ಅಂಕೋಲಾ: ಶಿಕ್ಷಕರ ಪ್ರಾಮಾಣಿಕ ಸೇವೆ, ಪರಿಶ್ರಮ ಮತ್ತು ಬದ್ಧತೆಯ ಫಲವಾಗಿ ಉತ್ತರ ಕನ್ನಡ ಜಿಲ್ಲೆ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮೂರನೇ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಸಹಕಾರ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅವರು ಶನಿವಾರ ಅಂಕೋಲಾದ ನಾಡವರ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಉತ್ತರ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಗಳ ಗುಣಮಟ್ಟ ಹಾಗೂ ಶಿಕ್ಷಕರ ಸೇವೆಯನ್ನು ಶ್ಲಾಘಿಸಿದ ಸಚಿವರು, ‘ಶಿಕ್ಷಕರು ಕೇವಲ ಸಂಬಳಕ್ಕಾಗಿ ಕೆಲಸ ಮಾಡುವವರಲ್ಲ. ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ. ದೇಶ ಕಟ್ಟುವಲ್ಲಿ ಸರಕಾರಿ ಶಾಲೆಗಳ ಶಿಕ್ಷಕರ ಕೊಡುಗೆ ಅಪಾರ’ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಸಾಲ-ಠೇವಣಿ ಅನುಪಾತ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಗುರಿ: ಸಿಇಒ ಡಾ. ದಿಲೀಷ್ ಶಶಿ
ಇತ್ತೀಚಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವುದು, ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ರೀತಿಯಲ್ಲಿ ಸಿದ್ಧತೆ ನಡೆಸಲು ಅನುಕೂಲವಾಗುವಂತೆ ಅಂಕೋಲಾದಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ಆಧುನಿಕ ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗುವುದು ಎಂದು ಸಚಿವ ಲಕ್ಷ್ಮಣ ಸವದಿ ಘೋಷಿಸಿದರು.
ಈ ಯೋಜನೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ನಿಧಿಯಿಂದ ₹1 ಕೋಟಿ ಹಾಗೂ ಉಳಿದ ಮೊತ್ತವನ್ನು ಶಾಸಕರ ಅನುದಾನದ ಮೂಲಕ ಒದಗಿಸಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಿಕ್ಷಕರು ಹಲವು ಅಡಚಣೆಗಳ ನಡುವೆಯೂ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯದೆ ಸಮಾಜ ನಿರ್ಮಾಣದ ಕಾರ್ಯವನ್ನು ನಿರಂತರವಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗಣ್ಯರ ಉಪಸ್ಥಿತಿ ಕಾರ್ಯಕ್ರಮದ ಆರಂಭದಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ ಕೆ. ಸೈಲ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ,
ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಡಿಡಿಪಿಐ ಲತಾ ನಾಯಕ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅವರ ಶೈಕ್ಷಣಿಕ ಸೇವೆಯನ್ನು ಗೌರವಿಸಲಾಯಿತು.





