ಇನ್ನೇನು ಬೇಸಿಗೆಯ ಧಗೆ ಶುರುವಾಗುತ್ತಿದೆ. ದಿನೇ ದಿನೇ ಬಿರು ಬಿಸಿಲಿನ ಪ್ರಮಾಣವೂ ಹೆಚ್ಚುತ್ತಿದೆ. ಆದರೆ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಸಾರ್ವಜನಿಕರ ಬಾಯಾರಿಕೆ ತಣಿಸಲು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ.
ಔರಾದ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಗ್ರಾಮೀಣ ಭಾಗದಿಂದ ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಜನರು ತಮ್ಮ ಅಗತ್ಯ ಕೆಲಸಗಳಿಗಾಗಿ ಬರುತ್ತಾರೆ. ಸದಾ ಜನರಿಂದ ಗಿಜುಗುಡುವ ತಹಸೀಲ್ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಇಲ್ಲದಿರುವುದು ಸಾಮಾನ್ಯ ಎನ್ನುವಂತಾಗಿದೆ. ಹೀಗಾಗಿ ಕಚೇರಿಗೆ ಬಂದ ಸಾರ್ವಜನಿಕರು, ಸಿಬ್ಬಂದಿ ಹೊರಗಡೆ ಅಂಗಡಿಗಳಲ್ಲಿ ಹಣ ಕೊಟ್ಟು ಖರೀದಿಸುವುದು ಮಾಮೂಲಿಯಾಗಿದೆ.
ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ಒಂದು ವರ್ಷ ಕಳೆದಿದೆ, ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ಥಿ ಕಂಡಿಲ್ಲ. ಇದರಿಂದಾಗಿ ಸಾರ್ವಜನಿಕರು ಕಚೇರಿ ಎದುರಿನ ಅಂಗಡಿ, ಮುಂಗಟ್ಟುಗಳಲ್ಲಿ ಹಣ ಕೊಟ್ಟು ನೀರಿನ ಬಾಟಲಿ ಖರೀದಿಸುತ್ತಿದ್ದಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
“ಔರಾದ ತಹಸೀಲ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ನಿತ್ಯ ಕಚೇರಿ ಕೆಲಸಗಳಿಗೆ ಹಳ್ಳಿಗಳಿಂದ ನೂರಾರು ಜನ ಮಹಿಳೆಯರು, ವೃದ್ಧರು ಬರುತ್ತಾರೆ. ಅವರಲ್ಲಿ ಕೆಲವರು ದಿನಪೂರ್ತಿ ಅಲ್ಲಿರುತ್ತಾರೆ. ಹೀಗಾಗಿ ವರ್ಷದಿಂದ ಧೂಳು ತಿನ್ನುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕ ಕೂಡಲೇ ದುರಸ್ತಿಗೊಳಿಸಬೇಕು” ಎಂದು ದಸಂಸ ತಾಲೂಕು ಸಂಚಾಲಕ ಈದಿನ.ಕಾಮ್ ಜತೆಗೆ ಮಾತನಾಡಿ ಸುಭಾಷ ಲಾಧಾ ಆಗ್ರಹಿಸಿದರು.
ಕರವೇ ತಾಲೂಕು ಅಧ್ಯಕ್ಷ ಅನೀಲ ದೇವಕತ್ತೆ ಈದಿನ.ಕಾಮ್ ಜತೆಗೆ ಮಾತನಾಡಿ, “ಗ್ರಾಮೀಣ ಭಾಗದಿಂದ ತಹಸೀಲ್ದಾರ್ ಕಚೇರಿ ಕೆಲಸಗಳಿಗಾಗಿ ಆಗಮಿಸುವ ನೂರಾರು ಜನರಿಗೆ ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಬೇಸಿಗೆ ಶುರುವಾಗುವ ಮುನ್ನವೇ ಸಾರ್ವಜನಿಕರಿಗೆ ಕಚೇರಿ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಕುರಿತು ಔರಾದ ತಾಲೂಕು ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಈದಿನ.ಕಾಮ್ ಜತೆಗೆ ಮಾತನಾಡಿ, “ಕೆಲವು ತಿಂಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ. ಹೀಗಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಶೀಘ್ರದಲ್ಲೇ ದುರಸ್ತಿ ಮಾಡಿ ನೀರಿನ ವ್ಯವಸ್ಥೆ ಮಾಡಲಾಗುವುದು” ಎಂದು ಹೇಳಿದರು.