ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಇದೇ ಅವಕಾಶವನ್ನು ಬಳಸಿಕೊಂಡ ಮರಗಳ್ಳರು, ನಗರದ ಪ್ರತಿಷ್ಠಿತ ಬಡಾವಣೆಯಲ್ಲಿದ್ದ ಶ್ರೀಗಂಧದ ಮರವನ್ನೇ ಕಳವುಗೈದಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ನ್ಯಾಯಾಂಗ ಬಡಾವಣೆಯ ಪಾರ್ಕ್‌ನಲ್ಲಿರುವ ಶ್ರೀಗಂಧದ ಮರವನ್ನು ಬೆಳಗಿನ ಜಾವ ಸುಮಾರು ಮೂರು ಗಂಟೆ ಸಮಯದಲ್ಲಿ ಖದೀಮರು ಕತ್ತರಿಸಿಕೊಂಡು ಹೋಗಿದ್ದಾರೆ.
ಸುರಿಯುತ್ತಿರುವ ಮಳೆಯಿಂದಾಗಿ ಅಕ್ಕಪಕ್ಕದ ಮನೆಗಳಿಗೆ ಶಬ್ದ ಕೇಳಿಸುವುದಿಲ್ಲ ಎಂಬ ದೃಢಪಡಿಸಿಕೊಂಡ ಕಳ್ಳರು, ಶ್ರೀಗಂಧದ ಮರವನ್ನು ಕತ್ತರಿಸಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಯಲಹಂಕ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆಯನ್ನು ನಡೆಸಿದ್ದು, ಶ್ರೀಗಂಧದ ಮರವನ್ನು ಕಳವು ಮಾಡಿಕೊಂಡು ಹೋದ ಆರೋಪಿಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ನ್ಯಾಯಾಂಗ ಬಡಾವಣೆಯಲ್ಲಿ ಕಳ್ಳತನಗಳು ಸಾಮಾನ್ಯ ಸಂಗತಿ ಎಂದು ಸ್ಥಳೀಯ ನಿವಾಸಿಗಳು ಸುಮ್ಮನಾಗಿಬಿಡುತ್ತಾರೆ. ಯಾರು ಸಂಬಂಧಪಟ್ಟವರಿಗೆ ದೂರನ್ನು ನೀಡಲು ಮುಂದಾಗುವುದಿಲ್ಲ. ಆದರೆ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ಎಂ ವೆಂಕಟೇಶ್ ಅವರು ತಕ್ಷಣ ಪೊಲೀಸ್ ಠಾಣೆಗೆ ಕಳ್ಳತನದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಎಎಸ್ಐ ನಾರಾಯಣಸ್ವಾಮಿ ಪರಿಶೀಲನೆ ನಡೆಸಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಎಫ್ಐಆರ್ ಮಾಡಲು ಸಹಕರಿಸಿದ್ದಾರೆ.
ನ್ಯಾಯಾಂಗ ಬಡಾವಣೆಯಲ್ಲಿ ಮನೆಗಳ್ಳತನ, ಅಂಗಡಿಗಳ ಕಳ್ಳತನ, ಶ್ರೀಗಂಧ ಮರಗಳ ಕಳ್ಳತನ ನಿರಂತರವಾಗಿ ನಡೆಯುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾರ ಹೆಚ್.ಎಂ. ವೆಂಕಟೇಶ್ ಪೋಲಿಸರು ರಾತ್ರಿ ಪಾಳಿಯ ಗಸ್ತನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.
