ಪಂಚಾಯತಿ ಗನ್ ತೋರಿಸಿ ಪಿಡಿಒಗೆ ಧಮ್ಕಿ ಹಾಕಿದ್ದ ಗ್ರಾಮ ಪಂಚಾಯತಿ ಸದಸ್ಯನನ್ನು ವಜಾಗೊಳಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾ ಪಂಚಾಯತಿ ಎದುರು ಜಿಲ್ಲೆಯ ಪಿಡಿಒಗಳು ಪ್ರತಿಭಟನೆ ನಡೆಸಿದ್ದಾರೆ. ಪಂಚಾಯತಿ ಸಿಇಒಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಅ.18ರಂದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮ ಪಂಚಾಯತಿ ಪಿಡಿಒ ವಿಶ್ವನಾಥ ರಾಠೋಡ್ ಅವರಿಗೆ ಸದಸ್ಯ ಜಾಕೀರ್ ಮನಿಯಾರ್ ಎಂಬವರು ಗನ್ ತೋರಿಸಿ ಬೆದರಿಕೆ ಹಾಕಿದ ಆರೋಪ ಕೇಳಿಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಗಾ.ಪಂ ಸದಸ್ಯ ಜಾಕೀರ್ ಮನಿಯಾರ್ ವಿರುದ್ಧ ಚಡಚಣ ಪೊಲೀಸ್ ಠಾಣೆಯಲ್ಲಿ ಪಿಡಿಒ ರಾಠೋಡ್ ದೂರು ದಾಖಲಿಸಿದ್ದರು.
ಹಣಕಾಸಿನ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದ ಹಿನ್ನಲೆ, ಪರವಾನಿಗೆ ಹೊಂದಿದ ಪಿಸ್ತೂಲ್ ಸಹಿತ ಗ್ರಾಮಪಂಚಾಯತಿಗೆ ಆಗಮಿಸಿದ್ದ ಸದಸ್ಯ ಜಾಕೀರ್ ಮನಿಯಾರ್, ಪಿಡಿಓಗೆ ಬೆದರಿಕೆ ಹಾಕಿದ್ದ. ಬೆದರಿಕೆವೊಡ್ಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.