ಬಾಲ್ಯ ವಿವಾಹ ಮಾಡುವುದು ಮತ್ತು ಅದಕ್ಕೆ ಪ್ರೋತ್ಸಾಹ ನೀಡುವ ವ್ಯಕ್ತಿಗೆ ಮತ್ತು ಹುಡುಗಿಯ ಪೋಷಕರಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, “ಬೇಸಿಗೆ ಇರುವುದರಿಂದ ಹೆಚ್ಚಿನ ಮದುವೆ ಹಾಗೂ ಸಾಮೂಹಿಕ ವಿವಾಹಗಳು ಹೆಚ್ಚಾಗಿ ನಡೆಯುತ್ತವೆ. ಹಾಗಾಗಿ ಬೀದರ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ನಡೆಯದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು” ಎಂದು ಸೂಚಿಸಿದರು.
“ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗಾಗಿದ್ದು, ಇದರ ನಿರ್ಮೂಲನೆಗಾಗಿ ವಿವಿಧ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮತ್ತು ಸಮಾಜದ ಪಾತ್ರವು ಬಹಳ ಮುಖ್ಯವಾಗಿದೆ. ಬಾಲ್ಯವಿವಾಹ ನಡೆಯುತ್ತಿದೆ ಎಂಬ ದೂರು ಕಂಡು ಬಂದ ತಕ್ಷಣ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಅದು ನಿಜವಾಗಿದ್ದರೆ ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲು ಮಾಡಬೇಕು, ಅಂದಾಗ ಮುಂದೆ ಬಾಲ್ಯ ವಿವಾಹಗಳು ನಡೆಯುವದಿಲ್ಲ ಎಲ್ಲಾ ಭಾಗಿದಾರ ಇಲಾಖೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪಾತ್ರ ಬಹಳ ಮುಖ್ಯವಾಗಿದೆ” ಎಂದು ಸೂಚನೆ ನೀಡಿದರು.
ಬಾಲಕಿಯರ ಬಾಲ ಮಂದಿರ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ದಾಖಲಾದ ಪೊಕ್ಸೊ ಪ್ರಕರಣಗಳ ಮಾಹಿತಿ, ಮಾತೃವಂದನಾ ಯೋಜನೆ, ಸಖಿಒನ್ ಸ್ಟಾಫ್, ಸ್ವಧಾರ ಗೃಹ ಸೇರಿದಂತೆ ಇತರೆ ವಿಷಯಗಳ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಅವುಗಳನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗುವುದರ ಜೊತೆಗೆ ಜಿಲ್ಲೆಯ ಹೆಚ್ಚಿನ ಪ್ರಗತಿ ಸಾಧಿಸಬೇಕು ಹಾಗೂ ದೇವದಾಸಿ ಮತ್ತು ಎಚ್ಐವಿ ಪೀಡಿತ ಮಹಿಳೆಯರಿಗೆ ನಿವೇಶನವಿದ್ದರೆ ಅವರಿಗೆ ಮನೆ ಕಟ್ಟಿಸಿಕೊಡಲು ಅವಕಾಶವಿದೆ. ಅಂತವರ ಪಟ್ಟಿ ನೀಡುವಂತೆ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರಾದ ಪ್ರಭಾಕರ್ ಮಾತನಾಡಿ, “ಬೀದರ ಜಿಲ್ಲೆಯಲ್ಲಿ 2023ರ ಏಪ್ರಿಲ್‌ನಿಂದ 2024ರ ಫೆಬ್ರವರಿವರೆಗೆ ಒಟ್ಟು 31 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ನಾಲ್ಕು ಬಾಲ್ಯ ವಿವಾಹಗಳು ನಡೆದಿದ್ದು ಅವುಗಳನ್ನು ನಡೆಸಿದವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಹಾಗೂ ಸದರಿ ಪಾಲಕರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಅವರಿಗೆ ಬಾಲ್ಯವಿವಾಹದ ಕುರಿತು ಅರಿವು ಮೂಡಿಸಿ, ಸದರಿ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರೇಣುಕಾಚಾರ್ಯರು ಸರ್ವ ಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸಿದ್ದರು : ರಾಜಶೇಖರ ಶಿವಾಚಾರ್ಯ
ಈ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಮಹೇಶ ಮೆಘಣ್ಣವರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರಜಿಯಾ ಬಳಬಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಗುರುರಾಜ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅವಿನಾಶ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸದಾಶಿವ ಬಡಿಗೇರ, ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಎನ್.ಜಿ.ಓ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.