ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್‌ಗೆ ಒಳಗಾಗಿದ್ದ ಮೂವರು ಬಾಣಂತಿಯರು ಮೂರು ದಿನಗಳೊಳಗೆ ಸಾವನ್ನಪ್ಪಿರುವ ದಾರುಣ ಘಟನೆಗಳು ನಡೆದಿವೆ. ಬಾಣಂತಿಯರ ಸಾವಿಗೆ ವೈದ್ಯರ ನಿರ್ಲಕ್ಷ್ಯ ಅಥವಾ ಔಷಧ ರಿಯಾಕ್ಷನ್ ಕಾರಣವೆಂದು ಶಂಕಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.
ಕಳೆದ ವಾರ, ನವೆಂಬರ್ 9ರಂದು ಜಿಲ್ಲಾಸ್ಪತ್ರೆಯಲ್ಲಿ 7 ಮಂದಿ ಗರ್ಭಿಣಿಯರಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಇವರಲ್ಲಿ, ಇಬ್ಬರು ನವೆಂಬರ್ 10ರಂದು ಸಾವನ್ನಪ್ಪಿದ್ದಾರೆ. ಬಳಿಕ, ಉಳಿದ 5 ಮಂದಿ ಬಾಣಂತಿಯರನ್ನು ವಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದಾಗ್ಯೂ, ಓರ್ವ ಬಾಣಂತಿ ಮೂರು ದಿನಗಳ ಬಳಿಕ ಸಾವನ್ನಪ್ಪಿದ್ದಾರೆ.
ಮೃತರನ್ನು ನಂದಿನಿ, ಲಲಿತಮ್ಮ ಹಾಗೂ ರೋಜಾ ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣಗಳು ಇನ್ನೂ ಗೊತ್ತಾಗಿಲ್ಲ. ಪ್ರಕರಣದ ತನಿಖೆಗಾಗಿ ಸರ್ಕಾರ ಮೂವರು ತಜ್ಞ ವೈದ್ಯರ ತಂಡವನ್ನು ರಚಿಸಿದೆ. ತಂಡವು ತನಿಖೆ ನಡೆಸುತ್ತಿದೆ.
ಮೂರು ದಿನಗಳ ಅಂತರದಲ್ಲೇ ಮೂವರು ಬಾಣಂತಿಯರು ಸಾವನ್ನಪ್ಪಿರುವುದು ಆತಂಕ ಹುಟ್ಟುಹಾಕಿದೆ. ಆಸ್ಪತ್ರೆಗೆ ಸಂಸದ ಇ ತುಕಾರಾಂ ಭೇಟಿ ನೀಡಿದ್ದು, “ಬಾಣಂತಿಯರ ಸಾವು ನೋವುಂಟುಮಾಡಿದೆ. ತನಿಖಾ ತಂಡ ತನಿಖೆ ನಡೆಸುತ್ತಿದೆ. ವರದಿ ಬಂದ ಬಳಿಕ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಪರಿಹಾರ ನೀಡಲು ಸರ್ಕಾರದೊಂದಿಗೆ ಚರ್ಚಿಸುತ್ತೇನೆ” ಎಂದು ಹೇಳಿದ್ದಾರೆ.