ಬೀದರ್‌ | ಗಡಿ ಭಾಗದ ಕಮಲನಗರ ತಾಲೂಕು ಕೆಂದ್ರದಲ್ಲೇ ಇಲ್ಲ ʼಸರ್ಕಾರಿ ಪ್ರೌಢ ಶಾಲೆʼ

Date:

Advertisements

ಪತಿವರ್ಷ ನವಂಬರ್‌ ತಿಂಗಳು ಬಂತೆಂದರೆ ಸಾಕು ಎಲ್ಲೆಡೆ ಕನ್ನಡ ಕಲರವ ರಾರಾಜಿಸುತ್ತದೆ. ಕನ್ನಡ ಭಾಷೆ, ನಾಡು, ನುಡಿ, ಸಂಸ್ಕೃತಿ ಕುರಿತು ಚಿಂತನೆ, ವಿವಿಧ ಕಾರ್ಯಕ್ರಮಗಳು ವೈಭವದಿಂದ ಜರುಗುತ್ತವೆ. ಹೌದು ಕನ್ನಡ ಅಸ್ಮಿತೆ ಎಂದರೆ ಇದೆಲ್ಲವೂ ಆಗಲೇಬೇಕು. ಆದರೆ ಕರ್ನಾಟಕ ಎಂದು ನಾಮಕರಣಗೊಂಡು 5 ದಶಕಗಳು ಉರುಳಿದರೂ ರಾಜ್ಯದ ಗಡಿಭಾಗದ ಅದೆಷ್ಟೋ ಊರಿನ ಕನ್ನಡ ಶಾಲೆಗಳು ಮೂಲ ಸೌಕರ್ಯ, ಶಿಕ್ಷಕರ ಕೊರತೆ ಸೇರಿ ನಾನಾ ಸಂಕಷ್ಟಕ್ಕೆ ಸಿಲುಕಿ ಇಂದಿಗೂ ಉಸಿರುಗಟ್ಟುವ ಪರಿಸ್ಥಿತಿಯಲ್ಲಿರುವ ಬಗ್ಗೆ ಚಿಂತನೆ ನಡೆಯದೇ ಇರುವುದು ವಿಪರ್ಯಾಸವೇ ಸರಿ.

ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಬೀದರ್‌ ಜಿಲ್ಲೆಯಲ್ಲಿ ತೆಲುಗು, ಮರಾಠಿ ಭಾಷೆಗಳ ಪ್ರಭಾವ ಸಾಮಾನ್ಯವಾಗಿದೆ. ರಾಜ್ಯದ ಗಡಿಭಾಗದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಯಬೇಕಾದರೆ ಕನ್ನಡ ಶಾಲೆ ಉಳಿಯವುದು ತುಂಬಾ ಮುಖ್ಯವಾಗಿದೆ. ಆದರೆ ಬೀದರ ಜಿಲ್ಲೆಯ ಗಡಿ ತಾಲೂಕಿನ ಕೆಲವು ಶಾಲೆಗಳು ಮಕ್ಕಳಿಗೆ ಮೌಲ್ಯಶಿಕ್ಷಣ ಒದಗಿಸಿ ಸೈ ಎನಿಸಿಕೊಂಡಿವೆ. ಆದರೆ ಇನ್ನು ಹಲವು ಸರ್ಕಾರಿ ಶಾಲೆಗಳು ವಿವಿಧ ಸಮಸ್ಯೆಗಳು ಎದುರಿಸುತ್ತಲೇ ಇವೆ. ಇದರಿಂದ ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನ ಬೆಳೆಸಿಕೊಂಡು ಕನ್ನಡ ಭಾಷೆಯಲ್ಲೇ ಶಿಕ್ಷಣ ಕಲಿಯಬೇಕೆಂಬ ಹಂಬಲ ಹೊಂದಿರುವ ಮಕ್ಕಳಿಗೆ ಕನ್ನಡ ಶಾಲೆಗಳೇ ಇಲ್ಲದಿರುವುದು ಶೋಚನೀಯವಾಗಿದೆ.

ಬೀದರ್‌ ಜಿಲ್ಲೆಯ ಕಮಲನಗರ ಹೊಸ ತಾಲೂಕು, ಔರಾದ (ಬಾ) ತಾಲೂಕಿನಿಂದ ವಿಂಗಡಣೆಯಾದ ಈ ತಾಲೂಕಿನಲ್ಲಿ ಕೆಲ ಗ್ರಾಮಗಳು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿವೆ. ಹೀಗಾಗಿ ಇಲ್ಲಿ ಮರಾಠಿ ಪ್ರಭಾವ ಹೆಚ್ಚಾಗಿದೆ. ಆದರೆ ಇಲ್ಲಿನ ಜನರಿಗೆ ಮಾತ್ರ ಭಾಷೆ ಕನ್ನಡ ಕಲಿಯಬೇಕೆಂಬ ಆಸಕ್ತಿ ಏನು ಕಮ್ಮಿಯಿಲ್ಲ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳೇ ಇಲ್ಲ. ಕನ್ನಡ ಶಾಲೆಗಳ ಕೊರತೆಯಿಂದ ಅಸಂಖ್ಯಾತ ವಿದ್ಯಾರ್ಥಿಗಳು ಮಾತ್ರ ಭಾಷಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ʼಉಳ್ಳವರು ಕನ್ನಡ ಕಲಿಯಲು ನಗರ ಸೇರಿದರೆ ಬಡವರು ಮಕ್ಕಳಿಗೆ ಅನ್ಯ ಭಾಷೆಯೇ ಗತಿʼ ಎಂಬಂತಾಗಿದೆ.

Advertisements

ಕಮಲನಗರ ಒಟ್ಟು 18 ಗ್ರಾಮ ಪಂಚಾಯತಿಗಳು ಹೊಂದಿರುವ ಹೊಸ ತಾಲೂಕು, ತಾಲೂಕಿನಲ್ಲಿ 11 ಸರ್ಕಾರಿ, 10 ಅನುದಾನಿತ ಹಾಗೂ 3 ಖಾಸಗಿ ಸೇರಿ ಒಟ್ಟು 24 ಕನ್ನಡ, ಮರಾಠಿ ಹಾಗೂ ಉರ್ದು ಮಾಧ್ಯಮ ಪ್ರೌಢ ಶಾಲೆಗಳಿವೆ. ಆದರೆ ತಾಲೂಕು ಕೇಂದ್ರವಾಗಿರುವ ಕಮಲನಗರ ಪಟ್ಟಣದಲ್ಲಿ ಯಾವುದೇ ಮಾಧ್ಯಮದ ಸರ್ಕಾರಿ ಪ್ರೌಢ ಶಾಲೆಯಿಲ್ಲ. ಅದರಲ್ಲೂ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢ ಶಾಲೆ ಕೂಡ ಇಲ್ಲದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮೀಣ ಭಾಗದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯವಿರುವ ಕಡೆ ಶಾಲೆ ತೆರೆಯಲು ಅನುಮತಿ ನೀಡಿದೆ. ಆದರೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯಲ್ಲಿರುವ ಜನಪ್ರತಿನಿಧಿಗಳು ಬಡ ವಿದ್ಯಾರ್ಥಿಗಳಿಗೆ ತಾಲೂಕು ಕೇಂದ್ರದ ಮಕ್ಕಳಿಗೆ ಕಲಿಯಲು ಸರ್ಕಾರಿ ಪ್ರೌಢ ಶಾಲೆ ನಿರ್ಮಿಸಲು ಆಗದೇ ಇರುವುದು ದೌರ್ಭಾಗ್ಯ. ಕಮಲನಗರ ಪಟ್ಟಣದಲ್ಲಿ ಖಾಸಗಿ ಹಾಗೂ ಅನುದಾನಿತ ಶಾಲೆ ಇರುವ ಕಾರಣಕ್ಕೆ ಸರ್ಕಾರಿ ಪ್ರೌಢ ಶಾಲೆ ಆರಂಭಕ್ಕೆ ಹಿನ್ನಡೆಯಾಗುತ್ತಿದೆ ಎಂದು ಹೇಳುತ್ತಾರೆ ಪ್ರಜ್ಞಾವಂತ ನಾಗರಿಕರು.

ಕೆಲ ಕಡೆ ಖಾಯಂ ಶಿಕ್ಷಕರಿಲ್ಲದೇ ಶಿಕ್ಷಣದಿಂದ ವಂಚಿತವಾಗುತ್ತಿರುವ ಮಕ್ಕಳು, ಬೀಳುವ ಹಂತದಲ್ಲಿರುವ ಶಾಲೆಯ ಕೊಠಡಿಗಳು, ಮೂಲ ಸೌಕರ್ಯಗಳ ಕೊರತೆ, ಕನ್ನಡ ಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿರುವ ಪೋಷಕರು. ಇನ್ನೊಂದು ಕಡೆ ಕೋಣೆ ಖಾಲಿಯಿದ್ದರೆ ಮಕ್ಕಳಿಲ್ಲ, ಮಕ್ಕಳಿದ್ದರೆ ತರಗತಿ ಕೋಣೆಯಿಲ್ಲ, ಎಲ್ಲಾ ವ್ಯವಸ್ಥೆವಿದ್ದರೆ ಶಿಕ್ಷಕರ ಕೊರತೆ ಕಾಡುತ್ತದೆ. ಇಂಥಹ ಪರಿಸ್ಥಿತಿಯಲ್ಲಿ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳು ಇಂದೋ-ನಾಳೆಯೋ ಮುಚ್ಚಬಹುದು ಎಂಬ ಭೀತಿ ಕನ್ನಡ ಅಭಿಮಾನಿಗಳಿಗೆ ಕಾಡುತ್ತಿದೆ. ಕನ್ನಡದ ಅಭಿವೃದ್ಧಿಯ ಕುರಿತು ಪುಂಖಾನುಪುಂಖವಾಗಿ ಮಾತುಗಳನ್ನಾಡುವ ಸರಕಾರ, ಜನಪ್ರತಿನಿಧಿಗಳು ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಧ್ವನಿಯೆತ್ತದೆ ಮೌನವಹಿಸಿರುವುದು ಯಾಕೆ?

ಸರ್ಕಾರಿ ಪ್ರೌಢ ಶಾಲೆಗಾಗಿ ಮೂರು ದಶಕದಿಂದ ಹೋರಾಟ: 

ಕಮಲನಗರ ತಾಲೂಕು ಕೇಂದ್ರದ ಸುತ್ತಲಿನ ಗ್ರಾಮಗಳ ನೂರಾರು ಬಡ ಮಕ್ಕಳಿಗೆ ಕಲಿಯಲು ಸರ್ಕಾರಿ ಪ್ರೌಢ ಶಾಲೆ ಇಲ್ಲ. ಹೀಗಾಗಿ ಡೋನೆಶನ್‌ ಕೊಟ್ಟು ಖಾಸಗಿ, ಅನುದಾನಿತ ಶಾಲೆಗಳಿಗೆ ಹೋಗಬೇಕಾದ ಪರಿಸ್ಥಿತಿ ಅನಿವಾರ್ಯವಿದೆ. ಆದರೆ ಕಡುಬಡ ಕುಟುಂಬದ ಪೋಷಕರು ಕನಿಷ್ಠ ಶುಲ್ಕ ಕಟ್ಟಲು ಸಾಧ್ಯವಾಗುವುದಿಲ್ಲ. ಇದರಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲಾಗದೆ ಶಿಕ್ಷಣದಿಂದ ವಂಚಿತರಾಗಿ ಮಾಡುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಕಮಲನಗರದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢ ಶಾಲೆ ಆರಂಭಿಸುವಂತೆ ಮನವಿ ಪತ್ರ ಸಲ್ಲಿಸುತ್ತಲೇ ಬರುತ್ತಿದ್ದೇವೆ. ಆದರೆ ಯಾವುದೇ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇಚ್ಚಾಶಕ್ತಿ ತೋರುತ್ತಿಲ್ಲ. ಇದರಿಂದ ನಮ್ಮ ಮನವಿಗೆ ಕಿಮ್ಮತ್ತೇ ಇಲ್ಲ ಎನ್ನುವಂತಾಗಿದೆ ಎಂದು ವ್ಯವಸ್ಥೆ ಪರಿವರ್ತನೆ ವೇದಿಕೆ ಅಧ್ಯಕ್ಷ ವೈಜಿನಾಥ ವಡ್ಡೆ ಅಸಮಧಾನ ವ್ಯಕ್ತಪಡಿಸುತ್ತಾರೆ.

ಮೂರು ದಶಕಗಳಿಂದ ಈ ಬಗ್ಗೆ ಜನಪ್ರತಿಗಳಿಗೆ, ಸರ್ಕಾರಕ್ಕೆ  ಮನವಿ ಸಲ್ಲಿಸಿದ್ದೇನೆ. ಇದೇ ನ.20 ರಂದು ಸ್ಥಳೀಯ ಶಾಸಕರಿಗೆ ತಾಲೂಕು ತಹಸೀಲ್ದಾರ್‌ ಮೂಲಕ ಮನವಿ ನೀಡಲಾಗಿದೆ. ಶಿಕ್ಷಣ ಇಲಾಖೆಗೂ ಪತ್ರ ಬರೆಯಲಾಗಿದೆ. ಈಗಲಾದರೂ ಶಾಸಕರು ತಾಲೂಕು ಕೆಂದ್ರದಲ್ಲಿ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರೌಢ ಶಾಲೆ ಆರಂಭಿಸುವಂತೆ ಈದಿನ.ಕಾಮ್‌ ದೊಂದಿಗೆ ಮಾತನಾಡಿ ಒತ್ತಾಯಿಸಿದ್ದಾರೆ.

ಗಡಿ ತಾಲೂಕು ಕಮಲನಗರ ತಾಲೂಕು ಕೇಂದ್ರದಲ್ಲಿ ಸರ್ಕಾರಿ ಪ್ರೌಢ ಶಾಲೆ ಕೊರತೆ ಇರುವುದು ಬೇಸರದ ಸಂಗತಿ. ಇದರಿಂದ ಕನ್ನಡ ಕಲಿಕೆ ಬಯಸುವ ಪ್ರತಿಭಾವಂತ ವಿದ್ಯಾರ್ಥಿಗಳು ಮಾತ್ರ ಭಾಷೆಯಿಂದ ದೂರವಾಗುತ್ತಿದ್ದಾರೆ. ಈ ಹಿಂದೆ ಶಿಕ್ಷಣ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ ಇಚ್ಚಾಶಕ್ತಿ ಕೊರತೆಯಿಂದ ಯಾವುದೇ ಪ್ರತಿಫಲ ದೊರೆಯುತ್ತಿಲ್ಲ. ಇಂದು ಗಡಿಯಲ್ಲಿ ಕನ್ನಡ ಉಳಿಸುವುದೇ ದೊಡ್ಡ ಸವಾಲಿನ ಕೆಲಸ. ಇಂಥದರಲ್ಲಿ ಕನ್ನಡ ಶಾಲೆಯೇ ಇಲ್ಲ ಎಂದರೆ ಭವಿಷ್ಯದ ಮಕ್ಕಳಿಗೆ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಚಿಗುರೊಡೆವುದಿಲ್ಲ ಎಂದು ಕಮಲನಗರ ತಾಲೂಕು ಕಸಾಪ ಅಧ್ಯಕ್ಷ ಪ್ರಶಾಂತ ಮಠಪತಿ ಈದಿನ.ಕಾಮ್‌ ದೊಂದಿಗೆ ಮಾತನಾಡಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಪೈಗಂಬರ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಉಪನ್ಯಾಸಕ; ವಿದ್ಯಾರ್ಥಿಗಳು ಆಕ್ರೋಶ

ಸರ್ಕಾರಿ ಪ್ರೌಢ ಶಾಲೆ ಆರಂಭಕ್ಕೆ ನಿವೇಶನ ಕೊರತೆ:

ಮಾಜಿ ಸಚಿವ, ಔರಾದ-ಕಮಲನಗರ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಈದಿನ.ಕಾಮ್‌ ದೊಂದಿಗೆ ಮಾತನಾಡಿ, “ಕಮಲನಗರದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢ ಶಾಲೆ ಪ್ರಾರಂಭಿಸುವ ಕುರಿತಾದ ಒತ್ತಾಯ ನನ್ನ ಗಮನಕ್ಕೆ ಇದೆ . ಈ ಬಗ್ಗೆ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಆದರೆ ನಿವೇಶನದ ಕೊರತೆಯ ಕಾರಣಕ್ಕೆ ಆಗಲಿಲ್ಲ. ಈ ಬಗ್ಗೆ ಇನ್ನೊಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಶಾಲೆ ಆರಂಭಕ್ಕೆ ಪ್ರಯತ್ನಿಸುವೆ ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X