ನಮಾಜ್ ಮುಗಿಸಿಕೊಂಡು ಬರುವ ಹೊತ್ತಿಗೆ ಲಕ್ಷಾಂತರ ರೂ ಹಣದ ಸಮೇತ ಗೂಡ್ಸ್ ವಾಹನವನ್ನೇ ಮಂಗಮಾಯ ಮಾಡಿದ್ದ ಪ್ರಕರಣವನ್ನ ತೀರ್ಥಹಳ್ಳಿ ಪೊಲೀಸರು ಬೇಧಿಸಿದ್ದಾರೆ.
ದಾವಣಗೆರೆ ಮೂಲದ ಸೈಯದ್ ಅಬ್ದುಲ್ಲಾ(45), ನವೀದ್ ಅಹಮದ್(40) ಹಾಗೂ ಜಾವೀದ್(42) ಬಂಧಿತ ಆರೋಪಿಗಳು.
ಮಾ.14ರಂದು ಬೆಳಗ್ಗೆ ಹೊನ್ನಾಳಿ ಬೊಂಬು ಬಜಾರ್‌ನ ಮಹಮದ್ ಇರ್ಷಾದ್, ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ ₹29,00,000ಗಳನ್ನು ತೆಗೆದುಕೊಂಡು, ಸ್ಕ್ರಾಪ್ ವ್ಯವಹಾರದ ಸಂಬಂಧ ಹೊನ್ನಾಳಿಯಿಂದ ಮಂಗಳೂರಿಗೆ ಹೊರಟಿದ್ದರು.
ಮಾರ್ಗ ಮಧ್ಯೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಂಜದಕಟ್ಟೆ ಮಸೀದಿಯ ಹತ್ತಿರ ನಮಾಜ್ ಮಾಡುವ ಸಲುವಾಗಿ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ, ಹಣವಿದ್ದ ಬ್ಯಾಗ್ ಅನ್ನು ವಾಹನದಲ್ಲಿಯೇ ಇಟ್ಟು ಮಸೀದಿಗೆ ನಮಾಜ್ ಮಾಡಲು ಹೋಗಿ ವಾಪಸ್ಸು ಬಂದು ನೋಡಿದಾಗ, ವಾಹನವು ಸ್ಥಳದಲ್ಲಿ ಇರಲಿಲ್ಲ. ಹಣ ಹಾಗೂ ಗೂಡ್ಸ್ ವಾಹನವನ್ನು ಕಳುವ ಮಾಡಲಾಗಿತ್ತು.
ಪ್ರಕರಣ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಕಳುವಾದ ನಗದು ಹಣ, ವಾಹನ ಮತ್ತು ಆರೋಪಿಗಳ ಪತ್ತೆಗಾಗಿ ಎಸ್‌ಪಿ ಮಿಥುನ್ ಕುಮಾರ್ ಜಿ. ಕೆ, ಅಡಿಷನಲ್ ಎಸ್‌ಪಿಗಳಾದ ಅನಿಲ್ ಕುಮಾರ್ ಭೂಮರಡ್ಡಿ, ಕಾರಿಯಪ್ಪ ಎ. ಜಿರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಇದನ್ನೂ ಓದಿ: ತೀರ್ಥಹಳ್ಳಿ | 15ನೇ ಮೈಲಿಗಲ್ಲು ಬಳಿ ಅಪಘಾತ; ಯುವಕರ ಕಾಲು ಮುರಿತ
ತನಿಖಾ ತಂಡವು ಹೊನ್ನಾಳಿ ಪೊಲೀಸ್ ಠಾಣೆಯ ಪಿಐ ಸುನೀಲ್ ಕುಮಾರ ಹೆಚ್, ಎಎಸ್ಐ ಹರೀಶ್ ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ ಜಗದೀಶ, ಹೇಮಾನಾಯ್ಕ್, ಸುರೇಶ್ ನಾಯ್ಕ್ ಮತ್ತು ರಾಜಶೇಖರ್ ರವರ ಸಹಕಾರದೊಂದಿಗೆ ಆಪರೇಷನ್ ನಡೆಸಿತ್ತು. ಆರೋಪಿತರಿಂದ 29 ಲಕ್ಷ ನಗದು ಹಾಗೂ ಅಂದಾಜು ಮೌಲ್ಯ ₹10,00,000ಗಳ ವಾಹನ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ ₹6,00,000 ಟೊಯೋಟಾ ಇಟಿಯೋಸ್ ಕಾರು ಸೇರಿ ಒಟ್ಟು ₹45,00,000ಗಳ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
