- ಬಡವರ ಮತಗಳಿಗೆ ಬೆಲೆ ಇಲ್ಲದಂತೆ ನಡೆದುಕೊಳ್ಳುತ್ತಿರುವ ಜಿಲ್ಲಾಡಳಿತ
- ಮೂಲ ಸೌಕರ್ಯ, ಹಕ್ಕುಪತ್ರದಲ್ಲಾಗಿರುವ ಲೋಪ ಸರಿಪಡಿಸಲು ಆಗ್ರಹ
ಮೂಲ ಸೌಕರ್ಯ ಮತ್ತು ಹಕ್ಕುಪತ್ರದಲ್ಲಿ ಆಗಿರುವ ಲೋಪ ಸರಿಪಡಿಸುವಂತೆ ಆಗ್ರಹಿಸಿ, ಮತದಾನ ಬಹಿಷ್ಕರಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 31 ದಿನ ಪೂರೈಸಿದೆ. ಆದರೂ, ತಮ್ಮತ್ತ ಸಮಸ್ಯೆಗಳನ್ನು ಆಲಿಸದ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಶುಕ್ರವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಹೊದ್ದುರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಮಾಡು ಕಾನ್ಸಿರಾಂ ನಗರದ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮತದಾನ ಬಹಿಷ್ಕರಿಸುತ್ತೇವೆಂದರೂ ಜಿಲ್ಲಾಡಳಿತ ಆ ನಿವಾಸಿಗಳತ್ತ ತಿರುಗಿಯೂ ನೋಡಿಲ್ಲವೆಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಎಂ.ಎಸ್ ಅನಂದ, “ಮೂಲ ಸೌಕರ್ಯ ಮತ್ತು ಹಕ್ಕುಪತ್ರದಲ್ಲಿ ಕಂದಾಯ ಇಲಾಖೆಯಿಂದ ಆಗಿರುವ ಲೋಪದೋಷ ಸರಿಪಡಿಸಿಕೊಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಠಾವಧಿ ಹೋರಾಟ 31 ದಿನ ಪೂರೈಸಿದೆ. ಆದರೆ, ನಮ್ಮ ಹೋರಾಟದ ಬಗ್ಗೆ ಜಿಲ್ಲಾಡಳಿತ ಈವರೆಗೂ ಗಮನಹರಿಸಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಬಡವರ ಬೇಡಿಕೆಗಳನ್ನು ಆಲಿಸಿ, ಎಷ್ಟು ದಿನದಲ್ಲಿ ಬಗೆಹರಿಸಬಹುದು ಎಂದು ಭರವಸೆ ನೀಡಬೇಕು ಎಂದು ಈಗಾಗಲೇ ಹೇಳಿಕೆ ನೀಡಿದ್ದೇವೆ. ನಿರಂತರವಾಗಿ ಒಂದು ತಿಂಗಳಿನಿಂದ ಸುಡು ಬಿಸಿಲಿನಲ್ಲಿ ಧರಣಿ ನಡೆಸುತ್ತಿದ್ದರೂ ಕೊಡಗು ಜಿಲ್ಲಾಡಳಿತವು ಬಡವರನ್ನು, ದೀನ ದಲಿತರನ್ನು, ಕೂಲಿ ಕಾರ್ಮಿಕರನ್ನು ಅತ್ಯಂತ ಹೀನಾಯವಾಗಿ ಕಾಣುತ್ತಿದೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಮೂಲ ಸೌಕರ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ
“ಬಡಜನಗಳ ಮತಕ್ಕೆ ಬೆಲೆಯೇ ಇಲ್ಲ ಎಂಬಂತೆ ಜಿಲ್ಲಾಡಳಿತ ವರ್ತಿಸುತ್ತಿದೆ. ನಾವು ಭಾರತ ದೇಶದ ಯಾವ ನಾಗರಿಕತೆಯಲ್ಲಿ ಬದುಕುತ್ತಿದ್ದೇವೆ ಎಂಬುದು ನಮಗೆ ಅನುಮಾನ ಮೂಡುತ್ತಿದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.
“ಆಡಳಿತದಲ್ಲಿರುವ ಭ್ರಷ್ಟ ಅಧಿಕಾರಿಗಳು ಬಡವರ ಜೀವನವನ್ನೇ ಬೆತ್ತಲೆ ಮಾಡಿದ್ದಾರೆ. ಅದಕ್ಕಾಗಿ ನಾವು ಇಂದು ಅರೆಬೆತ್ತಲೆ ಪ್ರತಿಭಟನೆ ಮಾಡುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿದ್ದೇವೆ” ಎಂದು ಹೇಳಿದರು.