ಬರಗೂರು ರಾಮಚಂದ್ರಪ್ಪ ನಮ್ಮ ಜಿಲ್ಲೆಯವರು ಎಂಬ ಹೆಮ್ಮೆ ಇದೆ. ಅವರ ಸಿನಿಮಾಗಳು ನಮ್ಮ ಊರಿನ ಸುತ್ತಾಮುತ್ತ ಚಿತ್ರೀಕರಣವಾಗುವಾಗ ನಮ್ಮ ಜಿಲ್ಲೆಯವರೆಂದು ತಿಳಿದು ಸಂತೋಷವಾಯಿತು ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ನಡೆದ ಬರುಗೂರು ರಾಮಚಂದ್ರಪ್ಪ ಅವರ ‘ಕಾಗೆ ಕಾರುಣ್ಯದ ಕಣ್ಣು’ ಪುಸ್ತಕ ಜನಾರ್ಪಣೆ ಮಾಡಿ ಮಾತಾನಾಡಿದರು.
“ಸಮಾಜಕ್ಕೆ, ತುಳಿತ್ತಕೊಳಗಾದ ಶ್ರಮಿಕರಿಗೆ ಉತ್ತಮ ಜೀವನ ಮಟ್ಟ ಸುಧಾರಿಸಲು ಏನು ಬೇಕು ಎಂಬುದರ ಕಡೆ ಗಮನಹರಿಸುವಂತೆ ಅವರ ಲೇಖನಗಳು ಇವೆ. ಅವರಿಗೆ ಸ್ವಯಂ ಕೃಷಿಯಿಂದ ಪ್ರಶಸ್ತಿಗಳು ಬಂದಿವೆ. ಯಾವುದೇ ಲಾಬಿ ಮಾಡಿಲ್ಲ. ಸ್ವಾರ್ಥಕ್ಕೋಸ್ಕರ ವಿಕೃತ ಮನಸ್ಸಿನಿಂದ ಕೆಲವರು ಲೇಖನಗಳನ್ನು ಬರೆಯುವವರು ಇದ್ದಾರೆ. ಆದರೆ, ಬರಗೂರು ಅವರು ಎಂದಿಗೂ ಆ ರೀತಿ ಮಾಡಲಿಲ್ಲ” ಎಂದರು.
“ಸಮಾಜದ ಬದಲಾವಣೆಗೆ ಪೂರಕವಾಗಿ ಬರೆದಿದ್ದಾರೆ. ಸಹಕಾರಿ ಆಂದೋಲನ ಹಲಸಿನಹಣ್ಣು ಇದ್ದಹಾಗೆ ಅದನ್ನು ತೆಗೆದು ನೋಡಿದಾಗ ಮಾತ್ರ ಒಳ್ಳೆಯ ತೋಳೆಗಳು ಸಿಗುತ್ತವೆ. ಗ್ರಾಮೀಣ ಭಾಗದ ಜನರಿಗೆ ಸಮಯಕ್ಕೆ ಸರಿಯಾಗಿ ಸಹಕಾರ ಮಾಡುವ ಸಹಕಾರಿ ಆಂದೋಲನವಾಗಿದೆ. ಬರಗೂರು ರಾಮಚಂದ್ರಪ್ಪ ಅವರು ವಿಧಾನಪರಿಷತ್ ಸದಸ್ಯರಾದರೆ ನಿಮಗಿಂತ ನೂರುಪಟ್ಟು ಹೆಚ್ಚು ನಾನು ಖುಷಿಪಡುತ್ತೇನೆ. ಅದಕ್ಕೆ ಕಾಲ ಕೂಡಿಬರಲಿ” ಎಂದು ಹೇಳಿದರು.
ಪುಸ್ತಕದ ಲೇಖಕ ಬರಗೂರು ರಾಮಚಂದ್ರಪ್ಪ ಮಾತನಾಡಿ, “ನಾನು ಬರೆಯಲು ಶುರು ಮಾಡಿದ್ದು ನವೋದಯ ಕಾಲದಲ್ಲಿ. ಆಗ ರಮ್ಯವಾದ ಬೆಟ್ಟ ಗುಡ್ಡ, ಕಾಡಿನಬಗ್ಗೆ ಬರೆಯುತ್ತಿದ್ದರು. ನಮ್ಮ ಊರಲ್ಲಿ ಎಲ್ಲಿ ಬೆಟ್ಟಗುಡ್ಡಗಳನ್ನು ಹುಡುಕಲಿ. ಆಗ ನನಗೆ ಕಂಡಿದ್ದು ಕಾಗೆ, ಗುಬ್ಬಚ್ಚಿಗಳು ಮಾತ್ರ. ನನಗೆ ಪರ್ಯಾಯ ಚಿಂತನೆಗೆ ಪ್ರೇರಣೆ ಆಗಿದ್ದೇ ನಮ್ಮ ಬರಗೂರು ಮತ್ತು ಶಿರಾ, ಮಧುಗಿರಿ, ಪಾವಗಡದ ಕೆಲ ಭಾಗಗಳು” ಎಂದು ಹೇಳಿದರು.
“ನಾನು ಕಾಗೆಯ ಬಳಗ ಎನ್ನುವಂತೆ ಕಾಗೆಯ ಕಾರುಣ್ಯದಲ್ಲಿ ಬುದ್ಧನನ್ನು ಹುಡುಕಿದೆ. ಇಂದು ಶ್ರೇಷ್ಠತೆಯ ಸೊಕ್ಕು ಪ್ರತಿಭೆಗಳ ಭ್ರೂಣಹತ್ಯೆ ಮಾಡುತ್ತಿದೆ. ಶ್ರೇಷ್ಟತೆಯ ಶೋಧ ಮಾಡಿದಾಗ ಅದು ಯಾವ ಮಟ್ಟದ ಶ್ರೇಷ್ಠವೆಂದು ಹೊರಟಾಗ ಮೋಕ್ಷ ಸಿಗುತ್ತದೆ. ಆದರೆ, ಇಂದಿನ ಶ್ರೇಷ್ಠತೆ ವ್ಯಸನ ಅನ್ನುವುದಕ್ಕಿಂತ ಸೊಕ್ಕಿನದು” ಎಂದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಶಾಲೆ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ; ಒಂದೇ ದಿನದಲ್ಲಿ ಅಧಿಕಾರಿಗಳ ಭೇಟಿ
“ಭಿನ್ನಾಭಿಪ್ರಾಯಗಳನ್ನು ಭಾಷಿಕ ಹಲ್ಲೆಯಾಗಿ ರೂಪಿಸುತ್ತಿದ್ದಾರೆ. ಸಂವಾದವನ್ನು ನಾಶಮಾಡುವ ರೀತಿಯಲ್ಲಿ ಧಾರ್ಮಿಕ ಮೂಲಭೂತವಾದ ಬೆಳೆಯುತ್ತಿದೆ. ನನ್ನ ಜೀವನದಲ್ಲಿ ಅತ್ಯುತ್ತಮ ಸಂವಾದಗಳಿಗೆ ಉದಾಹರಣೆ ಎಂದರೆ ಗಾಂಧೀಜಿ-ಗೋರಾ, ಮತ್ತು ಗಾಂದೀಜಿ-ಡಾ. ಬಿ ಆರ್ ಅಂಬೇಡ್ಕರ್ ನಡುವೆ ನಡೆದ ಸಂವಾದಗಳು. ದ್ವೇಷೋತ್ಪಾದನೆ ಮತ್ತು ಭಯೋತ್ಪಾದನೆ ದೊಡ್ಡ ಪಿಡುಗುಗಳು. ಇಂದು ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ನಡೆಯುತ್ತಿದೆ” ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರ ದೊರೆರಾಜ್, ನಟ ಸುಂದರ್ ರಾಜ್, ಲೇಖಕ ಡಾ. ರಾಜಪ್ಪ ದಳವಾಯಿ, ಕಸಾಪ ಮಾಜಿ ಅಧ್ಯಕ್ಷೆ ಬಾ ಹ ರಮಾಕುಮಾರಿ, ಆಕಾಂಕ್ಷ್ ಬರಗೂರ್, ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಹಳ್ಳಿ , ಡಿವೈಎಫ್‌ಐ ರಾಘವೇಂದ್ರ, ನಾಗೇಂದ್ರ, ನಾಗಭೂಷಣ ಬಗ್ಗನಾಡು, ನಿಕೇತ್ ರಾಜ್ ಮೌರ್ಯ ಇದ್ದರು.