ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಸೆಪ್ಟೆಂಬರ್ 21ರಂದು ತಿಪಟೂರಿನಲ್ಲಿ ಕರ್ನಾಟಕ ಮಾದಿಗ ದಂಡೋರ ಹೋರಾಟ ಸಮಿತಿಯಿಂದ ಬೃಹತ್ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಜಿಪಂ ಸದಸ್ಯ ಕೆ. ಎಂ. ಶಾಂಚಪ್ಪ ಹೇಳಿದರು.
ತಿಪಟೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಳಮೀಸಲಾತಿ ಜಾರಿಗೊಳಿಸಬೇಕು. ಮೂರು ದಶಕಗಳ ಹೋರಾಟದ ಫಲವಾಗಿ ಸಾಮಾಜಿಕ ನ್ಯಾಯದ ಪರವಾಗಿರುವ ಒಳಮೀಸಲಾತಿ ಜಾರಿಗೆ ಸುರ್ಪೀಂ ಕೋರ್ಟ್ ಅನುಮತಿ ನೀಡಿದೆ. ರಾಜ್ಯಸರ್ಕಾರಗಳು ಒಳಮೀಸಲಾತಿ ಜಾರಿಗೆ ಅಧಿಕಾರ ಹೊಂದಿರುವುದಾಗಿ ತಿಳಿಸಿದೆ ,
ಎಂದು ಕೋರ್ಟ್ ಆದೇಶ ನೀಡಿದರೂ ಸಹ , ಸಾಮಾಜಿಕ ನ್ಯಾಯದ ಪರ ಎಂದು ರಾಜ್ಯದ ಜನ ನಂಬಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿರುವುದು ಖಂಡನೀಯ. ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 21ರಂದು ತಿಪಟೂರಿನಲ್ಲಿ ಬೃಹತ್ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ತಿಪಟೂರು ನಗರದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿ ತಾಲೂಕು ಕಚೇರಿಮುಂದೆ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ, ನಂತರ ತಿಪಟೂರು ಶಾಸಕ ಕೆ.ಷಡಕ್ಷರಿಯವರಿಗೆ ಮನವಿ ಪತ್ರಸಲ್ಲಿಸಲಾಗುವುದು ಎಂದು ತಿಳಿಸಿದರು.
ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ ಮಾತನಾಡಿ ದಲಿತರ ಪರವಾದ ಕಾಂಗ್ರೇಸ್ ಸರ್ಕಾರ ಎಂದು ಬಿಂಬಿಸಿಕೊಳ್ಳುತ್ತಿರುವ ರಾಜ್ಯಸರ್ಕಾರ ದಲಿತ ವಿರೋಧಿಯಾಗಿ ವರ್ತಿಸುತ್ತಿದೆ, ಒಳಮೀಸಲಾತಿ ಜಾರಿಗೊಳಿಸಲು,ಆಂದ್ರಪ್ರದೇಶ,ತೆಲಂಗಾಣ, ಪಂಜಾಬ್ ,ಹರಿಯಾಣ, ಸರ್ಕಾರಗಳು ಮುಂದಾಗಿವೆ, ಆದರೆ ಚುನಾವಣಾ ಪೂರ್ವದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಭರವಣೆ ನೀಡಿದ ರಾಜ್ಯಸರ್ಕಾರ, ಅಧಿಕಾರಕ್ಕೆ ಬಂದ ತಕ್ಷಣ ಮಾತಿಗೆ ತಪ್ಪಿದೆ,ಭೇಷರತ್ ಒಳಮೀಸಲಾತಿ ಜಾರಿಗೊಳಿಸಿದರೆ ರಾಜ್ಯಸರ್ಕಾರದ ವಿರುದ್ದ ಉಗ್ರಹೋರಾಟ ಮಾಡಬೇಕಾಗುತ್ತದೆ, ಮುಂದಿನ ಚುನಾವಣೆಗಳಲ್ಲಿ ಮಾದಿಗ ಜನಾಂಗದ ಶಕ್ತಿಯನ್ನು ತೋರಿಸಬೇಕಾಗುತ್ತದೆ, . ರಾಜ್ಯಸರ್ಕಾರ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪೆದ್ದಿಹಳ್ಳಿ ನರಸಿಂಹಯ್ಯ, ಗಾಂಧಿನಗರ ಬಸವರಾಜು, ಬಿಳಿಗೆರೆ ಚಂದ್ರಶೇಖರ್, ಈಚನೂರು ಸೋಮಶೇಖರ್, ಕುಮಾರ್ ಇನ್ನಿತರರು ಇದ್ದರು.
