ಔರಾದ ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿರುವ ಕಟ್ಟೆಯ ಪಕ್ಕದಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಕೇಸರಿ ಬಾವುಟದ ಕಟ್ಟೆ ನಿರ್ಮಿಸಲಾಗಿದೆ ಆ ಮೂಲಕ ಕೋಮು ಸೌಹಾರ್ದತೆಗೆ ದಕ್ಕೆ ತಂದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ಸಮಿತಿ ಔರಾದ (ಬಿ) ಮತ್ತು ದಲಿತ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ ಕೌಡಗಾಂವ್ ಗ್ರಾಮದ ಪರಿಶಿಷ್ಟ ಸಮುದಾಯದ ಮಹಿಳೆಯರು, ಮಕ್ಕಳು ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಪ್ರಮುಖರು ಕೌಡಗಾಂವ್ ಗ್ರಾಮದಿಂದ ಸುಮಾರು 22 ಕಿ.ಮೀ. ಕಾಲ್ನಡಿಗೆ ಮೂಲಕ ಬೀದರ್ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.
ನಂತರ ಜಿಲ್ಲಾಧಿಕಾರಿ ಕಚೇರಿ ಎದುರಿನ ಮುಖ್ಯ ರಸ್ತೆ ಬಂದ್ ಮಾಡಿಸಿ 2 ಗಂಟೆಗಳ ಕಾಲ ಪ್ರತಿಭಟನಾ ಧರಣಿ ನಡೆಸಿ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಬಳಿಕ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಎಸ್ಪಿ ಚನ್ನಬಸವಣ್ಣ ಎಸ್.ಎಲ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹಕ್ಕೊತ್ತಾಯ ಪತ್ರ ಸ್ವೀಕರಿಸಿ ಮಾತನಾಡಿ, “ನಿಮ್ಮ ಎಲ್ಲ ಬೇಡಿಕೆಗಳನ್ನು ಕಾನೂನು ಚೌಕಟ್ಟಿನಲ್ಲಿ ಈಡೇರಿಸಲು ನಾವು ಸಿದ್ಧರಿದ್ದೇವೆ. ಗ್ರಾಮದಲ್ಲಿ ಎರಡು ಸಮುದಾಯಗಳ ಮಧ್ಯೆ ಸೃಷ್ಠಿಯಾದ ಭಿನ್ನಾಪ್ರಾಯಗಳು ಹೋಗಲಾಡಿಸಿ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬಾಳಬೇಕೆಂಬ ಅಪೇಕ್ಷೆ ನಮ್ಮದಾಗಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ತಪ್ಪಿಸ್ಥ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ರಾಹುಲ್ ಖಂದಾರೆ, ಸುಭಾಷ ಲಾಧಾ, ರಾಜಕುಮಾರ ಮೂಲಭಾರತಿ, ಪ್ರದೀಪ್ ನಾಟೇಕರ್, ಕಪೀಲ್ ಗೊಡಬಲೆ, ವಿನೋದ್ ರತ್ನಾಕರ್, ಮಹೇಶ ಗೊರನಾಳಕರ್, ಗೌತಮ್ ದೊಡ್ಡಿ, ವಿಠ್ಠಲದಾಸ ಪ್ಯಾಗೆ, ಬಾಬುರಾವ್ ಪಾಸ್ವಾನ್, ಉಮೇಶ ಸೋರಳ್ಳಿಕರ್, ಪ್ರಕಾಶ ರಾವಣ, ರಾಹುಲ್ ಸೇರಿದಂತೆ ಹಲವರು ಮಾತನಾಡಿ, “ಕೌಡಗಾಂವ್ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಅಂಬೇಡ್ಕರ್ ಪ್ರತಿಮೆಯಿತ್ತು. ರಾಷ್ಟೀಯ ಹೆದ್ದಾರಿ ವಿಸ್ತರಣೆ ವೇಳೆ ತೆರವುಗೊಳಿಸಿದರು. ಇದೀಗ ಅದೇ ಸ್ಥಳದಲ್ಲಿ ಅಂಬೇಡ್ಕರ್ ವೃತ್ತ ಮರು ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ ಅದೇ ಗ್ರಾಮದ ಕೆಲ ಯುವಕರು ಪೊಲೀಸರ ಸಮ್ಮುಖದಲ್ಲಿಯೇ ಅಂಬೇಡ್ಕರ್ ವೃತ್ತದ ಪಕ್ಕದಲ್ಲಿ ಕೇಸರಿ ಧ್ವಜ ನೆಟ್ಟು ಬಸವಣ್ಣನವರ ಕಟ್ಟೆ ನಿರ್ಮಿಸಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯವರ ಕುಮ್ಮಕ್ಕಿದೆ ಹಾಗೂ ಈ ವಿವಾದ ಬಗೆಹರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ” ಎಂದು ಆರೋಪಿಸಿದರು.

“ಕಳೆದ 20 ದಿನಗಳಿಂದ ಗ್ರಾಮದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದ್ದು, ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಯ ಜನರು ಹೋರಾಟ ನಡೆಸುತ್ತಿದ್ದರೂ ಇಲ್ಲಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಸ್ಥಳೀಯ ಶಾಸಕ ಪ್ರಭು ಚವ್ಹಾಣ ಅವರು ಗ್ರಾಮದ ಸಮಸ್ಯೆ ಕುರಿತು ಸ್ಪಂದಿಸದೇ ಮೌನವಹಿಸಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೌಡಗಾಂವ ಗ್ರಾಮದಲ್ಲಿ ಖಾಲಿ ಇರುವ ಸರ್ಕಾರಿ ಭೂಮಿಯಲ್ಲಿ 5 ಎಕರೆ ಜಮೀನು ನಮ್ಮ ಜನರ ಸಭೆ ಸಮಾರಂಭ, ಗ್ರಂಥಾಲಯ ಹಾಗೂ ಸಾಂಸ್ಕೃತಿ ಚಟುವಟಿಕೆಗಳಿಗಾಗಿ ಭೂಮಿ ಮಂಜೂರು ಮಾಡಬೇಕು. ಗ್ರಾಮದಲ್ಲಿ ಫೆ.5 ರಂದು ಡಾ.ಅಂಬೇಡ್ಕರ್ ವೃತದ ಹತ್ತಿರ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲಿಯೇ ಕೆಸರಿ ಧ್ವಜ ನೆಡಲು ಸಹಕರಿಸಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತ್ತುಗೊಳಿಸಬೇಕು. ವಿವಾದಾತ್ಮಕ ಸ್ಥಳದಲ್ಲಿ ಕೆಸರಿ ಧ್ವಜ ನೆಟ್ಟಿರುವ ಯುವಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ 2024-25 | 3,71,383 ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸುತ್ತಿರುವ ಸಿದ್ದರಾಮಯ್ಯ
ಪ್ರತಿಭಟನೆಯಲ್ಲಿ ಕೌಡಗಾಂವ್ ಗ್ರಾಮದ ದಲಿತ ಸಮುದಾಯದ ಮಹಿಳೆಯರು, ಮಕ್ಕಳು ಸೇರಿದಂತೆ ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದರು.