ಇತ್ತೀಚೆಗೆ ಕೊಡಗಿನಲ್ಲಿ ಎಸ್ಟೇಟ್ ಕಾರ್ಮಿಕನನ್ನು ಕೊಂದಿದ್ದ ಹುಲಿಯನ್ನು ಶುಕ್ರವಾರ ಅರಣ್ಯ ಅಧಿಕಾರಿಗಳು ಸೆರೆಹಿಡಿದ್ದಾರೆ. 70ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಹುಲಿಯನ್ನು ಸೆರೆಹಿಡಿದಿದ್ದಾರೆ.
ಗುರುವಾರ, ವಿರಾಜಪೇಟೆ ತಾಲೂಕಿನ ನಿಟ್ಟೂರು ಗ್ರಾಮದ ಕೃಷಿ ಜಮೀನಿನಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಮೊಹಿಸಿರ್ ರೆಹಮಾನ್ (50) ಎಂಬವರು ಹುಲಿ ದಾಳಿಗೆ ಬಲಿಯಾಗಿದ್ದರು. ಈ ಘಟನೆಯಿಂದಾಗಿ, ರೈತರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಹುಲಿಯನ್ನು ತಕ್ಷಣವೇ ಹಿಡಯುವಂತೆ ಒತ್ತಾಯಿಸಿದ್ದರು.
ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯಾಧಿಕಾರಿಗಳು ಹುಲಿಯನ್ನು ಹಿಡಿದಿದ್ದಾರೆ. “ನಾವು ಹುಲಿ ಅಡ್ಡಾಡಿದ್ದ ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಇರಿಸಿದ್ದೇವೆ. ಈಗ ಸೆರೆ ಹಿಡಿದಿರುವ ಹುಲಿಗೂ ನಿನ್ನೆ ಕಾರ್ಮಿಕನ ಮೇಲೆ ದಾಳಿ ನಡೆಸಿದ್ದ ಹುಲಿಯ ಛಾಯಾಚಿತ್ರಕ್ಕೂ ತಾಳೆಯಾಗುತ್ತಿವೆ” ಎಂದು ವಿರಾಜಪೇಟೆ ಡಿಸಿಎಫ್ ಜಗನ್ನಾಥ್ ಖಚಿತಪಡಿಸಿದ್ದಾರೆ.
“ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಲ್ಲಾಳದಲ್ಲಿ ಹುಲಿ ಸೆರೆ ಸಿಕ್ಕಿದೆ. 11 ವರ್ಷದ ಹುಲಿಯ ಎಡಗಾಲಿನಲ್ಲಿ ಗಾಯದ ಗುರುತುಗಳಿದ್ದು, ಕೂರ್ಗಳ್ಳಿಯಲ್ಲಿರುವ ವನ್ಯಜೀವಿ ರಕ್ಷಣಾ ಕೇಂದ್ರದಲ್ಲಿ ಹುಲಿಯನ್ನು ಇರಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಮುಕ್ತಿ ನೀಡುವಂತೆ ಆಗ್ರಹಿಸಿ ಅರಣ್ಯದಂಚಿನ ಹಳ್ಳಿಗಳ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಸಿಎಫ್ ಮನೋಜ್ ತ್ರಿಪಾಟಿ, ವಿರಾಜಪೇಟೆ ಶಾಸಕ ಎಎಸ್ ಪೊನ್ನಣ್ಣ ಮತ್ತಿತರ ಅಧಿಕಾರಿಗಳು ಘಟನೆ ನಡೆಸಿದ್ದ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತ ಕಾರ್ಮಿಕನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಮೃತ ಕಾರ್ಮಿಕನ ಪತ್ನಿಗೆ ಮಾಸಿಕ 4000 ಪಿಂಚಣಿ ನೀಡುವುದಾಗಿ ಜಗನ್ನಾಥ್ ಹೇಳಿದ್ದಾರೆ.