ತೀರ್ಥಹಳ್ಳಿ, ದೇಶದಲ್ಲಿ ಎಲ್ಲಾ ಭಾಷೆ, ಧರ್ಮ, ಜಾತಿಯವರನ್ನು ಸೈದ್ಧಾಂತಿಕವಾಗಿ ಒಟ್ಟಿಗೆ ತೆಗೆದುಕೊಂಡು ಹೋಗುವ ಸಿದ್ಧಾಂತವಿರುವ ಪಕ್ಷವೆಂದರೆ ಕಾಂಗ್ರೆಸ್ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿಯವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯತಿ ಸದಸ್ಯೆಯಾಗಿ ಶ್ವೇತಾ ಬಂಡಿ ಉತ್ತಮ ಕೆಲಸ ಮಾಡಿದ್ದಾರೆ. ಸಂಘಟನೆ ಮಾಡುವ ಪೂರ್ಣ ಅರ್ಹತೆ ಅವರಿಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಸಮಾವೇಶವನ್ನು ತೀರ್ಥಹಳ್ಳಿಯಲ್ಲಿ ಮಾಡಿ ಎಂದು ಸಲಹೆ ನೀಡಿದರಲ್ಲದೆ, ಕಾಂಗ್ರೆಸ್ ಪಕ್ಷದ ಹೋರಾಟ ಒಂದು ತಲೆಮಾರಿನ ಹೋರಾಟವಾಗಬಾರದು. ಬಿಜೆಪಿಯ ಕೆಟ್ಟ ನಿಲುವಿನ ಸಿದ್ಧಾಂತದ ವಿರುದ್ಧ ಹೋರಾಟ ಅಗತ್ಯವಿದೆ. ಸೈದ್ಧಾಂತಿಕವಾಗಿ ಕಾರ್ಯಕರ್ತರಲ್ಲಿ ಗೊಂದಲವಿರಬಾರದು ಎಂದರು.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರು ಮತದಾರರನ್ನು ಬೆಂಗಳೂರಿನಿಂದ ತೀರ್ಥಹಳ್ಳಿಗೆ 204 ಬಸ್ಸುಗಳು ಕರೆತಂದಿದ್ದು, ಬಸ್ಸಿನ ಖರ್ಚು, ಮತದಾರರಿಗೆ ನೀಡುವ ಹಣಸೇರಿ 1.25 ಕೋಟಿಯಾಗಿದೆ. ಅವರನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಸಂಘಟನೆಯ ಮೂಲಕ ಅವರನ್ನು ಎದುರಿಸುವ ಕೆಲಸ ಕಾರ್ಯಕರ್ತರು ಮಾಡಬೇಕೆಂದರು.
ಬಿಜೆಪಿ ವಿರುದ್ಧ ಹೋರಾಟದಲ್ಲಿ ನಾನು ಸ್ವಲ್ಪವೂ ಹಿಂದೆ ಸರಿದಿಲ್ಲ. 1972 ರಿಂದ ಹೋರಾಟ ಮಾಡುತ್ತಿದ್ದೇನೆ. ಹೆಡಗೇವಾರ್ ಮತ್ತು ಗೋಲ್ವಾಲ್ಕರ್ ಬಂಚ್ ಆಫ್ ಥಾಟ್ಸ್ ನಲ್ಲಿ ಹರಿಜನರು ಹಿಂದುಗಳೇ ಅಲ್ಲ ಎಂದು ಬರೆದಿದ್ದಾರೆ. ಇಂತಹ ವಿಷಯಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ತಿಳಿಸುವ ಕೆಲಸ ಮಾಡಬೇಕೆಂದರು.
ಈ ಹಿಂದೆ ನಡೆದ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ಬಿಜೆಪಿಯವರು ಅದ್ದೂರಿಯಾಗಿ ವರಮಹಾಲಕ್ಷ್ಮೀ ಪೂಜೆಮಾಡಿ ಬೆಳ್ಳಿ ನಾಣ್ಯ, ಸೀರೆ, 500 ರೂಪಾಯಿಗಳನ್ನು ಹಂಚಿದ್ದರು. ಈ ವರ್ಷ ಬೆಳ್ಳಿ ನಾಣ್ಯ ಹಂಚಿಲ್ಲ ಎಂಬುದು ಬೇಸರವಾಗುತ್ತದೆ. ಇನ್ನೂ ಸಾಕಷ್ಟು ಕಾಲಾವಕಾಶವಿದೆ, ಆರಗ ಜ್ಞಾನೇಂದ್ರ ದೀಪಾವಳಿಗಾದರೂ ಹಂಚಲಿ ಎಂದು ವ್ಯಂಗ್ಯವಾಡಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ ಮಾತನಾಡಿ ಜಿಲ್ಲಾಧ್ಯಕ್ಷೆ ಸ್ಥಾನ ತೆಗೆದುಕೊಳ್ಳಲು ಮೊದಲು ಭಯವಾಗಿತ್ತು, ಕಿಮ್ಮನೆ ರತ್ನಾಕರ್, ಜಿಲ್ಲಾ ನಾಯಕರ ಬೆಂಬಲದಿಂದ ಜಿಲ್ಲಾಧ್ಯಕ್ಷೆಯಾಗಿದ್ದೇನೆ. ಕಾಂಗ್ರೆಸ್ ಪಕ್ಷದ 5 ಯೋಜನೆಗಳಿಂದ ಮಹಿಳೆಯರನ್ನು ಒಗ್ಗೂಡಿಸಲು ಸಹಕಾರಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸ್ವಂದನೆಯೂ ಸಹ ದೊರಕಿದೆ. ಎಲ್ಲಾ ತಾಲ್ಲೂಕಿನಲ್ಲಿ ಮಹಿಳೆಯ ಸಹಕಾರ ದೊರೆಯುತ್ತಿದ್ದೂ ಸಂಘಟನೆ ಮಾಡಲು ಕಷ್ಟ ಎನಿಸುವುದಿಲ್ಲ ಎಂದರು.
ಸಭೆಯಲ್ಲಿ ತೀರ್ಥಹಳ್ಳಿ ಬ್ಲಾಕ್ ನ ಅಧ್ಯಕ್ಷ ಕೆಸ್ತೂರ್ ಮಂಜುನಾಥ್, ಜಿಪಂ ಮಾಜಿ ಸದಸ್ಯರಾದ ಪದ್ಮನಾಭ್, ಬಾಳೇಹಳ್ಳಿ ಪ್ರಭಾಕರ್, ಭಾರತೀ ಪ್ರಭಾಕರ್, ಹೊಸನಗರ ಬ್ಲಾಕ್ ಮಹಿಳಾ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ತೀರ್ಥಹಳ್ಳಿ ಬ್ಲಾಕ್ ಮಹಿಳಾ ಅಧ್ಯಕ್ಷೆ ಅನ್ನಪೂರ್ಣಾ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸಚ್ಚೀಂದ್ರ ಹೆಗಡೆ ಮುಂತಾದದವರಿದ್ದರು.