ಕೇಂದ್ರ ಸರ್ಕಾರ ಉಂಡೆ ಕೊಬ್ಬರಿಗೆ ಬೆಂಬಲ ಬೆಲೆಯಾಗಿ ಕೆ.ಜಿಗೆ ಒಂದು ರೂಪಾಯಿ ಹೆಚ್ಚಳ ಮಾಡಿ ರೈತರಿಗೆ ಅವಮಾನಗೊಳಿಸಿದೆ. ಇದರ ವಿರುದ್ಧ ಜನವರಿ 23 ರಂದು ತಿಪಟೂರು ಆಡಳಿತ ಸೌಧದದ ಎದುರು ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಜಯಾನಂದಯ್ಯ ತಿಳಿಸಿದ್ದಾರೆ.
ತಿಪಟೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಂಡೆ ಕೊಬ್ಬರಿಗೆ ಉತ್ಪಾದನಾ ವೆಚ್ಚ 18638 ತಗಲಿದೆ. ಇದರ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿಬೇಕು ಎಂದು ರೈತರು ನಿರಂತರವಾಗಿ ಒತ್ತಾಯಿಸುತ್ತಾ ಬಂದರು, ಈ ಬೇಡಿಕೆ ಪರಿಗಣಿಸದೆ 2024 – 25 ಉಂಡೆ ಕೊಬ್ಬರಿ ಬೆಂಬಲ ಬೆಲೆಯನ್ನು 1 ಕೆ. ಜಿಗೆ ಕೇವಲ 1 ರೂಪಾಯಿ ಹೆಚ್ಚಿಸಿ ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಆರೋಪಿಸಿದರು.

ರೈತ ಮುಖಂಡ ತಿಮ್ಲಾಪುರ ದೇವರಾಜ್ ಮಾತನಾಡಿ ರೈತರು ಬೆಳೆಯುವ ಬೆಳೆಗಳ ಉತ್ಪಾದನಾ ವೆಚ್ಚ ದುಪ್ಪಟ್ಟಾಗುತ್ತಿದೆ. ಉತ್ಪಾದನಾ ವೆಚ್ಚಕ್ಕೆ ಆಧಾರವಾಗಿ ಬೆಂಬಲ ಬೆಲೆ ನೀಡುತ್ತಿಲ್ಲ. ಸರ್ಕಾರ ಬಹು ಸಂಖ್ಯಾತರ ಹಿತ ಮರೆತು, ಕಾರ್ಪೋರೇಟ್ ಶಕ್ತಿಗಳ ಪರ ಕೆಲಸ ಮಾಡುತ್ತಿದೆ. ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ನೀಡದೆ 1 ರೂಪಾಯಿ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ರೈತರನ್ನು ಕೇಂದ್ರ ಸರ್ಕಾರ ಅಣಕಿಸಿದೆ ಎಂದು ಆರೋಪಿಸಿದರು.
ಬೆಳೆ ಕಾವಲು ಸಮಿತಿ ಮುಖಂಡ ಬಿಳಿಗೆರೆ ಪಾಳ್ಯ ನಾಗೇಶ್ ಮಾತನಾಡಿ ದೇಶದಲ್ಲಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು ಹಾಗೂ ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ಅಖಿಲ ಭಾರತ ರೈತ ಸಂಯುಕ್ತ ಹೋರಾಟ ನಾಯಕ ಜಗಜೀತ್ ಸಿಂಗ್ ದಲೈವಾಲ ಹಾಗೂ ರೈತ ಮುಖಂಡರು ನಡೆಸುತ್ತಿರುವ ಹೋರಾಟಕ್ಕೆ ನಾವೆಲ್ಲ ಬೆಂಬಲಿಸಿ ತಿಪಟೂರು ಆಡಳಿತ ಸೌಧದ ಮುಂಭಾಗ ಜನವರಿ 23 ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ತಾಲೂಕಿನ ರೈತಪರಸಂಘಟನೆಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ನಮ್ಮ ಹೋರಾಟಕ್ಕೆ,ಬೆಲೆ ಕಾವಲು ಸಮಿತಿ, ವಕೀಲರ ಸಂಘ, ರವಾನೆದಾರರ ಸಂಘ, ವರ್ತಕರ ಸಂಘಬಗರ್ ಹುಕುಂ ಹೋರಾಟ ಸಮಿತಿ, ಭಾರತೀಯ ವೈದ್ಯಕೀಯ ಸಂಘ, ಕಲ್ಪತರು ವಿದ್ಯಾ ಸಂಸ್ಥೆ ಆಡಳಿತ ಮಂಡಳಿ, ನಾಗರೀಕ ಜಾಗೃತಿ ಹಾಗೂ ಹಿತರಕ್ಷಣಾ ಸಮಿತಿ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ,ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ,ಜೀವವಿಮಾ ಪ್ರತಿನಿಧಿಗಳ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಭಾಗವಹಿಸುತ್ತಿವೆ ಎಲ್ಲಾರೈತರು ಭಾಗವಹಿಸಿ ಹೋರಾಟ ಬೆಂಬಲಿಸಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬೆಲೆ ಕಾವಲು ಸಮಿತಿ ರಾಜ್ಯ ಕಾರ್ಯದರ್ಶಿ ಶ್ರಿಕಾಂತ್ ಕೆಳಹಟ್ಟಿ, ಸೌಹಾರ್ದ ತಿಪಟೂರು ಮುಖಂಡ ಅಲ್ಲಾ ಭಕ್ಷು ,ರೈತ ಮುಖಂಡ ಸಿದ್ದಪ್ಪ ಬಳುವನೇರಲು,ರೈತ ಮುಖಂಡ ಯೋಗನಂದಸ್ವಾಮಿ ,ಜಯನಂದಯ್ಯ,ತಿಮ್ಲಪುರದೇವರಾಜು,ರಂಗಾಪುರ ಚನ್ನಬಸವಣ್ಣ,ನಾಗೇಶ್ ಬಿಳಿಗೆರೆಪಾಳ್ಯ, ತಡಸೂರು ನಾಗರಾಜು ಬೆಳೂರನಹಳ್ಳಿ ಚನ್ನಬಸವಯ್ಯ,ರವೀಂದ್ರ ಕುಮಾರ್,ದೇವಾನಂದ್ ,ರಾಜಮ್ಮ ,ಸತೀಶ್ ಎಸ್.ಎಫ್ ಇದ್ದರು.
