ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ಕು ಮಂದಿ ಕಳ್ಳರನ್ನು ಬಂಧಿಸಿರುವ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು, ಕಳ್ಳರಿಂದ 8.87ಲಕ್ಷ ರೂ. ಬೆಲೆಬಾಳುವ ಬೈಕ್‌ಗಳು, ನಗದು ಹಾಗೂ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಶಾಹೀಲ್ ಖಾನ್, ಕೋಲಾರದ ರೆಹಮತ್ ನಗರದ ತನ್ವಿರ್ ಮತ್ತು ಇಬ್ರಾಹಿಂ ಪಾಷಾ, ಶ್ರೀನಿವಾಸಪುರ ಪಟ್ಟಣದ ಇಂದಿರಾ ನಗರದ ಸುಲ್ತಾನ್ ಬಂಧಿತ ಆರೋಪಿಗಳು.

ಆರೋಪಿಗಳ ಮೇಲೆ ಚಿಂತಾಮಣಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಪ್ರಕರಣಗಳು, ಬೆಂಗಳೂರಿನ ಮಹದೇವಪುರ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಮುಳಬಾಗಿಲು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ವಿವಿಧ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಗ್ರಾಮಾಂತರ ಠಾಣೆ ವ್ಯಾಪ್ತಿಯ ವೆಂಕಟಗಿರಿ ಕೋಟೆಯ ನಿವಾಸಿ ಅಜಯಕುಮಾರ್ ಎಂಬುವವರು ಇತ್ತೀಚೆಗಷ್ಟೇ ಕಾರಿನ ಬ್ಯಾಟರಿ ಹಾಗೂ ಇತರೆ ಗುಜರಿ ವಸ್ತುಗಳು ಕಳ್ಳತನವಾಗಿವೆ ಎಂದು ದೂರು ನೀಡಿದ್ದರು.

ಆರೋಪಿಗಳ ಪತ್ತೆಗಾಗಿ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ, ಎಎಸ್ಪಿ ರಾಜಾ ಇಮಾಮ್ ಖಾಸಿಂ, ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಬಣ ಬಡಿದಾಟಕ್ಕೆ ಕಾರಣವಾದ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ
ತನಿಖಾ ತಂಡದಲ್ಲಿ ಇನ್ಸ್ ಸ್ಪೆಕ್ಟರ್ ಶಿವರಾಜು, ಎಸ್‌ಐಗಳಾದ ಮಮತ, ನಾಗೇಂದ್ರ ಪ್ರಸಾದ್, ಪೇದೆಗಳಾದ ದಿನೇಶ್, ನರಸಿಂಹ, ಮಂಜುನಾಥರೆಡ್ಡಿ, ನಂದಕುಮಾರ್, ರಾಮಾಂಜಿನೇಯ, ಅರುಣ್, ಕೃಷ್ಣಮೂರ್ತಿ, ಶರಣಬಸವ, ಶ್ರೀನಿವಾಸ್ ಇದ್ದರು.