉಂಟಾಗಿದ್ದ ಸಮಯದಲ್ಲಿ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಹಲವು ರೀತಿಯ ಸಹಾಯ ಮಾಡಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೆಂಕಟರಮಣಯ್ಯ ಅವರನ್ನು ಮಣಿಸಿದ್ದಾರೆ.
ನಾರಾ ಭರತ್ ರೆಡ್ಡಿ
ಕುರುಗೋಡು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ 33 ವರ್ಷ ವಯಸ್ಸಿನ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸಿನ ನಾರಾ ಭರತ್ ರೆಡ್ಡಿ ಬಿಜೆಪಿಯ ಪ್ರಭಾವಿ ನಾಯಕ ಸೋಮಶೇಖರ್ ರೆಡ್ಡಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಬಳ್ಳಾರಿಯಲ್ಲಿ ಈ ಬಾರಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಪಡೆದಿದೆ.
ಡಾ. ಚಂದ್ರು ಲಮಾಣಿ
34 ವರ್ಷದ ಗದಗದ ಶಿರಹಟ್ಟಿ ಕ್ಷೇತ್ರದ ಡಾ. ಚಂದ್ರು ಲಮಾಣಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡು ಚುನಾವಣೆಗೆ ಸ್ಪರ್ಧಿಸಿದ್ದರು.
ಅವಿನಾಶ್ ಜಾಧವ್
ಕಲಬುರಗಿಯ ಮೀಸಲು ಚಿಂಚೋಳಿ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸಿದ್ದ ಬಿಜೆಪಿಯ ಡಾ. ಅವಿನಾಶ್ ಜಾಧವ್ ಅವರು ಪುನರಾಯ್ಕೆಯಾಗಿದ್ದಾರೆ. ಇವರು ಕೂಡ 34 ವರ್ಷ ವಯಸ್ಸಿನವರು.
ಈ ಮೊದಲು ಜರುಗಿದ 2018ರ ಚುನಾವಣೆಯಲ್ಲಿ ಡಾ. ಉಮೇಶ್ ಜಾಧವ್ ಅವರು ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದರು. ಸಚಿವ ಸ್ಥಾನ ಸಿಗಲಿಲ್ಲ ಹಾಗೂ ತಮ್ಮ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರಿ ಸಂಸದರಾಗಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಡಾ. ಅವಿನಾಶ್ ಜಾಧವ್ ಅವರನ್ನು ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಅವರು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
ಡಾ. ಮಂಥರ್ ಗೌಡ
ಬಿಜೆಪಿಯ ಭದ್ರಕೋಟೆಯಾಗಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರ ಕೈ ಪಾಲಾಗಿದೆ. ಐದು ಬಾರಿ ಶಾಸಕರಾಗಿದ್ದ ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಕಾಂಗ್ರೆಸ್‌ನ 38 ವರ್ಷ ವಯಸ್ಸಿನ ಡಾ. ಮಂಥರ್ ಗೌಡ ಸೋಲಿಸಿದ್ದಾರೆ. ಇವರು ಮಾಜಿ ಸಚಿವ, ಅರಕಲಗೂಡು ಕ್ಷೇತ್ರದ ಜೆಡಿಎಸ್‌ನ ಹಾಲಿ ಶಾಸಕ ಎ ಮಂಜು ಅವರ ಪುತ್ರ.
ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಪ್ರಭಾವಿ ಸಚಿವ ಡಾ ಕೆ ಸುಧಾಕರ್ ಅವರನ್ನು ಸೋಲಿಸಿರುವ ಕಾಂಗ್ರೆಸಿನ ಪ್ರದೀಪ್ ಈಶ್ವರ್ ಈಗ ಸಾಕಷ್ಟು ಸುದ್ದಿಯಲ್ಲಿರುವ ವ್ಯಕ್ತಿ. ಏಳೆಂಟು ವರ್ಷಗಳ ಹಿಂದೆ ನಗರದಲ್ಲಿ ಸಾಮಾನ್ಯನಾಗಿ ಓಡಾಡಿಕೊಂಡಿದ್ದ ಹುಡುಗ ಇಂದು ಪ್ರಭಾವಿ ಸಚಿವರನ್ನು ಮಣಿಸಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪರಿಶ್ರಮ ನೀಟ್ ಅಕಾಡೆಮಿಯನ್ನು ಸ್ಥಾಪಿಸಿ ರಾಜ್ಯದಲ್ಲಿಯೇ ಅತ್ಯುತ್ತಮ ಸಂಸ್ಥೆಯನ್ನಾಗಿ ಕಟ್ಟಿ ಬೆಳೆಸಿದ್ದರು. ಜನಪರ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಪ್ರದೀಪ್ ಚಿಕ್ಕಬಳ್ಳಾಪುರದಲ್ಲಿ ಜನಪ್ರಿಯತೆ ಹೊಂದಿದ್ದರು. ಇವರ ವಯಸ್ಸು 38 ವರ್ಷ.
ಪ್ರಿಯಕೃಷ್ಣ
39 ವರ್ಷ ವಯಸ್ಸಿನ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಿಯಕೃಷ್ಣ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಈ ಮೊದಲು ಪ್ರಭಾವಿ ಸಚಿವ ವಿ ಸೋಮಣ್ಣ ಅವರನ್ನು ಮಣಿಸಿದ್ದರು. ನಂತರ ಕಳೆದ ಚುನಾವಣೆಯಲ್ಲಿ ಅವರ ವಿರುದ್ಧ ಪರಾಭವಗೊಂಡಿದ್ದರು. ಪ್ರಿಯಕೃಷ್ಣ ಮಾಜಿ ಸಚಿವ ಹಾಗೂ ವಿಜಯನಗರದ ಹಾಲಿ ಶಾಸಕ ಎಂ ಕೃಷ್ಣಪ್ಪ ಅವರ ಪುತ್ರ.
ಜಿ ಟಿ ಹರೀಶ್ ಗೌಡ
ಹುಣಸೂರು ಕ್ಷೇತ್ರದಿಂದ ಜೆಡಿಎಸ್‌ನಿಂದ ಮೊದಲ ಬಾರಿಗೆ ಆಯ್ಕೆಯಾಗಿರುವ ಜಿ ಟಿ ಹರೀಶ್ ಗೌಡ ಆಯ್ಕೆಯಾಗಿದ್ದಾರೆ. ಇವರು ಮಾಜಿ ಸಚಿವ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ನ ಹಾಲಿ ಶಾಸಕ ಜಿ ಟಿ ದೇವೇಗೌಡ ಅವರ ಪುತ್ರ. ಇವರ ವಯಸ್ಸು 36 ವರ್ಷ.
ಸ್ವರೂಪ್ ಪ್ರಕಾಶ್
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಹಾಸನ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಇವರು ಬಿಜೆಪಿಯ ಪ್ರಭಾವಿ ಶಾಸಕ ಪ್ರೀತಂ ಗೌಡ ಅವರನ್ನು ಮಣಿಸಿ ಆಯ್ಕೆಯಾಗಿದ್ದಾರೆ. ಹಾಸನ ಕ್ಷೇತ್ರವನ್ನು ಈ ಮೊದಲು ಸ್ವರೂಪ್ ಅವರ ತಂದೆ ಹೆಚ್ ಪಿ ಪ್ರಕಾಶ್ ಎರಡು ಬಾರಿ ಪ್ರತಿನಿಧಿಸಿದ್ದರು. ಸ್ವರೂಪ್ ಅವರ ವಯಸ್ಸು 40 ವರ್ಷ.