ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಬುಳ್ಳಸಂದ್ರ ಗ್ರಾಮದಲ್ಲಿ ವಾಂತಿ ಭೇದಿ ಕಾಣಿಸಿಕೊಂಡು ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಕುಡಿದು ಏಳು ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನ ಬುಳ್ಳಸಂದ್ರದ ತಿಮ್ಮಕ್ಕ(85), ಗಿರಿಯಮ್ಮ(90), ಮಡಕಶಿರಾ ತಾಲ್ಲೂಕಿನ ಸಿದ್ದಗಿರಿ ಗ್ರಾಮದ ಕಾಟಮ್ಮ(45) ಎಂಬುವವರು ಮೃತಪಟ್ಟಿದ್ದಾರೆ. ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಂತಿ, ಭೇದಿಯಿಂದ ಬಳಲಿದ್ದವರಿಗೆ ಗ್ರಾಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಮುತ್ತರಾಯಸ್ವಾಮಿ , ಕರಿಯಮ್ಮ ಜಾತ್ರೆಗಾಗಿ ಮನೆಯಲ್ಲಿ ಆಡುಗೆ ಮಾಡಿದ್ದರು. ಈ ಆಹಾರವನ್ನು ಸೇವಿಸಿ ವಾಂತಿ ಭೇದಿ ಕಾಣಿಸಿಕೊಂಡಿದೆ.
ಗ್ರಾಮದ ದೇವರುಗಳಿಗೆ ಹರಿಸೇವೆಗಾಗಿ ಗ್ರಾಮದ ದೇವಾಲಯದ ಬಳಿ ಅನ್ನ ಸಾಂಬರ್ , ಹೆಸರು ಬೆಳೆ , ಪಾಯಸವನ್ನು ಮಾಡಲಾಗಿತ್ತು ಶನಿವಾರ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಶೇ.90 ರಷ್ಟು ಜನರು ಸೂತಕದ ಹಿನ್ನೆಲೆಯಲ್ಲಿ ಪ್ರಸಾದವನ್ನು ಸೇವಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.

ಗ್ರಾಮದಲ್ಲಿ ತಾತ್ಕಾಲಿಕವಾಗಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಸ್ಥಳಕ್ಕೆ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಾ.ಪಂ ಇಒ ಲಕ್ಷ್ಮಣ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಗ್ರೇಡ್ 2 ತಹಶೀಲ್ದಾರ್ ನಂದಿನಿ, ತಾ ಪಂ ಯೋಜನಾಧಿಕಾರಿ ಮಧುಸೂದನ್. ಪಿಡಿಒ ದಯಾನಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
